Covid-19 Crisis: ಒಂದೇ ದಿನದಲ್ಲಿ 20 ಸಾವಿರ ಕೋವಿಡ್‌ ಪ್ರಕರಣಗಳು ಇಳಿಕೆ

By Kannadaprabha NewsFirst Published Jan 19, 2022, 2:50 AM IST
Highlights

ಭಾರತದಲ್ಲಿ ಕೊರೋನಾ ಸೋಂಕು ಪ್ರಮಾಣ ಇಳಿಮುಖದ ಹಾದಿಯಲ್ಲಿದ್ದು, ಸೋಮವಾರಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ ಮಂಗಳವಾರ 20 ಸಾವಿರ ಕಮ್ಮಿ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. 

ನವದೆಹಲಿ (ಜ.19): ಭಾರತದಲ್ಲಿ ಕೊರೋನಾ ಸೋಂಕು (Coronavirus) ಪ್ರಮಾಣ ಇಳಿಮುಖದ ಹಾದಿಯಲ್ಲಿದ್ದು, ಸೋಮವಾರಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ ಮಂಗಳವಾರ 20 ಸಾವಿರ ಕಮ್ಮಿ ಕೋವಿಡ್‌ ಪ್ರಕರಣಗಳು (Covid Cases) ದಾಖಲಾಗಿವೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 2,38,018 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 

ಇದು ಸೋಮವಾರದ 2.58 ಲಕ್ಷಕ್ಕೆ ಹೋಲಿಸಿದರೆ 20 ಸಾವಿರ ಕಡಿಮೆ. ಇದೇ ವೇಳೆ 310 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸತತ 3 ದಿನದಿಂದ ಕೋವಿಡ್‌ ಕೇಸುಗಳು ಕಡಿಮೆ ಆಗುತ್ತಿವೆ. ಭಾನುವಾರ 2.71 ಲಕ್ಷ ಪ್ರಕರಣ ದಾಖಲಾಗಿದ್ದವು.

ಸಕ್ರಿಯ ಕೇಸು ದಾಖಲೆ: ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 17.36 ಲಕ್ಷಕ್ಕೆ ಏರಿಕೆಯಾಗಿದೆ. ಇದು ಕಳೆದ 230 ದಿನಗಳ (7.5 ತಿಂಗಳು) ಗರಿಷ್ಠ ಸಂಖ್ಯೆಯಾಗಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.94.09ರಷ್ಟಿದೆ. ಸೋಮವಾರ ಶೇ.19ಕ್ಕೇರಿದ್ದ ದೈನಂದಿನ ಪಾಸಿಟಿವಿಟಿ ದರ ಮಂಗಳವಾರ ಶೇ.14.43ಕ್ಕೆ ಇಳಿದಿದೆ. ವಾರದ ಪಾಸಿಟಿವಿಟಿ ದರ ಶೇ.14.92ರಷ್ಟಿದೆ.

ಹೊಸ ಸೋಂಕಿತರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.76 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,86,761ಕ್ಕೆ ತಲುಪಿದೆ. 3.53 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 158.04 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

682 ಒಮಿಕ್ರೋನ್‌ ಕೇಸ್‌ ಪತ್ತೆ: ಮಂಗಳವಾರ ದೇಶದಲ್ಲಿ 682 ಒಮಿಕ್ರೋನ್‌ ಪ್ರಕರಣಗಳು (Omicron Cases) ಪತ್ತೆಯಾಗಿವೆ. ಈ ಮೂಲಕ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 8891ಕ್ಕೆ ಏರಿಕೆಯಾಗಿದೆ.

