ಲೋಕಸಭೆ ಎಲೆಕ್ಷನ್‌ಗೆ ವಿದೇಶದಿಂದ ಬಂದು ಮತ ಹಾಕಿದ್ದು 25606 ಜನ

By Kannadaprabha NewsFirst Published Oct 21, 2019, 11:50 AM IST
Highlights

ಭಾರತೀಯ ಪೌರತ್ವ ಉಳಿಸಿಕೊಂಡು ವಿದೇಶದಲ್ಲಿ ನೆಲೆಸಿರುವ 99,807 ಭಾರತೀಯರು | ವೋಟ್ ಹಾಕಿದ್ದು ಮಾತ್ರ 25606 ಜನ | ಈ ಪೈಕಿ ಕೇರಳದವರೇ 25 ಸಾವಿರ: ಚುನಾವಣಾ ಆಯೋಗ 

ಬೆಂಗಳೂರು (ಅ. 15): ಭಾರತೀಯ ಪೌರತ್ವ ಉಳಿಸಿಕೊಂಡು ವಿದೇಶದಲ್ಲಿ ನೆಲೆಸಿರುವ 99,807 ಭಾರತೀಯರು, ಈಗಲೂ ಸ್ವದೇಶದಲ್ಲಿ ಮತದಾನ ಮಾಡಬೇಕು ಎಂಬ ಆಸೆಯೊಂದಿಗೆ ಭಾರತದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಆದರೆ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ತೋರಿದ ಪ್ರತಿಕ್ರಿಯೆ ಮಾತ್ರ ನಿರಾಶಾದಾಯಕ ಎಂದು ಚುನಾವಣಾ ಆಯೋಗ ಹೇಳಿದೆ. ಸುಮಾರು 1 ಲಕ್ಷದಷ್ಟಿರುವ ಈ ಮತದಾರರ ಪೈಕಿ ಕೇವಲ 25606  ಸಾವಿರ ಮತದಾರರು ಕಳೆದ ಲೋಕಸಭೆ ಚುನಾವಣೆಯ ವೇಳೆ ಭಾರತಕ್ಕೆ ಆಗಮಿಸಿ ಮತ ಹಾಕಿದರು. ಆ ಪೈಕಿ ಕೇರಳದವರೇ 25,091 ಮಂದಿ ಎಂಬುದು ಗಮನಾರ್ಹ.

ಮಹಾರಾಷ್ಟ್ರ ಹರ್ಯಾಣ ಕದನ: ಬಿಜೆಪಿ ಜಯದ ಭವಿಷ್ಯ

ಒಟ್ಟು 91,850 ಪುರುಷ ಮತದಾರರಲ್ಲಿ ಹಕ್ಕು ಚಲಾಯಿಸಿದ್ದು 24,458 ಮಂದಿ. 7943 ಮಹಿಳಾ ಮತದಾರರ ಪೈಕಿ 1,148 ಮಹಿಳೆಯರು ಮಾತ್ರ ಭಾರತಕ್ಕೆ ಬಂದು ವೋಟು ಹಾಕಿದರು. 14 ತೃತೀಯ ಲಿಂಗಿ ಮತದಾರರೂ ಹೆಸರು ನೋಂದಾಯಿಸಿದ್ದರೂ, ಅವರು ಬರಲಿಲ್ಲ ಎಂದು ಅಂಕಿ-ಅಂಶಗಳು ಹೇಳಿವೆ. ಪ. ಬಂಗಾಳ ಹಾಗೂ ಪುದುಚೇರಿಯಲ್ಲಿ ಕ್ರಮ ವಾಗಿ 34, 272 ಸಾಗರೋತ್ತರ ಭಾರತೀಯ ಮತದಾರರಿದ್ದು, ಒಬ್ಬರೂ ಮತ ಹಾಕಲು ಸ್ವದೇಶಕ್ಕೆ ಬರಲಿಲ್ಲ.

ಆದರೆ ಕೇರಳದ 85,161 ಮತದಾರರು ಹೆಸರು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 25,091 ಮಂದಿ ಬಂದು ಮತ ಹಾಕಿದರು. ಇದು ಅತ್ಯಧಿಕ ಪ್ರಮಾಣ. ‘ಮತ ಹಾಕಲು ಸಾಕಷ್ಟು ಹಣ ಖರ್ಚು ಮಾಡಿಕೊಂಡು ತವರಿಗೆ ಬರಬೇಕು’ ಎಂಬುದೇ ಸಾಗರೋತ್ತರ ಮತದಾರರ ನಿರುತ್ಸಾಹಕ್ಕೆ ಕಾರಣ ಎನ್ನಲಾಗಿದೆ.

ಸಾಗರೋತ್ತರ ಭಾರತೀಯ ಮತದಾರರ ಪರ ಭಾರತದಲ್ಲಿ ಅವರ ಕುಟುಂಬದವರು ಅಥವಾ ಆಪ್ತರು ಮತ ಹಾಕಲು ಅವಕಾಶ ಮಾಡಿಕೊಡುವ ‘ಪರೋಕ್ಷ ಮತದಾನ’ ಮಸೂದೆ ಸಂಸತ್ತಿನಲ್ಲಿ ಪಾಸಾಗಿಲ್ಲ. 16 ನೇ ಲೋಕಸಭೆ ವಿಸರ್ಜನೆಯೊಂದಿಗೆ ಆ ಮಸೂದೆ ಕೂಡ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಈಗ ಮತ್ತೆ ಅದು ಮಂಡನೆಯಾಗುವ ಸಾಧ್ಯತೆ ಇದೆ.

click me!