Tamil Nadu: ವ್ಹೀಲ್‌ಚೇರ್‌ನಲ್ಲಿ ಅಮ್ಮನ ಮೃತದೇಹ ತೆಗೆದುಕೊಂಡು ಹೋದ 60 ವರ್ಷದ ವ್ಯಕ್ತಿ

By BK AshwinFirst Published Sep 10, 2022, 5:39 PM IST
Highlights

ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಮೃತದೇಹವನ್ನು ಪುತ್ರ ವ್ಹೀಲ್‌ಚೇರ್‌ನಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಂತರ, ಅಂತ್ಯಸಂಸ್ಕಾರ ಮಾಡಲು ಸಹ ಅವರ ಬಳಿ ಹಣವಿಲ್ಲದೆ ಮಾಜಿ ಸೈನಿಕನ ನೆರವಿನಿಂದ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 

60 ವರ್ಷದ ವ್ಯಕ್ತಿಯೊಬ್ಬರು ತನ್ನ ತಾಯಿಯ ಮೃತದೇಹವನ್ನು ವ್ಹೀಲ್‌ಚೇರ್‌ನಲ್ಲಿ ಹೊತ್ತೊಯ್ದ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ನಡೆದಿದೆ. ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿರುವ ಮುರುಗಾನಂಧಮ್‌ ಎಂಬ ವ್ಯಕ್ತಿ, ಈ ರೀತಿ ತನ್ನ ತಾಯಿಯ ಮೃತದೇಹವನ್ನು ವ್ಹೀಲ್‌ಚೇರ್‌ನಲ್ಲಿ ಸುಮಾರು ಎರಡೂವರೆ ಕಿಲೋಮೀಟರ್‌ಗಳಷ್ಟು ದೂರ ತಳ್ಳಿಕೊಂಡು ಹೋಗಿದ್ದಾರೆ. ತನ್ನ ತಾಯಿ ಸೋರಿಯಾಸಿಸ್‌ನಿಂದ ಬಳಲುತ್ತಿದ್ದರು ಹಾಗೂ ಈ ಕಾರಣದಿಂದ ಅವರ ಮೃತದೇಹ ತೆಗೆದುಕೊಂಡು ಹೋಗಲು ಯಾರೂ ಸಹಾಯ ಮಾಡುವುದಿಲ್ಲವೆಂದು ನಾನೇ ತೆಗೆದುಕೊಂಡು ಬಂದೆ ಎಂದು ಸ್ಮಶಾನದ ಅಧಿಕಾರಿಗಳಿಗೆ 60 ವರ್ಷದ ವ್ಯಕ್ತಿ ಹೇಳಿಕೊಂಡಿದ್ದಾರೆ. ಅಲ್ಲದೆ, ಸರಿಯಾಗಿ ಅಂತ್ಯಸಂಸ್ಖಾರ ಮಾಡಲು ಸಹ ತನ್ನ ಬಳಿ ಹಣ ಇಲ್ಲವೆಂದು ಅವರು ಸ್ಮಶಾನದ ಕಾರ್ಪೊರೇಷನ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದೂ ತಿಳಿದುಬಂದಿದೆ.

ಬಳಿಕ, ಅಂತ್ಯಸಂಸ್ಕಾರ ಮಾಡಲು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕಾರ್ಪೊರೇಷನ್‌ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಜತೆಗೆ, ಹಲವು ಎನ್‌ಜಿಒಗಳು ಅಂತ್ಯಕ್ರಿಯೆ ನಡೆಸಲು ಆರ್ಥಿಕವಾಗಿ ಹಿಂದುಳಿದವರಿಗೆ ಹಣ ಸಹಾಯ ಮಾಡುತ್ತಾರೆ ಎಂದೂ ಅವರು ಹೇಳಿದರು. 84 ವರ್ಷದ ಮೃತ ಮಹಿಳೆ ರಾಜೇಶ್ವರಿ ಸೋರಿಯಾಸಿಸ್‌ನಿಂದ ಬಳಲುತ್ತಿದ್ದರು ಹಾಗೂ ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ, ರಾಜೇಶ್ವರಿಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ವೈದ್ಯರು ಕುಟುಂಬಸ್ಥರಿಗೆ ಬುಧವಾರ ತಿಳಿಸಿದ್ದು, ಆ ಮಹಿಳೆಗೆ ಮನೆಯಲ್ಲೇ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ. ದುರದೃಷ್ಟವಶಾತ್‌, ಗುರುವಾರ ಬೆಳಗ್ಗಿನ ಜಾವ 4 ಗಂಟೆಯ ವೇಳೆಗೆ ರಾಜೇಶ್ವರಿ ಮೃತಪಟ್ಟಿದ್ದಾರೆ. 

ಆಂಬುಲೆನ್ಸ್‌ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ
 
ನಂತರ, ತನ್ನ ಮೃತ ತಾಯಿಯನ್ನು ಪುತ್ರ ಮುರುಗಾನಂಧಮ್‌ ಬಟ್ಟೆಯಲ್ಲಿ ಸುತ್ತಿ ವ್ಹೀಲ್‌ಚೇರ್‌ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ, ಸ್ಮಶಾನದ ಅಧಿಕಾರಿಗಳು ಮುರುಗಾನಂಧಮ್‌ ಅವರಿಗೆ ಆತನ ತಾಯಿಯ ಸಾವಿನ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಸಹ ನೆರವು ನೀಡಿದ್ದಾರೆ. ಆಸ್ಪತ್ರೆಯ ದಾಖಲೆಗಳು ಹಾಗೂ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಸಲಹೆ ಮೇರೆಗೆ ಡೆತ್‌ ಸರ್ಟಿಫಿಕೇಟ್‌ ಮಾಡಿಸಿದ್ದಾರೆ. 

