ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಿಲ್ಲ, ಸುಪ್ರೀಂ ಬಿಗ್‌ ತೀರ್ಪು!

By Santosh Naik  |  First Published May 1, 2023, 3:53 PM IST

ಕೌಟುಂಬಿಕ ಕೋರ್ಟ್‌ಗಳಿಗೆ ಹೋಗದೇ, 6 ತಿಂಗಳ ಕಡ್ಡಾಯ ಕಾಯುವಿಕೆಯನ್ನು ಪಾಲಿಸದೇ ವಿವಾಹದಲ್ಲಿ ವಿಚ್ಛೇದನವನ್ನು ನೀಡುವ ಪರಮಾಧಿಕಾರವನ್ನು ಸುಪ್ರೀಂ ಕೋರ್ಟ್‌ಗೆ ಐವರು ಸದಸ್ಯರ ಸಾಂವಿಧಾನಿಕ ಪೀಠ ನೀಡಿದೆ.


ನವದೆಹಲಿ (ಮೇ.1): ದೇಶದ ಸುಪ್ರೀಂ ಕೋರ್ಟ್‌ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಐವರು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠ ಸೋಮವಾರ (ಮೇ.1) ತನ್ನ ಮಹತ್ವದ ತೀರ್ಪು ಪ್ರಕಟ ಮಾಡಿದೆ. ಇನ್ನು ಮುಂದೆ ವಿವಾಹ ವಿಚ್ಛೇದನಕ್ಕೆ ದಂಪತಿಗಳು ಆರು ತಿಂಗಳು ಕಾಯಬೇಕಂತಿಲ್ಲ. ಕೌಟುಂಬಿಕ ನ್ಯಾಯಾಲಯಕ್ಕೆ ಒಪ್ಪಿಸದೇ ಪರಸ್ಪರ ಸಮ್ಮತಿ ದಂಪತಿಯು ಇನ್ನು ಮುಂದೆ ಆರು ತಿಂಗಳ ಕಾಲ ಕಾಯದೇ ವಿಚ್ಛೇದನ ಪಡೆಯಬಹುದಾಗಿದೆ ಎಂದು ಸಾಂವಿಧಾನಿಕ ಪೀಠದ ಜಸ್ಟೀಸ್‌ ಎಸ್.ಕೆ.ಕೌಲ್‌ ಅವರನ್ನೊಳಗೊಂಡ ಪೀಠ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಇದಕ್ಕೂ ಮುನ್ನ ವಿವಾಹ ವಿಚ್ಛೇದನ ನೀಡಬೇಕಾದಲ್ಲಿ, ಕೌಟುಂಬಿಕ ನ್ಯಾಯಾಲಯವು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಆರು ತಿಂಗಳ ಕಾಲಾವಕಾಶವನ್ನು ನೀಡುತ್ತಿತ್ತು. ಬಹುತೇಕ ಎಲ್ಲಾ ವಿಚ್ಛೇದನದಲ್ಲೂ ಆರು ತಿಂಗಳ ಕಾಲಾವಕಾಶ ಕಡ್ಡಾಯವವಾಗಿತ್ತು. ಈಗ ಮಹತ್ವದ ಆದೇಶ ನೀಡಿರುವ ಕೋರ್ಟ್‌ . ಸಂವಿಧಾನದ 142ನೇ ವಿಧಿಯು ಬಾಕಿ ಇರುವ ವಿಚ್ಛೇದನ ಪ್ರಕರಣಗಳಲ್ಲಿ ಮದುವೆಯನ್ನು ರದ್ದುಗೊಳಿಸುವ ಪರಮಾಧಿಕಾರವನ್ನು ಸುಪ್ರೀಂಕೋರ್ಟ್‌ ಗೆ ನೀಡುತ್ತದೆ. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಕಳೆದ ವರ್ಷದ ಸೆಪ್ಟೆಂಬರ್‌ 29ರಂದು ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿತ್ತು. ಈ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠದ ಜಸ್ಟೀಸ್‌ ಗಳಾದ ಸಂಜಯ್‌ ಕಿಶನ್‌ ಕೌಲ್‌, ಸಂಜೀವ್‌ ಖನ್ನಾ, ಎಎಸ್‌ ಓಕಾ, ವಿಕ್ರಮ್‌ ನಾಥ್‌ ಮತ್ತು ಜೆ.ಕೆ.ಮಹೇಶ್ವರಿ ವಿಚಾರಣೆ ನಡೆಸಿದ್ದರು.

ಪರಸ್ಪರ ಒಪ್ಪಿಗೆ ಇದ್ದರೇ ವಿವಾಹ ವಿಚ್ಛೇದನ ಪಡೆಯಲು ಸಂವಿಧಾನದ ಪರಿಚ್ಛೇದ 142ರ ಅಡಿಯಲ್ಲಿ ಮುರಿದುಹೋದ ವಿವಾಹಗಳನ್ನು ವಿಸರ್ಜಿಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. 142ರ ವಿಧಿ ಅನ್ವಯ ಪರಿಸ್ಥಿತಿಗನುಗುಣವಾಗಿ ವಿಚ್ಛೇದನಕ್ಕಾಗಿ ಆರು ತಿಂಗಳ ಕಡ್ಡಾಯ ಕಾಯುವ ಅವಧಿಯನ್ನು ತೆಗೆದುಹಾಕಬಹುದು ಎಂದು ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ಪೀಠ ಆದೇಶಿಸಿದೆ.
 

click me!