ಹತ್ತೇ ನಿಮಿಷ ವಾದಿಸಿ ಗೆದ್ದು ಬೀಗಿದ 19ರ ಭಾವಿ ವೈದ್ಯ! ಸುಪ್ರೀಂ ಕೋರ್ಟನ್ನೇ ದಂಗಾಗಿಸಿದ ತರುಣನ ಸ್ಟೋರಿ ಕೇಳಿ

Published : Feb 14, 2026, 10:05 PM IST
Atharva

ಸಾರಾಂಶ

19 ವರ್ಷದ ವಿದ್ಯಾರ್ಥಿ ಅಥರ್ವ ಚತುರ್ವೇದಿ, ತನಗಾದ ಅನ್ಯಾಯದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ತಾನೇ ಖುದ್ದು ವಾದ ಮಂಡಿಸಿ ಗೆಲುವು ಸಾಧಿಸಿದ್ದಾನೆ. ಎರಡು ಬಾರಿ ನೀಟ್ ಪಾಸಾದರೂ EWS ಕೋಟಾದಡಿ ವೈದ್ಯಕೀಯ ಸೀಟು ನಿರಾಕರಿಸಿದ್ದನ್ನು ಪ್ರಶ್ನಿಸಿದ್ದ  ಆತನಿಗೆ ತಾತ್ಕಾಲಿಕ ಪ್ರವೇಶ ನೀಡುವಂತೆ ಆದೇಶಿಸಿದೆ.

ಮೊನ್ನೆ ಸುಪ್ರೀಂಕೋರ್ಟ್​ನಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದಲ್ಲಿ ಅಚ್ಚರಿಯೊಂದು ನಡೆಯಿತು. ಓರ್ವ ಯುವಕ ಹತ್ತು ನಿಮಿಷ ವಾದ ಮಾಡಿ, ಗೆದ್ದು ಬೀಗಿದ್ದ. ಆತನ ವಾದದ ವೈಖರಿಗೆ ನ್ಯಾಯಮೂರ್ತಿಗಳೂ ಅಚ್ಚರಿಗೊಂಡಿದ್ದರು. ಹಾಗೆಂದು ಆತ ವಕೀಲನೂ ಅಲ್ಲ ಅಥವಾ ಸಾಂವಿಧಾನಿಕ ತಜ್ಞನೂ ಅಲ್ಲ. ಬದಲಿಗೆ ಮಧ್ಯಪ್ರದೇಶದ ಜಬಲ್ಪುರದ 12 ನೇ ತರಗತಿ ಪಾಸಾದ 19 ವರ್ಷದ ಅಥರ್ವ ಚತುರ್ವೇದಿ! ವೈದ್ಯನಾಗಲು ಬಯಸಿದ್ದ ಈ ವಿದ್ಯಾರ್ಥಿ ತನಗಾದ ಅನ್ಯಾಯದ ಕುರಿತು ಕೋರ್ಟ್​ ಗಮನಕ್ಕೆ ತಂದು ಗೆಲುವು ಸಾಧಿಸಿದ್ದ. ಹತ್ತು ನಿಮಿಷಗಳ ವಾದದ ನಂತರ, ಆತನ ಜೀವನವೇ ಬದಲಾಗಿ ಹೋಯಿತು. ಆತ ಅಂದುಕೊಂಡದ್ದನ್ನು ಸಾಧಿಸಿದ್ದ!

ವಿಶೇಷ ಅಧಿಕಾರ

ಸಂವಿಧಾನದ 142 ನೇ ವಿಧಿ ನೀಡಿರುವ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡು, ಈತ ಖುದ್ದು ವಾದ ಮಂಡಿಸಿದ್ದ. ಅಷ್ಟಕ್ಕೂ ಆಗಿದ್ದೇನೆಂದರೆ, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಯುವಕನಾಗಿರುವ (EWS) ಯುವಕ, ಎರಡು ಬಾರಿ ನೀಟ್‌ಗೆ ಅರ್ಹತೆ ಪಡೆದಿದ್ದ. ಆದರೆ ನೀತಿ ಅಂತರಗಳಿಂದಾಗಿ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ. ಇದನ್ನು ಆತ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದ. ಆತ ಮಾಡಿದ ವಾದ, ಕೋರ್ಟ್​ ಎದುರಿಗೆ ಇಟ್ಟ ಸಾಕ್ಷ್ಯಾಧಾರಗಳನ್ನು ಗಮನಿಸಿದ ನ್ಯಾಯಮೂರ್ತಿಗಳು, ಅವನ ಪರ ತೀರ್ಪು ನೀಡಿದರು. ಮಾತ್ರವಲ್ಲದೇ, ಖಾಸಗಿ ಕಾಲೇಜುಗಳಲ್ಲಿ EWS ಮೀಸಲಾತಿಯನ್ನು ರಾಜ್ಯವು ತಿಳಿಸಲು ವಿಫಲವಾದ ಕಾರಣ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ ಎಂದು ಕೋರ್ಟ್​ ಹೇಳಿತು. 2025-26 ಅವಧಿಗೆ ಈ ಯುವಕನಿಗೆ ತಾತ್ಕಾಲಿಕ ಪ್ರವೇಶವನ್ನು ನೀಡುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ನಿರ್ದೇಶಿಸಿತು.

 

ಯಾರೀ ಅಥರ್ವ?

