ಉಗ್ರರ ವಿರುದ್ಧ ಭಾರತದ ಸೇನಾಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಸಂಭ್ರಮಿಸಿದ್ದಕ್ಕೆ ಬಾಲಕನೋರ್ವನಿಗೆ ಕಿರಾತಕರು ಚಾಕುವಿನಿಂದ ಇರಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಶಹಜಾಹನ್‌ಪುರದಲ್ಲಿ ಈ ಅಪಾಯಕಾರಿ ಘಟನೆ ನಡೆದಿದೆ. ಭಾರತದ ಏರ್‌ಸ್ಟೈಕ್ ಹಿನ್ನೆಲೆ ಸಾರ್ವಜನಿಕ ಸಂಭ್ರಮದಲ್ಲಿ ತೊಡಗಿದ್ದ ವೇಳೆ ಇಬ್ಬರು ಕಿಡಿಗೇಡಿಗಳು 8 ವರ್ಷದ ಬಾಲಕನೋರ್ವನಿಗೆ ಚಾಕುವಿನಿಂದ ಇರಿದಿದ್ದಾರೆ. ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ಉಂಟಾಗಿದ್ದು, ಕೋಮು ಸಾಮರಸ್ಯದ ಬಗ್ಗೆ ಹೊಸ ಕಳವಳ ಸೃಷ್ಟಿಯಾಗಿದೆ.
26 ಪ್ರವಾಸಿಗರ ಬಲಿ ಪಡೆದಿದ್ದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಯೋತ್ಪಾದಕರ ನೆಲಸಮ ಮಾಡುವ ಶಪಥ ಮಾಡಿದ್ದ ಭಾರತ ಆಪರೇಷನ್ ಸಿಂಧೂರ್ ಹೆಸರಿನ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಪಾಕಿಸ್ತಾನದ ಒಟ್ಟು 9 ಕಡೆ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಕೇವಲ 25 ನಿಮಿಷದಲ್ಲಿ 24 ಕ್ಷಿಪಣಿಗಳನ್ನು ಹಾರಿಸಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಇದಕ್ಕೆ ವಿಶ್ವದೆಲ್ಲೆಡೆ ನಾಯಕರು ಪ್ರತಿಕ್ರಿಯಿಸಿದ್ದರೆ ಭಾರತದಲ್ಲಿಯೂ ಸಾರ್ವಜನಿಕರು ಸಂಭ್ರಮಿಸಿದರು. ಪಹಲ್ಗಾಮ್‌ನಲ್ಲಿ ಮಡಿದ ಅಮಾಯಕರ ಸಾವಿಗೆ ನ್ಯಾಯ ಸಿಕ್ಕಿದೆ ಎಂದು ಖುಷಿ ಪಟ್ಟಿದ್ದರು.
ಕೆಲವು ನಗರಗಳಲ್ಲಿ ಜನ ಪಟಾಕಿ ಸಿಡಿಸಿ ಸಿಹಿ ಹಂಚಿಯೂ ಸಂಭ್ರಮಾಚರಣೆ ಮಾಡಿದ್ದರು. ಆದರೆ ಸೇನೆಯ ಈ ಕಾರ್ಯಾಚರಣೆಯನ್ನು ಇಡೀ ರಾಷ್ಟ್ರವೇ ಸಂಭ್ರಮಿಸಿದ್ದರೆ ಉತ್ತರ ಪ್ರದೇಶದ ಶಹಜಹಾನ್‌ಪುರದ ಧರ್ಮಗಡಪುರದಲ್ಲಿ ಹಿಂಸಾಚಾರ ನಡೆದಿದೆ. ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಬಾಲಕ ಸುರ್ಜಿತ್ ಎಂಬಾತ ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿದ್ದಂತೆ ಆತನ ಘೋಷಣೆಗೆ ವಿರೋಧ ವ್ಯಕ್ತಪಡಿಸಿದ್ದ ಖದೀಮರು ಬಾಲಕನಿಗೆ ಚಾಕುವಿನಿಂದ ಇರಿದಿದ್ದಾರೆ. ಬಾಲಕನಿಗೆ ಇರಿದ ದುರುಳರನ್ನು ಮೊಹಿದ್ ಖಾನ್ ಹಾಗೂ ಆತನ ಜೊತೆಗಿದ್ದ ವಾಸಿಂ ಎಂದು ಗುರುತಿಸಲಾಗಿದೆ.
ಈ ಘಟನೆ ಅಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಪ್ರಾಪ್ತ ಬಾಲಕನಿಗೆ ಚಾಕುವಿನಿಂದ ಇರಿದಿರುವುದಕ್ಕೆ ಅಲ್ಲಿದ್ದ ಜನರು ಸೇರಿ ಈ ಚಾಕುವಿನಿಂದ ಇರಿದವರನ್ನು ಹಿಡಿದು ಸರಿಯಾಗಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತ ಚೂರಿ ಇರಿತದಿಂದ ಗಾಯಗೊಂಡ ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಸ್ಥಿತಿ ಸ್ಥಿರವಾಗಿದ್ದು ವೈದ್ಯಕೀಯ ಕಾಳಜಿಯಲ್ಲಿದ್ದಾನೆ. ಚಾಕುವಿನಿಂದ ಇರಿದ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. ಹಾಗೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಲ್ಲೆಯ ಹಿಂದಿನ ಪ್ರೇರಣೆ ಏನು ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಘಟನೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಸ್ಥಳೀಯರು ಶಾಂತ ರೀತಿಯಿಂದ ವರ್ತಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