Ladakh: ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣಕ್ಕೆ ವೇಗ

By Kannadaprabha News  |  First Published Jan 19, 2022, 2:05 AM IST

ಪೂರ್ವ ಲಡಾಖ್‌ನಲ್ಲಿ ಬರುವ ಪ್ಯಾಂಗ್ಯಾಂಗ್‌ ಸರೋವರಕ್ಕೆ ದೊಡ್ಡದೊಂದು ಸೇತುವೆ ನಿರ್ಮಿಸುತ್ತಿರುವ ಚೀನಾ ಸೇನೆ, ಮುಂಬರುವ ಚಳಿಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಕ್ಕೆ ಮುಂದಾಗಿದೆ.


ನವದೆಹಲಿ (ಜ.19): ಪೂರ್ವ ಲಡಾಖ್‌ನಲ್ಲಿ (Ladakh) ಬರುವ ಪ್ಯಾಂಗ್ಯಾಂಗ್‌ (Pangong) ಸರೋವರಕ್ಕೆ ದೊಡ್ಡದೊಂದು ಸೇತುವೆ ನಿರ್ಮಿಸುತ್ತಿರುವ ಚೀನಾ (China) ಸೇನೆ, ಮುಂಬರುವ ಚಳಿಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಕ್ಕೆ ಮುಂದಾಗಿದೆ. ಜ.16ರಂದು ಉಪಗ್ರಹ ಸೆರೆಹಿಡಿದಿರುವ ಚಿತ್ರಗಳು, ಚೀನಾ ದೊಡ್ಡ ಕ್ರೇನ್‌ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಸೇತುವೆ ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸಲು ಯತ್ನಿಸುತ್ತಿರುವುದನ್ನು ಖಚಿತಪಡಿಸಿವೆ.

ಪ್ಯಾಂಗ್ಯಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣದ ದಂಡೆಯ ನಡುವೆ ಸಂಪರ್ಕ ಕಲ್ಪಿಸಲು, ಚೀನಾ ಅಕ್ರಮವಾಗಿ ಸೇತುವೆ ನಿರ್ಮಿಸುತ್ತಿರುವ ವಿಷಯ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಇದೀಗ ಬಿಡುಗಡೆಯಾಗಿರುವ ಹೊಸ ಚಿತ್ರಗಳು, ಚಳಿಗಾಲದ ಹಿಮ ಆವರಿಸಿಕೊಳ್ಳುವ ಮುನ್ನವೇ ಸೇತುವೆಯನ್ನು ಬಳಕೆಗೆ ಸಜ್ಜುಗೊಳಿಸಲು ಚೀನಾ ಹರಸಾಹಸ ಪಡುತ್ತಿರುವ ವಿಷಯವನ್ನು ಖಚಿತಪಡಿಸಿವೆ.

Tap to resize

Latest Videos

8 ಮೀಟರ್‌ ಆಗಲ, 400 ಮೀಟರ್‌ ಉದ್ದದ ಈ ಸೇತುವೆ ಒಮ್ಮೆ ಬಳಕೆಗೆ ಸಿದ್ಧವಾದರೆ, ಸರೋವರದ ಎರಡೂ ದಡದ ಮೇಲೆ ತನ್ನ ಸೇನೆಯನ್ನು ತ್ವರಿತವಾಗಿ ನಿಯೋಜನೆಗೊಳಿಸುವುದು ಚೀನಾ ಸೇನೆಗೆ ಸಾಧ್ಯವಾಗಲಿದೆ. ಅಲ್ಲದೆ ಸರೋವರದ ಉತ್ತರ ದಂಡೆಯಲ್ಲಿ ಬೀಡುಬಿಡುವ ಚೀನಾ ಸೇನೆ ರುಟೋಗ್‌ ನೆಲೆಗೆ ತೆರಳಲು 200 ಕಿ.ಮೀನಷ್ಟುಭಾರೀ ದೂರ ಸಾಗಬೇಕಾದ ಪ್ರಮೇಯ ತಪ್ಪಲಿದೆ. ಸೇತುವೆಯು ಸಂಚಾರದ ದೂರವನ್ನು 150 ಕಿ.ಮೀನಷ್ಟುಕಡಿತಗೊಳಿಸಲಿದೆ. ಚೀನಾ ಇದೀಗ ಸೇತುವೆ ನಿರ್ಮಾಣ ಮಾಡುತ್ತಿರುವ ಸ್ಥಳ 1958ರಿಂದಲೂ ಅಕ್ರಮವಾಗಿ ಚೀನಾ ವಶದಲ್ಲೇ ಇದೆ. ಭಾರತ ವಾಸ್ತವ ಗಡಿ ರೇಖೆ ಎಂದು ಹೇಳುವ ಪ್ರದೇಶದ ಪಕ್ಕದಲ್ಲೇ ಈ ಸೇತುವೆ ನಿರ್ಮಾಣವಾಗುತ್ತಿದೆ.

