ಅಬಾರ್ಷನ್‌ಗೆ ಯುವತಿ ಅರ್ಜಿ : ಮಗು ಹೆತ್ತು ದತ್ತು ನೀಡುವಂತೆ ಮನವೊಲಿಸಿದ ಸಾಲಿಸಿಟರ್ ಜನರಲ್

By Anusha KbFirst Published Feb 3, 2023, 1:42 PM IST
Highlights

20 ವರ್ಷದ ಯುವತಿಯೊಬ್ಬಳು ತನಗೆ ಬೇಕಾಗಿಲ್ಲದ ತನ್ನ 29 ವಾರಗಳ ಗರ್ಭವನ್ನು ಅಬಾರ್ಷನ್ ಮಾಡಿಸುವುದಕ್ಕೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನವದೆಹಲಿ: 20 ವರ್ಷದ ಯುವತಿಯೊಬ್ಬಳು ತನಗೆ ಬೇಕಾಗಿಲ್ಲದ ತನ್ನ 29 ವಾರಗಳ ಗರ್ಭವನ್ನು ಅಬಾರ್ಷನ್ ಮಾಡಿಸುವುದಕ್ಕೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ನ್ಯಾಯಾಧೀಶರು, ಮಗುವಿಗೆ ಜನ್ಮ ನೀಡಿ ಮಗುವನ್ನು ದತ್ತು ನೀಡುವಂತೆ ಆಕೆಯ ಮನವೊಲಿಸಿದ್ದಾರೆ. ಇದಕ್ಕೆ ಸಮ್ಮತಿ ಸೂಚಿಸಿದ ಯುವತಿ ಮಗುವನ್ನು ಉಳಿಸಿಕೊಂಡು ಜನ್ಮ ನೀಡಲು ನಿರ್ಧರಿಸಿದ್ದಾಳೆ. 

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಸಾಲಿಸಿಟರ್ ಜನರಲ್ ಸೂಚಿಸಿದ ಮತ್ತು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದಲ್ಲಿ (CARA)ನೋಂದಾಯಿಸಲ್ಪಟ್ಟಿರುವ ದಂಪತಿಯೊಬ್ಬರಿಗೆ ಇನ್ನಷ್ಟೇ ಜನಿಸಲಿರುವ ಮಗುವನ್ನು ದತ್ತು ತೆಗೆದುಕೊಳ್ಳಲು ಅನುಮತಿ ನೀಡಿದೆ. ಅಲ್ಲದೇ  ಮಗು ಹೆತ್ತು ದತ್ತು ನೀಡಲು ನಿರ್ಧರಿಸಿದ ಯುವತಿಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವೈದ್ಯಕೀಯ ಸೌಲಭ್ಯವನ್ನು ಒದಗಿಸುವಂತೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS)ಗೆ ಸೂಚಿಸಿದೆ. 

ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಸಂಪೂರ್ಣ ನ್ಯಾಯ ನೀಡಲು ಸುಪ್ರೀಂಕೋರ್ಟ್‌ನ ಅಂತರ್ಗತ ನ್ಯಾಯ ವ್ಯಾಪ್ತಿಯನ್ನು ಆಹ್ವಾನಿಸಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿನಿಯಾಗಿರುವ ಗರ್ಭಿಣಿ ಯುವತಿ ಸುಪ್ರೀಂಕೋರ್ಟ್ ಪೀಠದ ಮುಂದೆ  ತನ್ನ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಅದರಂತೆ ಇದಕ್ಕೂ ಹಿಂದಿನ  ವಿಚಾರಣೆಯಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Solicitor General Tushar Mehta) ಅವರು 29 ವಾರಗಳಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವುದು ಮಗುವನ್ನು ಕೊಲ್ಲುವುದಕ್ಕೆ ಸಮ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದೇ ರೀತಿಯ ಆತಂಕವನ್ನು ಸುಪ್ರೀಂಕೋರ್ಟ್ ಸಿಜೆಐ ಚಂದ್ರಚೂಡ್ (CJI Chandrachud) ಅವರು ಕೂಡ ಗಮನಿಸಿದ್ದರು.  

 ಯುವತಿ ಈಗಾಗಲೇ 8 ತಿಂಗಳ ಗರ್ಭಿಣಿ ಆಗಿದ್ದು, ಇದು ಸಾಮಾನ್ಯ ಗರ್ಭಪಾತವಲ್ಲ ಎಂದು ಏಮ್ಸ್ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೇಳಿತ್ತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ವಕೀಲರು, ನಾನು ಅರ್ಜಿದಾರರೊಂದಿಗೆ ವರದಿಯನ್ನು ಚರ್ಚಿಸಿದೆ. ನನ್ನ ಕಕ್ಷಿದಾರರು ಗರ್ಭಪಾತವನ್ನು ಬಯಸುತ್ತಾರೆ. ಒಂದು ವೇಳೆ ಮಗುವನ್ನು ಉಳಿಸಿಕೊಂಡರೆ ಆಕೆಯ ವೃತ್ತಿಜೀವನವು ಹಾಳಾಗುತ್ತದೆ ಮತ್ತು ಅವಳ ಜೀವನದ ಘನತೆಗೆ ಧಕ್ಕೆಯಾಗುತ್ತದೆ ಎಂದು ವಕೀಲರು ವಾದಿಸಿದ್ದರು.  ಹೀಗಾಗಿ ಈ ವಿಚಾರದ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ವಿದ್ಯಾರ್ಥಿಯೊಂದಿಗೆ ಆಯ್ಕೆಗಳ ಕುರಿತು ಚರ್ಚಿಸಿ ಆಕೆಗೆ ಮಾರ್ಗದರ್ಶನ ನೀಡಿ ಆಕೆಯೊಂದಿಗೆ ಸಂವಾದ ನಡೆಸುವಂತೆ  ಸುಪ್ರೀಂಕೋರ್ಟ್‌ ಕೋರಿತು. 

