'ಬಿಜೆಪಿಯನ್ನು ಯಾಕೆ ಸೋಲಿಸೋಕೆ ಸಾಧ್ಯವಿಲ್ಲ..; ಪ್ರಶಾಂತ್‌ ಕಿಶೋರ್‌ ಕೊಟ್ಟ ಕಾರಣ ಇದು..!

By Santosh NaikFirst Published Mar 22, 2023, 11:05 AM IST
Highlights

ಕಾಂಗ್ರೆಸ್‌ ಕುರಿತಾಗಿಯೂ ಮಾತನಾಡಿರುವ ಪ್ರಶಾಂತ್‌ ಕಿಶೋರ್‌, ನನ್ನ ಗುರಿ ಏನಿದ್ದರೂ ಮತ್ತೊಮ್ಮೆ ಕಾಂಗ್ರೆಸ್‌ಅನ್ನು ಬಲಿಷ್ಠ ಪಕ್ಷವಾಗಿ ನಿಲ್ಲಿಸೋದು. ಚುನಾವಣೆಗೆ ಗೆಲ್ಲೋದಕ್ಕೆ ಮಾತ್ರವೇ ಕಾಂಗ್ರೆಸ್‌ ಸೀಮಿತವಾಗಬಾರದು ಎಂದು ಹೇಳಿದ್ದಾರೆ.

ನವದೆಹಲಿ (ಮಾ.22): ಆಡಳಿತಾರೂಢ ಬಿಜೆಪಿ ಪಕ್ಷ ಸೇರಿದಂತೆ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳೂ ಕೂಡ ಸಿದ್ಧತೆಯಲ್ಲಿ ತೊಡಗಿವೆ. ಈ ವರ್ಷದಲ್ಲಿ ನಡೆಯಲಿರುವ ಎಲ್ಲಾ ರಾಜ್ಯಗಳ ಚುನಾವಣೆಯನ್ನೂ ಕೂಡ ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿಯೇ ನೋಡಲಾಗುತ್ತಿದೆ. ಪ್ರತಿ ಸಾಲಿನ ಲೋಕಸಭೆ ಚುನಾವಣೆಯಂತೆ ಈ ಬಾರಿಯೂ ಕೂಡ ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಚುನಾವಣಾ ಚಾಣಾಕ್ಷ ಹಾಗೂ ಜನ ಸೂರಜ್‌ ಅಧ್ಯಕ್ಷ ಪ್ರಶಾಂತ್‌ ಕಿಶೋರ್‌ ಅಲಿಯಾಸ್‌ ಪಿಕೆ, 2024ರ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟು ಸಾಧ್ಯವಾಗೋದಿಲ್ಲ ಎಂದು ಹೇಳಿದ್ದಾರೆ. ಅಸ್ಥಿರ ಹಾಗೂ ಸೈದ್ದಾಂತಿಕವಾಗಿ ಭಿನ್ನವಾಗಿರುವ ಆಲೋಚನೆಗಳ ಕಾರಣ ಪ್ರತಿಪಕ್ಷಗಳ ಒಗ್ಗಟ್ಟು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದೊಂದಿಗೆ ಹಿರಿಯ ರಾಜಕೀಯ ತಂತ್ರಗಾರ, ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆಯಿಂದ ಆಗಿರುವ ಲಾಭಗಳ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟು ಬರೀ ಫೋಟೋಗೆ ಮಾತ್ರವೇ ಸೀಮಿತವಾಗಿದೆ. ಕೇವಲ ಪಕ್ಷಗಳು ಅಥವಾ ನಾಯಕರನ್ನು ಒಟ್ಟುಗೂಡಿಸಿದ ಮಾತ್ರಕಕ್ಕೆ ಸೈದ್ದಾಂತಿಕವಾಗಿ ಭಿನ್ನವಾಗಿರುವ ಪಕ್ಷಗಳನ್ನು ಒಂದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇತ್ತೀಚೆಗೆ ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್‌ ಕಿಶೋರ್‌ 2024ರ ಚುನಾವಣೆಯ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಪ್ರಶಾಂತ್‌ ಕಿಶೋರ್‌ ಹೇಳಿದ್ದೇನು: ಕೇವಲ ಒಂದಿಬ್ಬರು ಪ್ರಮುಖ ನಾಯಕರನ್ನು ಒಟ್ಟುಗೂಡಿಸಿದ ಮಾತ್ರಕ್ಕೆ ಬಿಜೆಪಿಗೆ ಸವಾಲು ಹಾಕಲು ಸಾಧ್ಯವಿಲ್ಲ. ನೀವೇನಾದರೂ ಬಿಜೆಪಿಗೆ ಸವಾಲು ಹಾಕಬೇಕಾದಲ್ಲಿ, ಆ ಪಕ್ಷದ ಬಲವೇನು ಅನ್ನೋದನ್ನ ನೀವು ಅರ್ಥ ಮಾಡಿಕೊಳ್ಳಬೇಕು. ಹಿಂದುತ್ವ, ರಾಷ್ಟ್ರೀಯವಾದ ಹಾಗೂ ಅವರ ಅಭಿವೃದ್ಧಿ ಅಜೆಂಡಾದಿಂದ ಲಾಭ ಪಡೆದವರೇ ಬಿಜೆಪಿಯ ಬಲ. ಹೀಗಿರುವಾಗ ಬಿಜೆಪಿಯ ವಿರುದ್ಧ ಹೋರಾಟ ಮಾಡಬೇಕಾದಲ್ಲಿ ಎರಡು ರೀತಿಯಲ್ಲಿ ನಾವು ಹೋರಾಟ ಮಾಡಬೇಕಾಗುತ್ತದೆ. ಬಿಜೆಪಿಯ ಬೇಧಿಸುವ ಪ್ರಯತ್ನವವೇ ಆಗುತ್ತಿಲ್ಲ. ಹಾಗೇನಾದರೂ ಬಿಜೆಪಿಯ ಪಕ್ಷವನ್ನು ಬಲ ಗೊತ್ತಿದ್ದರೆ, ಈಗಾಗಲೇ ಅವರ ವಿರುದ್ಧ ಜಯ ಸಾಧಿಸುತ್ತಿದ್ದೆವು. ಮಹಾಮೈತ್ರಿಯು ಬಿಹಾರದಲ್ಲಿ ಕೇವಲ ಪಕ್ಷಗಳ ಒಕ್ಕೂಟವಾಗಿರಲಿಲ್ಲ. ಇದು ಸಿದ್ಧಾಂತದ ಒಕ್ಕೂಟವಾಗಿತ್ತು. ಏನು ಮಾಡಬೇಕೆಂದು ಪ್ರತಿ ಕಾರ್ಯಕ್ರಮದಲ್ಲಿಯೂ ತಿಳಿಸಲಾಗಿತ್ತು ಎಂದರು.

