ಇಬ್ಬರು ಆರೋಪಿಗಳು ಬುಧವಾರ ಲೋಕಸಭೆಯ ಸಭಾಂಗಣಕ್ಕೆ ಜಿಗಿದು ಹಳದಿ ಹೊಗೆಯನ್ನು ಹೊರಸೂಸುವ ಎರಡು ಡಬ್ಬಿಗಳನ್ನು ಎಸೆದಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ 8 ಲೋಕಸಭಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ನವದೆಹಲಿ (ಡಿಸೆಂಬರ್ 14, 2023): ಲೋಕಸಭೆಯಲ್ಲಿ ಬುಧವಾರ ಸಂಭವಿಸಿದ ಭಾರಿ ಭದ್ರತಾ ಲೋಪ ಪ್ರರಕಣಕ್ಕೆ ಸಂಬಂಧಿಸಿದಂತೆ ಕನಿಷ್ಠ 8 ಲೋಕಸಭಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂದರ್ಶಕರ ಗ್ಯಾಲರಿಯಲ್ಲಿದ್ದ ಇಬ್ಬರು ಆರೋಪಿಗಳು ಸಂಸದರ ಬಳಿ ಜಿಗಿದು ಹಳದಿ ಬಣ್ಣದ ಹೊಗೆ ಬಾಂಬ್ ಸಿಡಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ 8 ಲೋಕಸಭಾ ಸಿಬ್ಬಂದಿಯನ್ನು ಗುರುವಾರ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇಬ್ಬರು ಆರೋಪಿಗಳು ಬುಧವಾರ ಲೋಕಸಭೆಯ ಸಭಾಂಗಣಕ್ಕೆ ಜಿಗಿದು ಹಳದಿ ಹೊಗೆಯನ್ನು ಹೊರಸೂಸುವ ಎರಡು ಡಬ್ಬಿಗಳನ್ನು ಎಸೆದಿದ್ದರು. ಈ ಪೈಕಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಟೇಬಲ್‌ಗಳ ಮೇಲೆ ಹಾರಿದರು. ಸಂಸತ್ತಿನ ಹೊರಗೆ ಸಹ ಇತರ ಇಬ್ಬರು ಇದೇ ರೀತಿಯ ಕೆಂಪು ಮತ್ತು ಹಳದಿ ಬಣ್ಣದ ಹೊಗೆ ಬಾಂಬ್‌ಗಳನ್ನು ಸಿಡಿಸಿದ್ದು, ಸರ್ವಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನು ಓದಿ: ಮೊದಲು ಗ್ಯಾಲರಿಯಿಂದ ಬಿದ್ದರು ಎಂದು ಭಾವಿಸಿದ್ದೆ; ಆಮೇಲೆ ಉದ್ದೇಶಪೂರ್ವಕ ಕುಕೃತ್ಯ ಎಂದು ಗೊತ್ತಾಯ್ತು: ಕಾರ್ತಿ ಚಿದಂಬರಂ
ಈ ಘಟನೆಗೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಲಾಗಿದ್ದು, ಸಾಗರ್ ಶರ್ಮಾ, ಡಿ. ಮನೋರಂಜನ್, ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಲೋಕಸಭೆಯೊಳಗೆ ಗದ್ದಲ ಪ್ರಾರಂಭವಾದಾಗ ಹಲವಾರು ಸಂಸದರು ಕಲಾಪದೊಳಗೆ ನುಗ್ಗಿದವರನ್ನು ಸುತ್ತುವರೆದರು. ಅಲ್ಲೆ, ಕನಿಷ್ಠ ನಾಲ್ವರು ಸಂಸದರು ಒಳನುಗ್ಗಿದ ಒಬ್ಬರ ಮೇಲೆ ಹೊಡೆತಗಳ ಮಳೆಗರೆಯುತ್ತಿರುವುದು ವಿಡಿಯೋವೊಂದರಲ್ಲಿ ಕಂಡುಬಂದಿದೆ. ಒಬ್ಬ ನಾಯಕ ಆರೋಪಿಯನ್ನು ಕೂದಲಿನಿಂದ ಎಳೆದರೆ ಇತರರು ಅವನನ್ನು ಹೊಡೆಯುವುದನ್ನು ಮುಂದುವರೆಸಿದ್ದು, ಸೆರೆಯಾಗಿದೆ.
ಇದನ್ನು ಓದಿ: ಮಹುವಾ ರೀತಿ ಪ್ರತಾಪ್ ಸಿಂಹ ವಜಾಕ್ಕೆ ಆಗ್ರಹ: ಇಂದು ವಿಪಕ್ಷಗಳ ತುರ್ತು ಸಭೆ; ರಾಷ್ಟ್ರಪತಿ ಮುರ್ಮು ಭೇಟಿ
ಈ ನಾಲ್ವರು ಆರೋಪಿಗಳು ವಿವಿಧ ರಾಜ್ಯಗಳಿಂದ ಬಂದವರು ಮತ್ತು ಕಳೆದ 18 ತಿಂಗಳುಗಳಲ್ಲಿ ಹಲವಾರು ಬಾರಿ ಭೇಟಿಯಾಗಿ ಸಂಸತ್ ಭವನದ ಮೇಲೆ ದಾಳಿ ಮಾಡಲು ಯೋಜಿಸಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಈ ನಾಲ್ವರೂ "'ಭಗತ್ ಸಿಂಗ್ ಫ್ಯಾನ್ ಕ್ಲಬ್" ಹೆಸರಿನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸಂಪರ್ಕ ಹೊಂದಿದ್ದರು.
2001ರ ಸಂಸತ್ತಿನ ಭಯೋತ್ಪಾದಕ ದಾಳಿಯ 22ನೇ ವಾರ್ಷಿಕೋತ್ಸವದಂದು ಪ್ರಮುಖ ಭದ್ರತಾ ಉಲ್ಲಂಘನೆ ಸಂಭವಿಸಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ.
ಸಂಸತ್ ಭದ್ರತಾ ಲೋಪ: ಸ್ಮೋಕ್ ಕ್ಯಾನ್ ಎಂದರೇನು? ಸಂಸತ್ತಿನ ವೀಕ್ಷಕರ ಪಾಸ್ ಪಡೆವ ಪ್ರಕ್ರಿಯೆ ಹೇಗಿದೆ ನೋಡಿ..