Ladakh Issue: ಲಡಾಖ್‌ ಗಡಿಯಲ್ಲಿ ಸೇತುವೆ: ಚೀನಾ ಮತ್ತೆ ಕಿರಿಕ್‌

ಹೀಗಾಗಿ ಈ ಸೇತುವೆಯನ್ನು ಚೀನಾದ ಅಕ್ರಮ ನಿರ್ಮಾಣ ಎಂದೇ ಭಾರತ ವಾದಿಸುತ್ತಿದೆ. ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೇನೆ ಹಲವು ತಿಂಗಳ ಕಾಲ ಮುಖಾಮುಖಿಯಾಗಿ ಇನ್ನೇನು ಯುದ್ಧ ಆರಂಭವಾಯಿತು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆ ವೇಳೆ ಭಾರತೀಯ ಯೋಧರು ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾದ ಕೈಲಾಶ ಬೆಟ್ಟದ ಮೇಲೆ ತಮ್ಮ ಪ್ರಾಬಲ್ಯ ಸ್ಥಾಪಿಸುವ ಮೂಲಕ ಚೀನಾಕ್ಕೆ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಚೀನಾ ಇದೀಗ ತ್ವರಿತವಾಗಿ ಸೇತುವೆ ನಿರ್ಮಾಣ ಮಾಡುವ ಮೂಲಕ ಇಡೀ ಪ್ರದೇಶದಲ್ಲೇ ಭಾರತಕ್ಕೆ ಮೇಲುಗೈ ಸಿಗದಂತೆ ಯತ್ನ ಮಾಡುತ್ತಿದೆ.

-ಪ್ಯಾಂಗ್ಯಾಂಗ್‌ ಸರೋವರದ ಸನಿಹ ರುಟೋಗ್‌ ಎಂಬಲ್ಲಿ ಚೀನಾ ನೆಲೆ ಇದೆ
-ಈವರೆಗೆ ಇಲ್ಲಿಗೆ ತೆರಳಲು ಪ್ಯಾಂಗ್ಯಾಂಗ್‌ ಸರೋವರ ಅಡ್ಡಿ ಆಗುತ್ತಿತ್ತು
-200 ಕಿ.ಮೀ.ನಷ್ಟುಸುತ್ತಿ ಬಳಸಿ ಸಾಗಿ ಚೀನಾ ಸೈನಿಕರು ರುಟೋಗ್‌ಗೆ ಬರಬೇಕಿತ್ತು
-ಈಗ ಸರೋವರದ ಉತ್ತರ-ದಕ್ಷಿಣ ದಂಡೆ ಸಂಪರ್ಕಿಸಲು ಚೀನಾದಿಂದ ಸೇತುವೆ ನಿರ್ಮಾಣ
-ಇದರಿಂದ ಕೇವಲ 50 ಕಿ.ಮೀ.ನಷ್ಟುಸಾಗಿ ರುಟೋಗ್‌ ನೆಲೆ ತಲುಪಬಹುದು

ಪ್ಯಾಂಗೋಂಗ್‌ನಲ್ಲಿ ಸೇತುವೆ ಕಟ್ಟಿದ ಜಾಗ 60 ವರ್ಷದಿಂದ ಚೀನಾ ವಶದಲ್ಲಿದೆ: ಪೂರ್ವ ಲಡಾಖ್‌ನ ಪ್ಯಾಂಗೋಂಗ್‌ನಲ್ಲಿ ಸರೋವರದ ಬಳಿ ಭಾರತಕ್ಕೆ ಸೇರಿದ ಜಾಗದಲ್ಲಿ ಚೀನಾ ಹೊಸದಾಗಿ ಸೇತುವೆ ಕಟ್ಟಿದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಅಲ್ಲಗಳೆದಿದೆ. ಚೀನಾ ಸೇತುವೆ ಕಟ್ಟಿರುವ ಜಾಗವು, ಕಳೆದ 60 ವರ್ಷಗಳಿಂದ ಚೀನಾ ಅಕ್ರಮವಾಗಿ ತನ್ನ ಬಳಿ ಇಟ್ಟುಕೊಂಡಿರುವ ಪ್ರದೇಶದಲ್ಲಿ ನಿರ್ಮಿಸಿದ್ದು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. 

Mukesh Ambani: 984 ಕೋಟಿಗೆ ಅಂಬಾನಿಯಿಂದ ರೋಬೋಟ್‌ ಸ್ಟಾರ್ಟಪ್‌ ಖರೀದಿ

ಈ ಕುರಿತು ಗುರುವಾರ ಮಾಧ್ಯಮಗೊಳೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಚೀನಾ ಮರುನಾಮಕರಣ ಮಾಡಲು ಯತ್ನಿಸಿದ್ದು, ‘ಅಸಮರ್ಥನೀಯ ಪ್ರಾದೇಶಿಕ ಹಕ್ಕುಗಳನ್ನು ಪ್ರತಿಪಾದಿಸುವ ಹಾಸ್ಯಾಸ್ಪದ ಪ್ರಯತ್ನ’. ನೆರೆಯ ರಾಷ್ಟ್ರ ಇಂತಹ ಸಂಚು ಮಾಡುವ ಬದಲಾಗಿ ಪೂರ್ವ ಲಡಾಖ್‌ ಪ್ರದೇಶದಲ್ಲಿದ್ದ ಘರ್ಷಣೆಯನ್ನು ತಗ್ಗಿಸಲು ಭಾರತದೊಂದಿಗೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ. ಅಲ್ಲದೇ ಪೂರ್ವ ಲಡಾಖ್‌ನಲ್ಲಿ ಸೇತುವೆ ನಿರ್ಮಾಣ ಕಾರ್ಯದ ಮೇಲೆ ಭಾರತೀಯ ಸೇನೆ ನಿಗಾವಹಿಸಿದೆ. ದೇಶದ ಸುರಕ್ಷತೆಗೆ ಬೇಕಾದ ಎಲ್ಲ ಕ್ರಮಗಳನ್ನು ಈ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

click me!