
ನವದೆಹಲಿ(ಆ.28): ಕೊರೋನಾ ವೈರಸ್ ಈಗ ದುರ್ಗಮ ಅಂಡಮಾನ್ ದ್ವೀಪದ ಬುಡಕಟ್ಟು ಜನಾಂಗಕ್ಕೂ ವ್ಯಾಪಿಸಿದೆ. ಗ್ರೇಟರ್ ಅಂಡಮಾನ್ ಬುಡಕಟ್ಟು ಜನಾಂಗದ 53 ಸದಸ್ಯರ ಪೈಕಿ 4 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತಿಬ್ಬರು ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ.
ಇದೇ ವೇಳೆ ಕೊರೋನಾ ವೈರಸ್‌ಗೆ ತುತ್ತಾಗಿದ್ದ ಇನ್ನೊಬ್ಬ ವ್ಯಕ್ತಿ ಚೇತರಿಸಿಕೊಂಡಿದ್ದಾನೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಳೆದ ವಾರ ಆರೋಗ್ಯ ಮತ್ತು ತುರ್ತು ಸೇವಾ ಸಿಬ್ಬಂದಿ ಬೋಟ್‌ಗಳ ಮೂಲಕ ತೆರಳಿ ಗ್ರೇಟರ್ ಅಂಡಮಾನ್ ಬುಡಕಟ್ಟು ನಿವಾಸಿಗಳನ್ನು ಸಾಮೂಹಿಕ ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ನಾಲ್ವರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇವರು ಪೋರ್ಟ್ ಬ್ಲೇರ್‌ಗೆ ತೆರಳಿದ್ದ ಸಂದರ್ಭದಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹಿರಿಯ ಆರೋಗ್ಯ ಅಧಿಕಾರಿ ಅಜಿತ್ ರಾಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೇಶದಲ್ಲಿ ನಿನ್ನೆ ಮತ್ತೆ 75,000+ ಕೇಸ್, 1,047 ಸಾವು
ನವದೆಹಲಿ: ದೈನಂದಿನ ಕೊರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ 75 ಸಾವಿರ ಗಡಿ ದಾಟಿದೆ. ಗುರುವಾರ 75,468 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 33.76 ಲಕ್ಷಕ್ಕೆ ಏರಿಕೆ ಆಗಿದೆ. ಇದೇ ವೇಳೆ ಕೊರೋನಾಕ್ಕೆ 1,047 ಮಂದಿ ಬಲಿ ಆಗುವುದರೊಂದಿಗೆ ಮೃತರ ಸಂಖ್ಯೆ 61,595ಕ್ಕೆ ತಲುಪಿದೆ.
ಮಹಾರಾಷ್ಟ್ರವೊಂದರಲ್ಲೇ 14,718 ಕೇಸ್ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 7.3 ಲಕ್ಷಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ 355 ಮಂದಿ ಸಾವನ್ನಪ್ಪುವುದರೊಂದಿಗೆ ಮೃತರ ಸಂಖ್ಯೆ 23 ಸಾವಿರ ಗಡಿ ದಾಟಿದೆ.
ಮೊಹರಂ ಮೆರವಣಿಗೆಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದ ಸುಪ್ರೀಂ ಕೋರ್ಟ್
25 ಲಕ್ಷ ಮಂದಿ ಗುಣಮುಖ: ಈ ಮಧ್ಯೆ ಕೊರೋನಾದಿಂದ 59,197 ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 25.73 ಲಕ್ಷಕ್ಕೆ ಏರಿಕೆ ಆಗಿದೆ. ಕೊರೋನಾ ಸಾವಿನ ಪ್ರಮಾಣ ಇನ್ನಷ್ಟುಇಳಿಕೆ ಆಗಿದ್ದು, ಶೇ. 1.83ಕ್ಕೆ ಕುಸಿದಿದೆ. ಈ ವರೆಗೆ ಒಟ್ಟೂ3.9 ಕೋಟಿ ಕೊರೋನಾ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