ಅಥರ್ವನ ತಂದೆ ಮನೋಜ್ ಚತುರ್ವೇದಿ ವಕೀಲರು. ಲಾಕ್‌ಡೌನ್ ಸಮಯದಲ್ಲಿ, ನ್ಯಾಯಾಲಯಗಳು ವರ್ಚುವಲ್‌ ಮೂಲಕ ಕೇಸ್​ ನಡೆಸುತ್ತಿದ್ದ ಸಮಯದಲ್ಲಿ, ಅದನ್ನು ತದೇಕಚಿತ್ತದಿಂದ ನೋಡುತ್ತಿದ್ದ ಅಥರ್ವ. ಹಾಗೆಂದು ಅವನಿಗೆ ವಕೀಲನಾಗುವ ಆಸೆಯೇನೂ ಇರಲಿಲ್ಲ. ವೈದ್ಯಕೀಯ ಮತ್ತು ಎಂಜಿನಿಯರಿಂಗ್​ ಎರಡರ ಪ್ರವೇಶ ಪರೀಕ್ಷೆಯನ್ನು ಪಾಸ್​ ಮಾಡಿದ್ದ. ಎರಡು ಬಾರಿ ನೀಟ್ ಪಾಸಾಗಿದ್ದಾನೆ. ಅದರಲ್ಲಿ 530 ಅಂಕಗಳನ್ನು ಗಳಿಸಿದ್ದಾನೆ. ಆದರೆ ರಾಜ್ಯವು ಅಲ್ಲಿ ಮೀಸಲಾತಿಯನ್ನು ವಿಸ್ತರಿಸುವ ನೀತಿಯನ್ನು ಜಾರಿಗೆ ತಂದಿಲ್ಲದ ಕಾರಣ ಖಾಸಗಿ ಕಾಲೇಜುಗಳಲ್ಲಿ EWS ಕೋಟಾದಡಿಯಲ್ಲಿ ಅವನಿಗೆ ಎಂಬಿಬಿಎಸ್ ಸೀಟು ಸಿಕ್ಕಿರಲಿಲ್ಲ. ಅದನ್ನು ಆತ ಪ್ರಶ್ನಿಸಿದ್ದ.

ಕೋವಿಡ್​ನಲ್ಲಿ ಕಲಿಕೆ

ಆತನ ವಾಕ್​ಚಾತುರ್ಯವನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು ತಮಾಷೆಗಾಗಿ, ನೀನು ನೀನು ವೈದ್ಯರಲ್ಲ, ವಕೀಲನಾಗಬೇಕು. ನೀನು ತಪ್ಪು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವೆ ಎಂದು ಹೇಳಿದರು. ಮಗನ ಈ ಐತಿಹಾಸಿಕ ದಾಖಲೆ ಕುರಿತು ಮಾತನಾಡಿರುವ ತಂದೆ, "ನನ್ನ ಮಗ ಎಂದಿಗೂ ಕಾನೂನು ಅಧ್ಯಯನ ಮಾಡಲಿಲ್ಲ. ಆದರೆ ಅವನಿಗೆ ಎಲ್ಲದರಲ್ಲಿಯೂ ಆಸಕ್ತಿ. ಎಷ್ಟು ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎನ್ನುವುದನ್ನು ಬಲ್ಲ. ವಾಸ್ತವವಾಗಿ, ಅರ್ಜಿಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಅವುಗಳನ್ನು ಅಪ್‌ಲೋಡ್ ಮಾಡುವುದು ಹೇಗೆ ಎಂದು ಅವನು ನನಗೆ ಕಲಿಸಿದ್ದ. ಕೋವಿಡ್​ ಸಮಯದಲ್ಲಿ, ಹೆಚ್ಚಿನ ಮಂದಿ ಜೂಮ್ ಸಭೆಗಳಿಗೆ ಹಾಜರಾಗುವುದನ್ನು ಕಲಿಯುತ್ತಿರುವಾಗ, ಅಥರ್ವ ಆನ್‌ಲೈನ್‌ನಲ್ಲಿ ಕೋರ್ಟ್​ ಕಲಾಪ ವೀಕ್ಷಿಸುತ್ತಿದ್ದ ಎಂದಿದ್ದಾರೆ.

ತನ್ನ ಕೇಸನ್ನು ತಾನೇ ವಾದಿಸಲು ಮೊದಲು ಆತ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ಗೆ ಹೋಗಿದ್ದ. ವಿಶೇಷ ಮೇಲ್ಮನವಿಯ ಅರ್ಜಿ ಸ್ವರೂಪಗಳನ್ನು ಡೌನ್‌ಲೋಡ್ ಮಾಡಿಕೊಂಡ. ಹಿಂದಿನ ತೀರ್ಪುಗಳನ್ನು ಅಧ್ಯಯನ ಮಾಡಿದ. ತಾನೇ ಖುದ್ದು ಅರ್ಜಿ ರಚಿಸಿ ಅದನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದ ಎಂದಿದ್ದಾರೆ. ಇದಕ್ಕೆ ನೆರವಾದದ್ದು ಮಿತ್ರ ಮೇಡಮ್ ಮತ್ತು ಭಾರತಿ ಮೇಡಮ್‌ ಎಂದು ಅಪ್ಪ ಹೇಳುತ್ತಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರೇಮಿಗಳ ದಿನಾಚರಣೆ ದಿನ ದುರಂತ ಅಂತ್ಯಕಂಡ ಜೋಡಿ, ಕಾರಿನೊಳಗೆ ನಡೆದಿದ್ದೇನು?
ಕ್ಲಿನಿಕ್‌ನಲ್ಲಿ ಮಗುವಿನ ಸರ ಕದ್ದು ನುಂಗಿದ ಕಳ್ಳಿ; ಚೈನ್‌ ಹೊರತೆಗೆಯಲು ಈಗ ಸರ್ಜರಿಯೇ ದಾರಿ?