ಗುಜರಾತ್‌ನ ಸೂರತ್‌ನಲ್ಲಿ ನಾಯಿ ದಾಳಿಯಿಂದ ಗಾಯೊಂಡಿದ್ದ 2 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಎರಡು ವರ್ಷ ಪ್ರಾಯದ ಮರ್ಸಿಲಾ ಹೆಮ್ರುನ್ (Marsila Hemron) ನಾಯಿಗಳಿಂದ ಭೀಕರವಾಗಿ ದಾಳಿಗೊಳಗಾಗಿ ಮೃತಪಟ್ಟ ಬಾಲಕಿ.
ಸೂರತ್: ಎರಡು ದಿನಗಳ ಹಿಂದಷ್ಟೇ ತೆಲಂಗಾಣದ ನಿಜಮಾಬಾದ್‌ನಲ್ಲಿ 4 ವರ್ಷದ ಬಾಲಕನೋರ್ವನನ್ನು ಬೀದಿ ನಾಯಿಗಳು ದಾಳಿ ನಡೆಸಿ ಭೀಕರವಾಗಿ ಕೊಂದು ಹಾಕಿದ್ದವು. ಆ ಘಟನೆ ಮಾಸುವ ಮೊದಲೇ ಈಗ ಗುಜರಾತ್‌ನ ಸೂರತ್‌ನಲ್ಲಿ ನಾಯಿ ದಾಳಿಯಿಂದ ಗಾಯೊಂಡಿದ್ದ 2 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಎರಡು ವರ್ಷ ಪ್ರಾಯದ ಮರ್ಸಿಲಾ ಹೆಮ್ರುನ್ (Marsila Hemron) ನಾಯಿಗಳಿಂದ ಭೀಕರವಾಗಿ ದಾಳಿಗೊಳಗಾಗಿ ಮೃತಪಟ್ಟ ಬಾಲಕಿ.
ಸೂರತ್‌ನ ಡೈಮಂಡ್ ಬೋರ್ಸ್ ಪ್ರಾಜೆಕ್ಟ್ ಸೈಟ್( Surat Diamond Bourse project) ಬಳಿ ಈ ಪುಟ್ಟ ಮಗುವಿನ ಮೇಲೆ ಬೀದಿನಾಯಿಗಳು ಮುಗಿಬಿದ್ದಿದ್ದವು. ಇದರಿಂದ ಬಾಲಕಿಯ ದೇಹದಲ್ಲಿ 60 ಗಾಯಗಳಾಗಿದ್ದವು. ಮಗುವಿನ ತಂದೆ ರವಿ ಕಹರ್ ಪಶ್ಚಿಮ ಬಂಗಾಳದಿಂದ ಸೂರತ್‌ಗೆ ಕೆಲಸ ಅರಸಿ ಬಂದ ವಲಸೆ ಕಾರ್ಮಿಕರಾಗಿದ್ದು, ಸೂರತ್‌ನ ಡೈಮಂಡ್ ಬೋರ್ಸ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲೇ ಸಮೀಪದಲ್ಲಿ ಕುಟುಂಬದೊಂದಿಗೆ ವಾಸವಿದ್ದರು.
ನಾಯಿ ದಾಳಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್: ಹಸುವನ್ನು ಕಚ್ಚಿ ಎಳೆದಾಡಿದ ಪಿಟ್ಬುಲ್ ಶ್ವಾನ
ನಾಯಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ರಕ್ಷಿಸಲು ವೈದ್ಯರು ಸರ್ವಪ್ರಯತ್ನ ಮಾಡಿದ್ದರು. ಆದರೆ ಚಿಕಿತ್ಸೆ ವೇಳೆ ಬಹು ಅಂಗಾಂಗ ವೈಫಲ್ಯಗೊಂಡು ಬಾಲಕಿ ಸಾವನ್ನಪ್ಪಿದ್ದಾಳೆ. ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿಯಲ್ಲಿರುವಂತೆ ನಾಯಿ ದಾಳಿಯಿಂದಾಗಿ ಬಾಲಕಿಯ ತಲೆಯಿಂದ ಕಾಲಿನವರೆಗೆ ಎಲ್ಲೆಡೆ ಗಾಯಗಳಾಗಿದ್ದವು. ಚಿಕಿತ್ಸೆಯ ಭಾಗವಾಗಿ ಆಕೆಯ ದೇಹಕ್ಕೆ 30 ಆಂಟಿ ರೇಬಿಸ್ ಚುಚ್ಚುಮದ್ದು ನೀಡಲಾಗಿತ್ತು. ಆಕೆಯನ್ನು ವೈದ್ಯರು ತಪಾಸಣೆ ನಡೆಸಿದಾಗ ದೇಹದೆಲ್ಲೆಡೆ ಸಣ್ಣಗಾಯಗಳಿಂದ ದೊಡ್ಡ ಗಾಯಗಳವರೆಗೆ ಒಟ್ಟು 60 ಗಾಯಗಳಾಗಿರುವುದು ಕಂಡು ಬಂದಿತ್ತು. ಅದರಲ್ಲಿ ಕೆಲವು ಅಳವಾದ ಗಾಯಗಳು ಇದ್ದವು ಎಂದು ವೈದ್ಯಕೀಯ ಅಧಿಕಾರಿ ಕೇತನ್ ನಾಯ್ಕ್ ಹೇಳಿದರು.
ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಪೋಷಕರು, ನಾಯಿ ದಾಳಿಗೆ 8 ವರ್ಷದ ಬಾಲಕ ಸಾವು
ಮಕ್ಕಳ ತಜ್ಞರು ಸ್ತ್ರೀರೋಗ ತಜ್ಞರ, ಶಸ್ತ್ರಚಿಕಿತ್ಸಕರ ತಂಡದಿಂದ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಆದರೆ ಸೆಪ್ಟಿಸೆಮಿಕ್ ಶಾಕ್ ಹಾಗೂ ಬಹು ಅಂಗಾಗ ವೈಫಲ್ಯಗೊಂಡು ಮಗು ಸಾವನ್ನಪ್ಪಿದೆ. ಸೆಪ್ಟಿಸೆಮಿಕ್ ಶಾಕ್ ( septicemic shock) ಸಂದರ್ಭದಲ್ಲಿ ಸೋಂಕಿನಿಂದಾಗಿ ರೋಗಿಯ ರಕ್ತದೊತ್ತಡ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ ಎಂದು ವೈದ್ಯ ಕೇತನ್ ನಾಯ್ಕ್ ಹೇಳಿದರು. ಸೂರತ್ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದ್ದು ಕಳೆದೆರಡು ತಿಂಗಳಳ್ಲಿ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುತ್ತಿರುವ 4ನೇ ಪ್ರಕರಣ ಇದಾಗಿದೆ. ಒಟ್ಟು ನಾಲ್ಕು ದಾಳಿ ಪ್ರಕರಣದಲ್ಲಿ 2 ಮಕ್ಕಳು ನಾಯಿಗಳ ದಾಳಿಯಿಂದ ಸಾವನ್ನಪ್ಪಿವೆ.
ಬೀದಿನಾಯಿಗಳ ದಾಳಿಗೆ 5 ವರ್ಷದ ಬಾಲಕ ಬಲಿ
ಬೀದಿನಾಯಿಗಳ ಹಿಂಡೊಂದು ಐದು ವರ್ಷದ ಬಾಲಕನ ಮೇಲೆ ಮುಗಿಬಿದ್ದು, ಕಚ್ಚಿ ಗಾಯಗೊಳಿಸಿದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ನೆರೆಯ ರಾಜ್ಯ ತೆಲಂಗಾಣದ ನಿಜಮಾಬಾದ್‌ನಲ್ಲಿ(Nizamabad) ನಡೆದಿದೆ. ಈ ಆಘಾತಕಾರಿ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ಬಾಲಕನ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಅದೇ ಸ್ಥಳದಲ್ಲಿ ಈ ಅನಾಹುತ ನಡೆದಿದೆ. ಮೃತ ಬಾಲಕನನ್ನು ಪ್ರದೀಪ್ (Pradeep) ಎಂದು ಗುರುತಿಸಲಾಗಿದೆ.
ಬಾಲಕ ತಾನು ತಂದೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗುತ್ತಿದ್ದಾಗ ಈ ಅನಾಹುತ ನಡೆದಿದೆ. ಮೂರರಿಂದ ನಾಲ್ಕು ಬೀದಿ ನಾಯಿಗಳು ಬಾಲಕನನ್ನು ರಸ್ತೆಯಲ್ಲಿ ಬೆನ್ನಟ್ಟಿಕೊಂಡು ಹೋಗಿ ನಂತರ ಕಚ್ಚಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಭಯ ಎಂಥವರನ್ನು ಒಂದು ಕ್ಷಣ ಬೆಚ್ಚಿ ಬೀಳಿಸುವಂತೆ ಮಾಡುತ್ತಿದೆ. ಬಾಲಕನ ನಡೆದುಕೊಂಡು ಹೋಗುತ್ತಿರಬೇಕಾದರೆ ಒಂದು ನಾಯಿ ಆತನನ್ನು ಬೆನ್ನಟ್ಟಿದೆ. ಅಷ್ಟರಲ್ಲಿ ಅಲ್ಲಿದ್ದ ಇನ್ನು ಮೂರು ನಾಯಿಗಳು ಸೇರಿಕೊಂಡಿದ್ದು, ಬಾಲಕನನ್ನು ನೆಲಕ್ಕೆ ಕೆಡವಿ ಒಂದಾದ ಮೇಲೊಂದರಂತೆ ದಾಳಿ ನಡೆಸಿ ಬಾಲಕನನ್ನು ಕಚ್ಚಿ ಎಳೆದಾಡಿವೆ. ಈ ವೇಳೆ ಮಗು ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿದರೂ, ಕಾಡು ಮೃಗಗಳಂತೆ ಎರಗಿದ ಈ ಬೀದಿನಾಯಿಗಳಿಂದ ಬಾಲಕನಿಗೆ ಪಾರಾಗಲು ಸಾಧ್ಯವಾಗಿಲ್ಲ. ನಾಯಿಗಳ ಭೀಕರ ದಾಳಿಯಿಂದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಕರುಳು ಹಿಂಡುವ ದೃಶ್ಯ ಎಂಥವರನ್ನು ಕೂಡ ಒಂದು ಕ್ಷಣ ಕಣ್ಣೀರಿಡುವಂತೆ ಮಾಡುತ್ತಿದೆ.