
ಲಕ್ನೋ: ಮೂರು ಮಕ್ಕಳ ತಾಯಿಯೂ ಆಗಿರುವ 30 ವರ್ಷದ ಮಹಿಳೆಯೊಬ್ಬಳು ತನ್ನ ಧರ್ಮ ಬದಲಿಸಿಕೊಂಡು 12ನೇ ತರಗತಿಯಲ್ಲಿ ಓದುತ್ತಿದ್ದ ಯುವಕನೋರ್ವನನ್ನು ಮದುವೆಯಾದ ಅಚ್ಚರಿಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಿವಾನಿ ಅಲಿಯಾಸ್ ಶಬ್ನಮ್ ಹೀಗೆ ಕಾಲೇಜು ಹುಡುಗನನ್ನು ಮದುವೆಯಾಗಿ ಎಲ್ಲರನ್ನು ಅಚ್ಚರಿಗೊಳಿಸಿದ ಮಹಿಳೆ, ಮೂಲತಃ ಶಬ್ನಮ್ ಹೆಸರಿನ ಈಕೆಯ ಪೋಷಕರು ಯಾರೂ ಬದುಕಿಲ್ಲ, ಈಕೆಗೆ ಈಗಾಗಲೇ ಎರಡು ಮದುವೆಯಾಗಿದೆ ಹಸನ್‌ಪುರ ಸರ್ಕಲ್ ಆಫೀಸರ್ ದೀಪ್ ಕುಮಾರ್ ಪಂತ್ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ಅಮ್ರೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಮದುವೆಯಾಗುವ ಮೊದಲು ಈಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಅಮ್ರೋಹ್ ಜಿಲ್ಲೆಯ ದೇಗುಲವೊಂದರಲ್ಲಿ ಹಿಂದೂ ಸಂಪ್ರದಾಯದಂತೆ 18ರ ಹರೆಯದ ತರುಣನ ಜೊತೆ ಮದುವೆಯಾಗಿದ್ದಾಳೆ.
ಉತ್ತರ ಪ್ರದೇಶವು ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿರುವ ರಾಜ್ಯವಾಗಿದೆ. ಉತ್ತರ ಪ್ರದೇಶ ಕಾನೂನು ಬಾಹಿರ ಮತಾಂತರ ನಿಷೇಧ ಕಾಯ್ದೆ, 2021ರ ಪ್ರಕಾರ ಬಲವಂತ, ವಂಚನೆ ಅಥವಾ ಯಾವುದೇ ಇತರ ಮೋಸದ ವಿಧಾನಗಳ ಮೂಲಕ ಧಾರ್ಮಿಕ ಮತಾಂತರ ಮಾಡುವಂತಿಲ್ಲ. ಹೀಗಾಗಿ ಈ ಮದುವೆಯ ಸುತ್ತಲಿನ ಘಟನಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಇಲ್ಲಿಯವರೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ದೂರುಗಳು ದಾಖಲಾಗಿಲ್ಲ.
ಶಿವಾನಿ ಮೊದಲು ಮೀರತ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು, ಆದರೆ ಆ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿತು ನಂತರ ಅವಳು 2011 ರಲ್ಲಿ ರಸ್ತೆ ಅಪಘಾತದ ನಂತರ ಅಂಗವಿಕಲನಾಗಿದ್ದ ಸೈದನ್ವಾಲಿ ಗ್ರಾಮದ ನಿವಾಸಿ ತೌಫಿಕ್‌ನನ್ನು ಮದುವೆಯಾದಳು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಇತ್ತೀಚೆಗೆ, ಅವಳು 12 ನೇ ತರಗತಿಯಲ್ಲಿ ಓದುತ್ತಿರುವ 18 ವರ್ಷದ ಹುಡುಗನೊಂದಿಗೆ ಸಂಬಂಧ ಬೆಳೆಸಿದ್ದಾಳೆ.
ಶಬ್ನಮ್ ಕಳೆದ ವಾರ ಶುಕ್ರವಾರವಷ್ಟೇ ತನ್ನ 2ನೇ ಪತಿ ತೌಫಿಕ್‌ನಿಂದ ವಿಚ್ಛೇದನ ಪಡೆದಿದ್ದಳು. ನಂತರ ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಶಿವಾನಿ ಎಂಬ ಹೆಸರನ್ನು ಅಳವಡಿಸಿಕೊಂಡಳು. ಈ ವಿಚಾರಕ್ಕೆ ಸಂಬಂಧಿಸಿದಂತೆ 12 ನೇ ತರಗತಿಯ ವಿದ್ಯಾರ್ಥಿಯ ತಂದೆ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಮಗನ ನಿರ್ಧಾರವನ್ನು ಬೆಂಬಲಿಸುವುದಾಗಿ ಮತ್ತು ದಂಪತಿಗಳು ಸಂತೋಷವಾಗಿದ್ದರೆ ಕುಟುಂಬವು ಸಂತೋಷವಾಗಿರುತ್ತದೆ. ಇಬ್ಬರೂ ಶಾಂತಿಯುತವಾಗಿ ಒಟ್ಟಿಗೆ ಬದುಕುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