ಒಟ್ಟಿಗೆ ಎರಡು ಪ್ರತ್ಯೇಕ ಕೋವಿಡ್‌ ಅಲೆ: ಒಮಿಕ್ರೋನ್‌ (Omicron) ರೂಪಾಂತರಿ ಕೊರೋನಾ ವೈರಸ್‌ನ (Coronavirus) ಗುಣಲಕ್ಷಣಗಳು, ಸೋಂಕಿನ ಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಕುತೂಹಲ ಹೊಂದಿರುವ ಹೊತ್ತಿನಲ್ಲೇ, ಇದುವರೆಗೆ ಪತ್ತೆಯಾದ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ಗೆ ನಂಟಿಲ್ಲ. ಇದೊಂದು ಪ್ರತ್ಯೇಕ ಪ್ರಭೇದ. ಹೀಗಾಗಿ ಭಾರತದಲ್ಲೀಗ ಸಮಾನಾಂತರಾವಾಗಿ ಎರಡು ಕೋವಿಡ್‌ ಅಲೆ ಕಾಣಿಸಿಕೊಂಡಿದೆ ಎಂದು ಹಿರಿಯ ವೈದ್ಯರೊಬ್ಬರು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾಜಿ ಮುಖ್ಯಸ್ಥ, ಹಿರಿಯ ವೈರಾಣು ತಜ್ಞ ಡಾ. ಟಿ.ಜಾಕೋಬ್‌ ಜಾನ್‌ (T Jacob John) ಮಾತನಾಡಿ, ‘ವುಹಾನ್‌ನಲ್ಲಿ ಮೊತ್ತ ಮೊದಲಿಗೆ ಸೋಂಕಿಗೆ ಕಾರಣವಾದ ವುಹಾನ್‌-ಡಿ614ಜಿ, ನಂತರ ಕಾಣಿಸಿಕೊಂಡ ಆಲ್ಪಾ, ಬೀಟಾ, ಗಾಮಾ, ಡೆಲ್ಟಾ, ಕಪ್ಪಾ, ಮು ಸೇರಿದಂತೆ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ ಸಂಬಂಧ ಹೊಂದಿಲ್ಲ. ಇದು ಸಂಪೂರ್ಣವಾಗಿ ಬೇರೆ ಮೂಲದಿಂದ ಉಗಮವಾಗಿರುವ ವೈರಸ್‌’ ಎಂದು ಹೇಳಿದ್ದಾರೆ.

Coronavirus: ಒಮಿಕ್ರೋನ್‌, ಡೆಲ್ಟಾಗೆ  ಕೋವ್ಯಾಕ್ಸಿನ್‌ ಬೂಸ್ಟರ್ ಡೋಸ್‌ ಭರ್ಜರಿ ಮದ್ದು!

‘ಕೋವಿಡ್‌ ಸಾಂಕ್ರಾಮಿಕದ ಬೆಳವಣಿಗೆಯ ಹಾದಿಯಲ್ಲಿ ಕಂಡುಬಂದ ಯಾವುದೇ ವೈರಸ್‌ ಜೊತೆಗೆ ಇದು ನಂಟು ಹೊಂದಿಲ್ಲ. ಹೀಗಾಗಿ ನಾವೀಗ ಭಾರತದಲ್ಲಿ ಡೆಲ್ಟಾಮತ್ತು ಒಮಿಕ್ರೋನ್‌ ಎಂಬ ಎರಡು ಪ್ರತ್ಯೇಕ ಕೋವಿಡ್‌ ಅಲೆಯನ್ನು ಎದುರಿಸುತ್ತಿದ್ದೇವೆ ಎಂಬ ಚಿಂತನೆಯತ್ತ ಸಾಗಬೇಕಿದೆ’ ಎಂದು ಜಾನ್‌ ಹೇಳಿದ್ದಾರೆ.  ‘ಸಾಂಪ್ರದಾಯಿಕ ಕೋವಿಡ್‌ ವೈರಸ್‌ಗಳಿಗೆ ಹೋಲಿಸಿದರೆ ಒಮಿಕ್ರೋನ್‌ ಸಾಕಷ್ಟುಭಿನ್ನವಾಗಿದೆ. ಹೀಗಾಗಿಯೇ ಒಮಿಕ್ರೋನ್‌ ಅನ್ನು ಕೇವಲ ಜಿನೋಮ್‌ ಸೀಕ್ವೆನ್ಸಿಂಗ್‌ ಮೂಲಕ ಮಾತ್ರವೇ ಪತ್ತೆ ಹಚ್ಚಬಹುದು. ಇತರೆ ವೈರಸ್‌ ಶ್ವಾಸಕೋಶಕ್ಕೆ ತೊಂದರೆ ಮೂಡಿಸಿದರೆ, ಒಮಿಕ್ರೋನ್‌ ಕೇವಲ ಗಂಟಲು ಭಾಗದಲ್ಲಿ ಇರುತ್ತದೆ’ ಎಂದು ಜಾನ್‌ ಹೇಳಿದ್ದಾರೆ.

click me!