ಪ್ರಶಾಂತ್‌ ಕಿಶೋರ್‌ ಗುಪ್ತವಾಗಿ ಬಿಜೆಪಿಗೆ ಸಹಾಯ ಮಾಡುತ್ತಿರಬಹುದು: ನಿತೀಶ್‌ ಕುಮಾರ್‌

ಗಾಂಧಿ ಕುಟುಂಬದ ಜೊತೆಗಿನ ಮನಸ್ತಾಪ: ಇದೇ ವೇಳೆ ಪ್ರಶಾಂತ್‌ ಕಿಶೋರ್‌, ಗಾಂಧಿ ಕುಟುಂಬದ ಜೊತೆಗಿನ ತಮ್ಮ ಮನಸ್ತಾಪದ ಬಗ್ಗೆಯೂ ಮಾತನಾಡಿದರು. ಕಾಂಗ್ರೆಸ್‌ ಪಕ್ಷದಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡುವ ಯೋಜನೆಯನ್ನು ನನಗೆ ನೀಡಲಾಗಿತ್ತು. 'ಕಾಂಗ್ರೆಸ್‌ನ ಬದಲಾವಣೆಗೆ ಪ್ಲ್ಯಾನ್‌ ನೀಡೋದು ನನ್ನ ಗುರಿಯಾಗಿತ್ತು. ಚುನಾವಣೆ ಗೆಲ್ಲೋಕೆ ಏನು ಮಾಡಬೇಕು ಅನ್ನೋದು ನನ್ನ ಗೋಲ್‌ ಆಗಿತ್ತು. ಆದರೆ, ನಾನು ಹೇಳಿದ ಯೋಚನೆಗಳನ್ನು ಒಪ್ಪಲು ಅವರು ನಿರಾಕರಿಸಿದರು' ಎಂದರು. ಇನ್ನು ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯ ಬಗ್ಗೆ ಮಾತನಾಡಿದ ಪ್ರಶಾಂತ್‌ ಕಿಶೋರ್‌, ರಾಷ್ಟ್ರವ್ಯಾಪಿ ನಡೆದ ಅವರ ಪಾದಯಾತ್ರೆಯಿಂದ ಯಾವ ರೀತಿಯ ಲಾಭವಾಗಿದೆ ಅನ್ನೋದ ಹೇಳೋಕೆ ಸಾಧ್ಯವಿಲ್ಲ ಎಂದರು.

ನಾನು ರಾಹುಲ್‌ ಗಾಂಧಿಗೆ ಸಮಾನ ವ್ಯಕ್ತಿ ಅಲ್ಲ: ಪ್ರಶಾಂತ್‌ ಕಿಶೋರ್‌

ಭಾರತ್‌ ಜೋಡೋ ಯಾತ್ರೆ ಎಂದರೆ ಕೇವಲ ಬರೀ ನಡೆದಾಡೋದಲ್ಲ. ಆರು ತಿಂಗಳ ಅವರ ಯಾತ್ರೆಗೆ ಎಷ್ಟು ಮೆಚ್ಚುಗೆಗಳು ಬಂದವೋ, ಅಷ್ಟೇ ಟೀಕೆಗಳು ಬಂದವು. ಆರು ತಿಂಗಳು ಪಾದಯಾತ್ರೆ ನಡೆದ ಬಳಿಕ ಏನಾದರೂ ಬದಲಾವಣೆ ಆಗಿದೆ ಅನ್ನೋದನ್ನ ಅವರು ಗಮನಿಸಿದ್ದಾರೆಯೇ? ಈ ಯಾತ್ರೆಯಿಂದ ಪಕ್ಷದ ಚುನಾವಣಾ ಭವಿಷ್ಯ ಬದಲಾಗಬೇಕು. ನಾನು ಕೇವಲ ನಾಲ್ಕು ಜಿಲ್ಲೆಗಳನ್ನಷ್ಟೇ ಪಾದಯಾತ್ರೆ ಮಾಡಬಲ್ಲೆ. ನನ್ನ ಪ್ರಕಾರ ಪ್ರಯಾಣ ಮಾಡುವುದು ಯೋಜನೆಯಾಗಬಾರದು. ಆಯಾ ವಲಯವನ್ನು ತಿಳಿದುಕೊಳ್ಳುವುದು ಪಾದಯಾತ್ರೆಯ ಯೋಜನೆಯಾಗಿರಬೇಕು ಎಂದು ಹೇಳಿದರು.

click me!