ಚಳಿಗೆ ಒಂದೇ ವಾರದಲ್ಲಿ ಕಾನ್ಪುರದ 98 ಜನ ಸಾವು: ಹೃದಯಾಘಾತದಿಂದ ಮರಣ; ನೂರಾರು ಮಂದಿ ಆಸ್ಪತ್ರೆಗೆ

By Kannadaprabha NewsFirst Published Jan 9, 2023, 8:24 AM IST
Highlights

ಚಳಿಗೆ ಒಂದೇ ವಾರದಲ್ಲಿ ಕಾನ್ಪುರದ 98 ಜನ ಬಲಿಯಾಗಿದ್ದು, ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಅಲ್ಲದೆ, ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಳಿಗೆ ಉತ್ತರ ತತ್ತರಿಸಸುತ್ತಿದ್ದು, 480 ರೈಲು, 25 ವಿಮಾನ ಸಂಚಾರ ವ್ಯತ್ಯಯವಾಗಿದೆ.

ನವದೆಹಲಿ: ಕಳೆದ 15 ದಿನಗಳಿಂದ ಉತ್ತರ ಭಾರತವನ್ನು ಆವರಿಸಿರುವ ಭಾರಿ ಚಳಿ ಮತ್ತು ಮಂಜು ಮುಸುಕಿದ ವಾತಾವರಣವು ಸದ್ದಿಲ್ಲದೆ ನೂರಾರು ಜನರ ಪ್ರಾಣ ಬಲಿ ಪಡೆದಿದೆ. ಉತ್ತರಪ್ರದೇಶದ ಕಾನ್ಪುರವೊಂದರಲ್ಲೇ ಕೇವಲ ಒಂದು ವಾರದ ಅವಧಿಯಲ್ಲಿ ಭಾರಿ ಚಳಿಯ ಕಾರಣ 98 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಾನ್ಪುರ ನಗರದ (Kanpur City) ಎಲ್‌ಪಿಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ನೀಡಿರುವ ವರದಿ (Report) ಅನ್ವಯ ಕಳೆದೊಂದು ವಾರದಲ್ಲೇ ನಗರದಲ್ಲಿ 98 ಜನರು ಹೃದಯಾಘಾತ (Heart Attack) ಮತ್ತು ಮೆದುಳಿನ (Brain) ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ. ಇನ್ನು ಕಾನ್ಪುರದ ಲಕ್ಷ್ಮೀಪತ್‌ ಸಿಂಘಾನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆಸ್ಪತ್ರೆ ನೀಡಿರುವ ಮಾಹಿತಿ ಅನ್ವಯ ಗುರುವಾರ ಒಂದೇ ದಿನ 723 ರೋಗಿಗಳು ಹೃದಯ ಸಂಬಂಧಿ ಸಮಸ್ಯೆ ವಿಷಯದಲ್ಲಿ ತುರ್ತು (Emergency) ಮತ್ತು ಹೊರರೋಗಿಗಳ ವಿಭಾಗದಲ್ಲಿ (Outpatient Department) ಚಿಕಿತ್ಸೆ ಪಡೆದಿದ್ದಾರೆ.

ನಗರದಲ್ಲಿ ಕಳೆದ 15 ದಿನಗಳಿಂದ ಕನಿಷ್ಠ ಉಷ್ಣಾಂಶ 4 ರಿಂದ 6 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ತೀವ್ರ ಚಳಿಯಿಂದಾಗಿ ರಕ್ತದೊತ್ತಡದಲ್ಲಿ ಏರುಪೇರಾಗಿ, ರಕ್ತ ಹೆಪ್ಪುಗಟ್ಟಿ ಮಿದುಳು ಹಾಗೂ ಹೃದಯಾಘಾತ ಸಂಭವಿಸುತ್ತದೆ. ಚಳಿಯಿಂದಾಗಿ ಕೇವಲ ವೃದ್ಧರಷ್ಟೇ ಅಲ್ಲದೇ, ಮಧ್ಯವಯಸ್ಕರಿಗೂ ಹೃದಯ, ಮಿದುಳು ಆಘಾತ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ: ಚಳಿಗೆ ಥರಗುಟ್ಟಿದ ಉತ್ತರ ಭಾರತ: ದೆಹಲಿಯಲ್ಲಿ 3 ಡಿಗ್ರಿ ಉಷ್ಣಾಂಶ

