ಕೇಂದ್ರದಲ್ಲಿ 5 ಅಲ್ಪಸಂಖ್ಯಾತರಿಗೆ ಸ್ಥಾನ, ಮುಸ್ಲಿಮರಿಗೆ ಶೂನ್ಯ: ಯುಪಿ, ಬಿಹಾರಕ್ಕೆ ಸಂಪುಟ ಬಂಪರ್‌

By Kannadaprabha News  |  First Published Jun 10, 2024, 8:23 AM IST

ನರೇಂದ್ರ ಮೋದಿಯ ಮೂರನೇ ಸಂಪುಟದಲ್ಲಿ ಉತ್ತರಪ್ರದೇಶ ಮತ್ತು ಬಿಹಾರಕ್ಕೆ ಸಿಂಹಪಾಲು ದೊರೆತಿದೆ. ಉತ್ತರಪ್ರದೇಶಕ್ಕೆ 9 ಮತ್ತು ಬಿಹಾರಕ್ಕೆ 8 ಸಚಿವ ಸ್ಥಾನ ಲಭಿಸಿದೆ. ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರಕ್ಕೂ 6 ಸಚಿವ ಸ್ಥಾನ ನೀಡಲಾಗಿದೆ.


ನವದೆಹಲಿ: ನರೇಂದ್ರ ಮೋದಿಯ ಮೂರನೇ ಸಂಪುಟದಲ್ಲಿ ಉತ್ತರಪ್ರದೇಶ ಮತ್ತು ಬಿಹಾರಕ್ಕೆ ಸಿಂಹಪಾಲು ದೊರೆತಿದೆ. ಉತ್ತರಪ್ರದೇಶಕ್ಕೆ 9 ಮತ್ತು ಬಿಹಾರಕ್ಕೆ 8 ಸಚಿವ ಸ್ಥಾನ ಲಭಿಸಿದೆ. ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರಕ್ಕೂ 6 ಸಚಿವ ಸ್ಥಾನ ನೀಡಲಾಗಿದೆ. ಹಾಗೆಯೇ ಗುಜರಾತ್‌ ಮತ್ತು ಬಿಹಾರಕ್ಕೆ ಗರಿಷ್ಠ 4 ಕ್ಯಾಬಿನೆಟ್‌ ಸಚಿವ ಸ್ಥಾನ ದೊರೆತಿದ್ದು, ಉತ್ತರಪ್ರದೇಶದಲ್ಲಿ ಕೇವಲ ರಾಜನಾಥ್‌ ಸಿಂಗ್‌ ಅವರಿಗೆ ಮಾತ್ರ ಕ್ಯಾಬಿನೆಟ್‌ ಸಚಿವ ಸ್ಥಾನಮಾನ ದೊರೆತಿದೆ. ಇನ್ನುಳಿದಂತೆ ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನದಿಂದ 5 ಮಂದಿ ಸಚಿವರಾಗಿದ್ದರೆ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕಕ್ಕೆ 4, ತಮಿಳುನಾಡಿನಿಂದ 3, ಒಡಿಶಾ ಮತ್ತು ಕೇರಳದಿಂದ ತಲಾ 2 ಸಚಿವರಾಗಿದ್ದಾರೆ.

5 ಅಲ್ಪಸಂಖ್ಯಾತರಿಗೆ ಸ್ಥಾನ, ಮುಸ್ಲಿಮರಿಗೆ ಶೂನ್ಯ
ನವದೆಹಲಿ: ಭಾನುವಾರ ಕೇಂದ್ರ ಸಂಪುಟ ಸೇರಿದ 72 ಸಚಿವರಲ್ಲಿ ವಿವಿಧ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 5 ಜನರು ಸೇರಿದ್ದಾರೆ. ಆದರೆ ಯಾವುದೇ ಮುಸ್ಲಿಮರು ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಈ ಬಾರಿ ಚುನಾವಣೆಯುದ್ದಕ್ಕೂ ಕಾಂಗ್ರೆಸ್‌ನ ಮುಸ್ಲಿಂ ಓಲೈಕೆ ರಾಜಕಾರಣದ ವಿರುದ್ಧ ಬಿಜೆಪಿ ಸತತ ವಾಗ್ದಾಳಿ ನಡೆಸಿತ್ತು ಎಂಬುದು ವಿಶೇಷ. 2019ರಲ್ಲಿ ಮೋದಿ ಸಂಪುಟದಲ್ಲಿ ಮುಖ್ತಾರ್‌ ಅಬ್ಬಾಸ್‌ ನಖ್ವಿ ಸಚಿವ ಸ್ಥಾನ ಪಡೆದುಕೊಂಡಿದ್ದರು. 

