ಚೀನಾಕ್ಕೆ ಸಡ್ಡು: ಗಡಿಯಲ್ಲಿ 9400 ಕ್ಕೂ ಹೆಚ್ಚು ಯೋಧರ ನಿಯೋಜನೆಗೆ ಅಸ್ತು

Published : Feb 16, 2023, 09:23 AM ISTUpdated : Feb 16, 2023, 09:32 AM IST
ಚೀನಾಕ್ಕೆ ಸಡ್ಡು: ಗಡಿಯಲ್ಲಿ 9400 ಕ್ಕೂ ಹೆಚ್ಚು ಯೋಧರ ನಿಯೋಜನೆಗೆ ಅಸ್ತು

ಸಾರಾಂಶ

ಗಡಿ ವಿಷಯದಲ್ಲಿ ಚೀನಾ ದಿನಕ್ಕೊಂದು ಕಿರಿಕಿರಿ ಸೃಷ್ಟಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರ ಗಡಿಯಲ್ಲಿ ಮತ್ತಷ್ಟುಸೇನಾ ಬಲವರ್ಧನೆ ಮಾಡುವ ನಿರ್ಧಾರ ಕೈಗೊಂಡಿದೆ. 

ನವದೆಹಲಿ: ಗಡಿ ವಿಷಯದಲ್ಲಿ ಚೀನಾ ದಿನಕ್ಕೊಂದು ಕಿರಿಕಿರಿ ಸೃಷ್ಟಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರ ಗಡಿಯಲ್ಲಿ ಮತ್ತಷ್ಟುಸೇನಾ ಬಲವರ್ಧನೆ ಮಾಡುವ ನಿರ್ಧಾರ ಕೈಗೊಂಡಿದೆ. ಚೀನಾದೊಂದಿಗೆ ಭಾರತ ಹೊಂದಿರುವ 3488 ಕಿ.ಮೀ ಸುದೀರ್ಘ ಗಡಿ ಕಾಯುವ ಇಂಡೋ ಟಿಬೆಟನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪಡೆಗೆ ಹೊಸದಾಗಿ ಇನ್ನೂ 7 ಬೆಟಾಲಿಯನ್‌ ಸೇರ್ಪಡೆ ಮಾಡಿ, 9400 ಯೋಧರನ್ನು ನೇಮಕ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.

7 ಹೊಸ ಬೆಟಾಲಿಯನ್‌ (new battalion) ಜೊತೆಗೆ ಒಂದು ಹೊಸ ಗಡಿ ನೆಲೆ ಸ್ಥಾಪನೆಗೂ ಅನುಮೊದನೆ ನೀಡಲಾಗಿದೆ. ಹೊಸ ಪಡೆಯನ್ನು 47 ಹೊಸ ಬಾರ್ಡರ್‌ ಪೋಸ್ಟ್‌ ಮತ್ತು 10ಕ್ಕೂ ಹೆಚ್ಚು ಮುಂಚೂಣಿ ಯೋಧರ ನೆಲೆ ಕಾಯಲು ಬಳಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಗಡಿಯಲ್ಲಿ ಚೀನಾ ಪದೇ ಪದೆ ಕ್ಯಾತೆ ತೆಗೆಯುತ್ತಿರುವ ಬೆನ್ನಲ್ಲೇ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 1962ರಲ್ಲಿ ಭಾರತದ ಮೇಲೆ ಚೀನಾ ದಾಳಿಯ ಬಳಿಕ, ಸರ್ಕಾರ ಐಟಿಬಿಪಿ (ITBP) ಪಡೆಯನ್ನು ಸೃಷ್ಟಿಸಿತ್ತು. ಇದಲ್ಲಿ ಹಾಲಿ 90 ಸಾವಿರ ಯೋಧರು ಇದ್ದಾರೆ.

ಆ ಮೂರು ವಿಚಾರಕ್ಕಾಗಿ ಭಾರತದ ವಿರುದ್ಧ ಚೀನಾ ನಿಗೂಢ ಸಂಚು?


ಲಡಾಖ್‌ಗೆ ಸರ್ವಋುತು ಸುರಂಗ: ಸಂಪುಟ ಅಸ್ತು

ನವದೆಹಲಿ: ಲಡಾಖ್‌ನ ಗಡಿ ಪ್ರದೇಶ ಗಳಿಗೆ  ಸರ್ವಋುತು ಸಂಪರ್ಕ ಕಲ್ಪಿಸುವ ನಿಮು-ಪದಮ್‌-ದರ್ಚಾ ರೋಡ್‌ಲಿಂಕ್‌ನ  4.1 ಕಿ.ಮೀ. ಉದ್ದದ ಶಿನ್ಕುನ್‌ ಲಾ ಸುರಂಗಕ್ಕೆ ಕೇಂದ್ರ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಸುರಂಗ ಮಾರ್ಗವನ್ನು 1,681 ಕೋಟಿ ರು. ವೆಚ್ಚದಲ್ಲಿ 2025ರೊಳಗೆ ಪೂರ್ಣಗೊಳಿಸಲಾಗುವುದು. ಈ ಸುರಂಗ ನಿರ್ಮಾಣದ ಬಳಿಕ ಲಡಾಕ್‌ನಿಂದ ದೇಶದ ಇತರ ಭಾಗಗಳಿಗೆ ಪ್ರಯಾಣಿಸಲು ಹತ್ತಿರದ ಮಾರ್ಗ ದೊರೆತಂತಾಗುತ್ತದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಚೀನಾ ಸಂಘರ್ಷ: ನಿಜಕ್ಕೂ ಭಾರತದ ಪರ ನಿಲ್ಲುತ್ತಾ ಅಮೆರಿಕಾ?

ಈಶಾನ್ಯದ ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿಗೆ 4800 ಕೋಟಿ ರೂ.

ನವದೆಹಲಿ: ವಿವಿಧ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಈಶಾನ್ಯದ 4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಗ್ರಾಮಗಳ ಅಭಿವೃದ್ಧಿಗಾಗಿ 4800 ಕೋಟಿ ರು. ಬಿಡುಗಡೆ ಮಾಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಸ್ಪಂದನಶೀಲ ಗ್ರಾಮ ಯೋಜನೆಯಡಿ 19 ಜಿಲ್ಲೆಗಳ ವ್ಯಾಪ್ತಿಯ 46 ಬಾರ್ಡರ್‌ ಬ್ಲಾಕ್‌ಗಳಲ್ಲಿನ 663 ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುವುದು. 4800 ಕೋಟಿ ರು. ಪೈಕಿ 2500 ಕೋಟಿ ರು.ಗಳನ್ನು ಕೇವಲ ರಸ್ತೆ ಅಭಿವೃದ್ಧಿಗಾಗಿಯೇ ಬಳಸಲಾಗುವುದು. ಗಡಿ ಗ್ರಾಮಗಳಲ್ಲಿನ ವಿವಿಧ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮತ್ತು ಹೊಸ ಜೀವನೋಪಾಯ ಸೃಷ್ಟಿಯ ಮೂಲಕ ಅಲ್ಲಿಯ ಜನರ ವಲಸೆ ತಪ್ಪಿಸುವುದು ಯೋಜನೆಯ ಮೂಲ ಉದ್ದೇಶ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