ಮಾಜಿ ಸೈನಿಕನಿಂದ ನೆರವು
ಇನ್ನು, ಮೃತ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಶ್ರೀಧರನ್ ಎನ್ನುವ ಮಾಜಿ ಸೈನಿಕ ನೆರವಾಗಿದ್ದಾರೆ. ಇವರು ಸ್ಥಳೀಯ ಲಯನ್ಸ್‌ ಕ್ಲಬ್‌ ಘಟಕದ ಟ್ರಸ್ಟಿಯೂ ಆಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ‘’ನನಗೆ ಬೆಳಗ್ಗೆ 6 ಗಂಟೆಗೆ ಕರೆ ಬಂತು. ಸ್ಮಶಾನದ ಬಳಿಯ ಟೀ ಅಂಗಡಿಯವರು ಕರೆ ಮಾಡಿದ್ದರು. ಹಾಗೂ, ವ್ಯಕ್ತಿಯೊಬ್ಬರು ಮೃತದೇಹವನ್ನು ವ್ಹೀಲ್‌ಚೇರ್‌ನಲ್ಲಿ ತಂದಿದ್ದು, ಸ್ಮಶಾನದ ಗೇಟ್‌ಗಳ ಹೊರಗೆ ಕಾಯುತ್ತಿದ್ದಾರೆ ಎಂದು ಹೇಳಿದರು. ನಂತರ, ನಾನು ತಕ್ಷಣವೇ ಸ್ಮಶಾನಕ್ಕೆ ಹೋದೆ ಹಾಗೂ ನಿಮ್ಮ ತಾಯಿಯನ್ನು ವ್ಹೀಲ್‌ಚೇರ್‌ನಲ್ಲಿ ಯಾಕೆ ತೆಗೆದುಕೊಂಡು ಬಂದ್ರಿ ಎಂದು ನಾಣು ಅವರನ್ನು ಕೇಳಿದೆ’’ ಎಂದು ಅವರು ಹೇಳಿದರು. 

ಇದಕ್ಕೆ ಅವರು, ಬೆಳಗ್ಗೆ 4.30 ರ ವೇಳೆ ನನ್ನ ತಯಿ ಮೃತಪಟ್ಟರು ಹಾಗೂ ಅವರು ಚರ್ಮ ಕಾಯಿಲೆಯೊಂದರಿಂದ ಬಳಲುತ್ತಿದ್ದರು. ಹಾಗೂ, ಇದು ಇತರರಿಗೆ ಹರಡಬಹುದೆಂದು ವೈದ್ಯರು ಸಲಹೆ ನೀಡಿದ್ದರಿಂದ ನನಗೆ ಯಾರೂ ಸಹಾಯ ಮಾಡುವುದಿಲ್ಲವೆಂದು ಅನುಮಾನ ಪಟ್ಟೆ. ಈ ಹಿನ್ನೆಲೆ, ಮಹಿಳೆಯ ಮೃತದೇಹ ಮುಚ್ಚಿಟ್ಟು, ವ್ಹೀಲ್‌ಚೇರ್‌ನಲ್ಲಿ ಇಲ್ಲಿಗೆ ತೆಗೆದುಕೊಂಡು ಬಂದೆ, ನನ್ನ ಮನೆ ಇಲ್ಲಿಂದ ಸುಮಾರು 3 ಕಿ.ಮೀ. ದೂರ ಇದೆ’’ ಎಂದು ಮುರುಗಾನಂಧಮ್‌ ಹೇಳಿದ ಬಗ್ಗೆ ಶ್ರೀಧರನ್‌ ಹೇಳಿದರು. 

ಸ್ನೇಹಿತನೊಂದಿಗೆ ಲಾಡ್ಜ್‌ಗೆ ಹೋಗಿದ್ದ ಮೈಸೂರಿನ ಬಿಸಿಎ ವಿದ್ಯಾರ್ಥಿನಿ ದುರಂತ ಅಂತ್ಯ

ನಂತರ, ನಾನು ಅವರ ಬಳಿ ವೈದ್ಯಕೀಯ ದಾಖಲೆಗಳನ್ನು ಕೇಳಿದೆ. ಆ ವ್ಯಕ್ತಿ ಎಲ್ಲವನ್ನೂ ತನ್ನ ಜತೆ ತಂದಿದ್ದರು ಹಾಗೂ ಪರಿಶೀಲಿಸಿದ ಬಳಿಕ ನಾನು ಆ ವೈದ್ಯರಿಗೆ ಕರೆ ಮಾಡಿದೆ. ಅವರು ಸ್ಪಷ್ಟನೆ ನೀಡಿದ ನಂತರ, ನಾನು ಅವರನ್ನು ಸ್ಮಶಾನದೊಳಗೆ ಕರೆದುಕೊಂಡು ಹೋದೆ. ಬಳಿಕ, ಡೆತ್ ಸರ್ಟಿಫಿಕೇಟ್‌ ಮಾಡಿಸಿದ ನಂತರ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಯಿತು’’ ಎಂದೂ ಶ್ರೀಧರನ್‌ ಹೇಳಿದ್ದಾರೆ.

click me!