ಭಾರೀ ಚಳಿ, ಮಂಜು:
ಈ ನಡುವೆ ಭಾನುವಾರವೂ ಜಮ್ಮು ಮತ್ತು ಕಾಶ್ಮೀರ, ದೆಹಲಿ, ಪಂಜಾಬ್‌, ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರೀ ಕುಸಿದಿದ್ದು ಸಾಮಾನ್ಯ ಜನಜೀವನದ ಮೇಲೆ ವ್ಯತ್ಯಯ ಬೀರಿದೆ. ಮಂಜು ಮುಸುಕಿದ ವಾತಾವರಣವಿರುವುದರಿಂದ ಗೋಚರತೆ ಪ್ರಮಾಣ ಭಾರೀ ಇಳಿಕೆಯಾಗಿತ್ತು. ಉತ್ತರ ಪ್ರದೇಶದ ಆಗ್ರಾ, ಪಂಜಾಬ್‌ನ ಭಠಿಂಡಾದಲ್ಲಿ ಗೋಚರತೆಯು ಶೂನ್ಯಕ್ಕೆ ತಲುಪಿತ್ತು. ಪರಿಣಾಮ ಭಾನುವಾರ 480ಕ್ಕೂ ಹೆಚ್ಚು ರೈಲುಗಳು ಓಡಾಟದಲ್ಲಿ ಏರುಪೇರಾಗಿದೆ. ಜೊತೆಗೆ 25 ವಿಮಾನಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ.

ಕುಸಿತ ಉಷ್ಣಾಂಶ:
ಭಾನುವಾರ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಮೈನಸ್‌ 3.4 ಡಿಗ್ರಿ ಸೆಲ್ಶಿಯಸ್., ಪಹಲ್ಗಾಮ್‌ನಲ್ಲಿ ಮೈನಸ್‌ 2.8 ಡಿಗ್ರಿ ಸೆಲ್ಶಿಯಸ್, ಶ್ರೀನಗರದಲ್ಲಿ ಮೈನಸ್‌ 1 ಡಿಗ್ರಿ ಸೆಲ್ಶಿಯಸ್, ಖಾಸಿಗುಂಡ್‌ನಲ್ಲಿ ಮೈನಸ್‌ 1.3 ಡಿಗ್ರಿ ಸೆಲ್ಶಿಯಸ್, ಕೊಕರ್‌ನಾಗ್‌ನಲ್ಲಿ ಮೈಸನ್‌ 1.6 ಡಿಗ್ರಿ ಸೆಲ್ಶಿಯಸ್, ಕುಪ್ವಾರದಲ್ಲಿ ಮೈನಸ್‌ 0.4 ಡಿಗ್ರಿ ಸೆಲ್ಶಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಹರ್ಯಾಣದ ಹಿಸ್ಸಾರ್‌ನಲ್ಲಿ 1.4 ಡಿಗ್ರಿ ಸೆಲ್ಶಿಯಸ್ ಪಂಜಾಬಿನ ಅದಮ್‌ಪುರದಲ್ಲಿ 2.8 ಡಿಗ್ರಿ ಸೆಲ್ಶಿಯಸ್, ರಾಜಸ್ಥಾನದ ಚುರುನಲ್ಲಿ ಮೈನಸ್‌ 0.5 ಡಿಗ್ರಿ ಸೆಲ್ಶಿಯಸ್, ಪಿಲಾನಿಯಲ್ಲಿ 1.5 ಡಿಗ್ರಿ ಸೆಲ್ಶಿಯಸ್, ಮಧ್ಯಪ್ರದೇಶದ ನೌಗಾಂಗ್‌ನಲ್ಲಿ ಮೈನಸ್‌ 1 ಡಿಗ್ರಿ ಸೆಲ್ಶಿಯಸ್, ಮತ್ತು ಉಮರಿಯಾದಲ್ಲಿ 1.5 ಡಿಗ್ರಿ ಸೆಲ್ಶಿಯಸ್, ದೆಹಲಿಯಲ್ಲಿ 1.4 ಡಿಗ್ರಿ ಸೆಲ್ಶಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ.

ಇದನ್ನೂ ಓದಿ: ಉತ್ತರ ಭಾರತದಲ್ಲಿ ಮುಂದುವರೆದ ಮೈಕೊರೆವ ಚಳಿ: ದಿಲ್ಲಿಯಲ್ಲಿ 1.8 ಡಿಗ್ರಿ ಉಷ್ಣಾಂಶ

ಸಾವಿಗೆ ಏನು ಕಾರಣ..?
ತೀವ್ರ ಚಳಿಯಿಂದ ರಕ್ತದೊತ್ತಡದಲ್ಲಿ ಏರುಪೇರಾಗುತ್ತಿದೆ. ರಕ್ತ ಹೆಪ್ಪುಗಟ್ಟಿ ಮಿದುಳು, ಹೃದಯಕ್ಕೆ ಆಘಾತವಾಗಿ ಜನರು ಸಾವಿಗೀಡಾಗುತ್ತಿದ್ದಾರೆ. ವೃದ್ಧರಷ್ಟೇ ಅಲ್ಲದೆ ಮಧ್ಯವಯಸ್ಕರೂ ಹೃದಯಾಘಾತ, ಮೆದುಳಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಶೀತ ಮಾರುತಕ್ಕೆ ಉತ್ತರ ಭಾರತ ತತ್ತರ: ನೈನಿತಾಲ್‌ಗಿಂತಲೂ ತಂಪಾಗಿದೆ ದೆಹಲಿ..!

click me!