Latest Videos

7 ಮಂದಿ ಮಹಿಳೆಯರಿಗೆ ಸ್ಥಾನ
ನವದೆಹಲಿ: ಮೋದಿ 3.0 ಸಂಪುಟದಲ್ಲಿ ಸಪ್ತ ಸಂಸದೆಯರು ಸ್ಥಾನ ಪಡೆದಿದ್ದಾರೆ, ಇಬ್ಬರು ಸಂಪುಟ ದರ್ಜೆ ಮತ್ತು ಐವರು ರಾಜ್ಯ ಸಚಿವೆಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್‌, ಅನ್ನಪೂರ್ಣ ದೇವಿ, ಶೋಭಾ ಕರಂದ್ಲಾಜೆ, ರಕ್ಷಾ ಖಾಡ್ಸೆ, ಸಾವಿತ್ರಿ ಠಾಕೂರ್‌, ನಿಮುಬೆನ್ ಬಂಬಾನಿಯಾ ಮತ್ತು ಅಪ್ನಾ ದಳ ಸಂಸದೆ ಅನುಪ್ರಿಯಾ ಪಟೇಲ್ ಸ್ಥಾನ ಪಡೆದಿದ್ದಾರೆ.
ಈ ಪೈಕಿ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಕ್ಯಾಬಿನೆಟ್ ದರ್ಜೆ ಸ್ಥಾನ ಪಡೆದಿದ್ದರೆ, ಉಳಿದವರು ರಾಜ್ಯ ಸಚಿವ ಖಾತೆ ನಿಭಾಯಿಸಲಿದ್ದಾರೆ. ಮೋದಿ ಮೊದಲ ಸಂಪುಟದಲ್ಲಿ 6 ಸಂಸದೆಯರಿಗೆ ಸ್ಥಾನ ನೀಡಿದ್ದರು.

28 ವರ್ಷಗಳ ಬಳಿಕ ದೆಹಲಿಯಲ್ಲಿ ದೇವೇಗೌಡರ ಕುಟುಂಬಕ್ಕೆ ಅಧಿಕಾರ
ನವದೆಹಲಿ: ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ದೆಹಲಿಯಲ್ಲಿ 28 ವರ್ಷಗಳ ಬಳಿಕ ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ಅಧಿಕಾರದ ಅವಕಾಶ ಸಿಕ್ಕಿದೆ. 1996 ಜೂನ್‌ 1ರಂದು ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 1997ರ ಏ.21ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದಾದ ನಂತರ ಇದೀಗ ಅವರ ಪುತ್ರ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ದೆಹಲಿಗೆ ಮರಳಿದ್ದಾರೆ.

3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿಗೆ ಅಭಿನಂದನೆ: ಸಿಎಂ ಸಿದ್ದರಾಮಯ್ಯ

ಶಾರೂಖ್‌, ಅಂಬಾನಿ, ಅದಾನಿ ಸೇರಿ ಹಲವು ಗಣ್ಯರು ಪ್ರಮಾಣಕ್ಕೆ ಸಾಕ್ಷಿ

ನವದೆಹಲಿ: ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಮಾಣ ಸ್ವೀಕರಿಸಿದ ಸಮಾರಂಭದಲ್ಲಿ ಬಾಲಿವುಡ್‌ ನಟರಾದ ಶಾರೂಖ್‌ ಖಾನ್‌, ಅಕ್ಷಯ್‌ ಕುಮಾರ್‌, ಅನುಪಮ್‌ ಖೇರ್‌, ಅನಿಲ್‌ ಕಪೂರ್‌, ರವೀನಾ ಟಂಡನ್‌ ಸೇರಿ ಹಲವು ಗಣ್ಯರು ಸಾಕ್ಷಿಯಾದರು. ಅಷ್ಟೇ ಅಲ್ಲದೆ ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಮುಖೇಶ್‌ ಅಂಬಾನಿ ಕುಟುಂಬ, ಗೌತಮ್‌ ಅದಾನಿ ಕುಟುಂಬ, ತಮಿಳು ನಟ ರಜನಿಕಾಂತ್‌, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌, ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟಿಲ್‌ ಹಾಗೂ ರಾಮನಾಥ್ ಕೋವಿಂದ್‌ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರ ಜೊತೆಗೆ ಹಲವು ಧಾರ್ಮಿಕ ಗುರುಗಳೂ ಸಹ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮೋದಿ ಕ್ಯಾಬಿನೆಟ್‌ನಲ್ಲಿ 6 ಮಾಜಿ ಸಿಎಂ, 9 ಹೊಸ ಮುಖ; 72 ಸಚಿವರ ಪಟ್ಟಿ ಇಲ್ಲಿದೆ!

click me!