ಅದರಂತೆ  ಸಾಲಿಸಿಟರ್ ಜನರಲ್ (Additional Solicitor General) ಐಶ್ವರ್ಯಾ ಭಾಟಿ ಗರ್ಭಪಾತದ ಹೊರತಾಗಿ ವಿದ್ಯಾರ್ಥಿನಿಗೆ ಇರುವ ಆಯ್ಕೆಯ ಕುರಿತು ಆಕೆಯ ಮನವೊಲಿಸಿದರು. ಅಲ್ಲದೇ ಆಕೆಗೆ ವೈದ್ಯಕೀಯ ಸೌಲಭ್ಯ ನೀಡುವ ಜೊತೆಗೆ ಮಗುವನ್ನು ದತ್ತು ನೀಡುವ ಪ್ರಕ್ರಿಯೆಗೆ ಒಪ್ಪುವಂತೆ ಮನವೊಲಿಸಿದರು. ಅದರಂತೆ ಆಕೆ ನಿನ್ನೆ ನಡೆದ ವಿಚಾರಣೆ ವೇಳೆ ಮಗುವನ್ನು ಗರ್ಭಪಾತಕ್ಕೊಳಪಡಿಸದೇ ಉಳಿಸಿಕೊಂಡು ಜನ್ಮದ ನಂತರ ದತ್ತು ನೀಡುವುದಕ್ಕೆ ಒಪ್ಪಿದ್ದಾಳೆ ಎಂದು ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ (Aishwarya Bhati) ಕೋರ್ಟ್‌ಗೆ ಮಾಹಿತಿ ನೀಡಿದರು.  ಅಲ್ಲದೇ ಮಗುವನ್ನು ದತ್ತು ಪಡೆಯಲು ಬಯಸಿರುವವರನ್ನು ಕೂಡ ಗುರುತಿಸಲಾಗಿದೆ ಎಂದು ಅವರು ಕೋರ್ಟ್‌ಗೆ ಹೇಳಿದರು. 

ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರವು (CARA) ಈ ಮಗುವನ್ನು ಯಾರು ದತ್ತು ಪಡೆಯಬಹುದು ಎಂದು ನಿರ್ಧರಿಸುತ್ತದೆ. ಮಗುವನ್ನು ದತ್ತು ತೆಗೆದುಕೊಳ್ಳಲು ಸಿದ್ಧವಿರುವ ದಂಪತಿಗಳು ಇದ್ದಾರೆ ಮತ್ತು ಅವರಿಂದ ಮಗುವಿಗೆ ಅತ್ಯುತ್ತಮವಾದ ಪಾಲನೆ ಸಿಗುತ್ತದೆ. ಆದರೆ ನಾನು ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಮಗುವಿನ ಭವಿಷ್ಯದ ಪೋಷಕರು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದೊಂದಿಗೆ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ  ಎಂದು ಅವರು ಕೋರ್ಟ್‌ಗೆ ಮಾಹಿತಿ ನೀಡಿದರು. 

ಹೀಗಾಗಿ ಮಗುವಿನ ಸುರಕ್ಷಿತ  ಜನನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಏಮ್ಸ್‌ಗೆ (AIIMS) ನಿರ್ದೇಶಿಸಬಹುದು ಎಂದು ನ್ಯಾಯಾಲಯವು ಸೂಚಿಸಿತು. ಅಲ್ಲದೇ ಈ ಮಗು ಮಾರ್ಚ್ 1 ರ ಸುಮಾರಿಗೆ ಜನನವಾಗಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ನಡುವೆ ವಿದ್ಯಾರ್ಥಿನಿ ಪರ ವಕೀಲರು, ಗರ್ಭಾವಸ್ಥೆಯಲ್ಲಿ ಆಕೆಗೆ ಆದ ನಷ್ಟದ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಅವಳು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾಳೆ. ಅವಳು ಹಾಸ್ಟೆಲ್ ತೊರೆದಿದ್ದಾಳೆ ಮತ್ತು ಗರ್ಭಧಾರಣೆಯು (pregnancy) ಈಗ ಸ್ಪಷ್ಟವಾಗಿ ಗೋಚರಿಸುತ್ತದೆ. ಅವಳು ಮಾನಸಿಕವಾಗಿ ಕುಗ್ಗಿದ್ದು, ಆಕೆಯ ಜೀವನವು ಅಪಾಯದಲ್ಲಿದೆ ಎಂದು ವಕೀಲರು ಮನವಿ ಮಾಡಿದ್ದರು. 

ಈ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು, ವಿದ್ಯಾರ್ಥಿನಿಗೆ ತಮ್ಮ ಸ್ವಂತ ಮನೆಯಲ್ಲಿ ಆಶ್ರಯ ನೀಡುವುದಾಗಿ ಹೇಳಿದರು. ಬೇಕಾದರೆ ಆಕೆಯನ್ನು ನನ್ನ ಸ್ವಂತ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಯಾಗಿ, ನ್ಯಾಯಾಲಯವು  ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ಖಾಸಗಿಯಾಗಿ ಚರ್ಚಿಸವುದಕ್ಕಾಗಿ ಎಸ್‌ಜಿ ಮೆಹ್ತಾ (SG Mehta) ಮತ್ತು ಎಎಸ್‌ಜಿ ಭಾಟಿ (ASG Bhati) ಅವರನ್ನು ನ್ಯಾಯಾಲಯದ ಕೋಣೆಗೆ ಬರುವಂತೆ ಕೇಳಿತು.

click me!