3 ದಿನದಲ್ಲಿ 19 ವಿಮಾನಗಳಿಗೆ ಬಾಂಬ್‌ ಕರೆ: ಡಿಜಿಸಿಎ ಅಧಿಕಾರಿಗಳ ತುರ್ತು ಸಭೆ

By Kannadaprabha News  |  First Published Oct 17, 2024, 8:04 AM IST

3 ದಿನದಲ್ಲಿ 19 ವಿಮಾನಗಳಿಗೆ ಬಾಂಬ್‌ ಕರೆ: ವಿಮಾನಯಾನ ಸಂಸ್ಥೆಗಳಿಗೆ ಪೀಕಲಾಟ ತಂದಿಟ್ಟ ಕಿಡಿಗೇಡಿಗಳ ಕೃತ್ಯ


ಮುಂಬೈ: ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕುವ ಪ್ರಕರಣಗಳು ಮುಂದುವರೆದಿದ್ದು, ಸತತ ಮೂರನೇ ದಿನವಾದ ಬುಧವಾರ ಮತ್ತೆ 7 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ರವಾನಿಸಲಾಗಿದೆ. ಇದರೊಂದಿಗೆ ಕೇವಲ 3 ದಿನಗಳ ಅವಧಿಯಲ್ಲಿ ಒಟ್ಟು 19 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಮಾಡಿದಂತೆ ಆಗಿದೆ. ಎಲ್ಲಾ ಬೆದರಿಕೆಯನ್ನೂ ಸಾಮಾಜಿಕ ಜಾಲತಾಣಗಳ ಮೂಲಕವೇ ಮಾಡಲಾಗಿತ್ತು ಎಂಬುದು ಗಮನಾರ್ಹ. ಅದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ ತುರ್ತು ಸಭೆ ನಡೆಸಿ ಬೆಳವಣಿಗೆ ಕುರಿತು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ.

ಮತ್ತೆ 7 ಕರೆ: ಬುಧವಾರ ಇಂಡಿಗೋದ 4. ಸೈಜೆಟ್‌ನ 2, ಅಕಾಸ ಏರ್ ಕಂಪನಿಯ 1 ವಿಮಾನಕ್ಕೆ ಬೆದರಿಕೆ ಹಾಕಲಾಗಿದೆ. ಬೆದರಿಕೆ ಕರೆ ಬಂದ ಇಂಡಿಗೋ ವಿಮಾನಗಳು ರಿಯಾದ್- ಮುಂಬೈ, ಮುಂಬೈ-ಸಿಂಗಾಪುರ, ಲಖನೌ, ದೆಹಲಿ- ಮುಂಬೈ ನಡುವೆ ಹಾರಾಟ ನಡೆಸುತ್ತಿದ್ದವು. ಇನ್ನು ದೆಹಲಿಯಿಂದ ಬೆಂಗಳೂರಿಗೆ 7 ಸಿಬ್ಬಂದಿ ಸೇರಿದಂತೆ 180 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಆಕಾಸಾ ಏರ್‌ಲೈನ್ಸ್ ವಿಮಾನ್ಕೂ ಬೆದರಿಕೆ ಹಾಕಲಾಗಿತ್ತು. ಕೂಡಲೇ ಅದು ಸಂಚಾರ ಅದು ರದ್ದುಗೊಳಿಸಿ ದೆಹಲಿಗೆ ಮರಳಿದೆ. ಮತ್ತೊಂದೆಡೆ ಲೇಹ್ - ದೆಹಲಿ ಮತ್ತು ದರ್ಬಾಂಘ - ಮುಂಬೈ ನಡುವಿನ ಸ್ಪೈಸ್‌ಜೆಟ್ ವಿಮಾನಕ್ಕೂ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಹೀಗಾಗಿ ಎಲ್ಲಾ ವಿಮಾನಗಳು ಸಂಚಾರ ರದ್ದುಪಡಿಸಿ ಸ್ವಸ್ಥಾನಕ್ಕೆ ಮರಳಿದವು. ತಪಾಸಣೆ ಬಳಿಕ ಎಲ್ಲವೂ ಹುಸಿ ಕರೆ ಎಂದು ಖಚಿತಪಟ್ಟಿದೆ.

Latest Videos

undefined

ಆಕಾಸಾ ಏರ್‌ಗೆ ಬಾಂಬ್‌ ಬೆದರಿಕೆ, 174 ಪ್ರಯಾಣಿಕರೊಂದಿಗೆ ಬೆಂಗಳೂರಿಗೆ ಹೊರಟಿದ್ದ ವಿಮಾನ ದೆಹಲಿಗೆ ವಾಪಸ್‌!

ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಹುಸಿ ಬಾಂಬ್ ಬೆದರಿಕೆ ಪ್ರಕರಣ ಸಂಬಂಧ ಈಗಾಗಲೇ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಶೀಘ್ರವಾಗಿ ತಪ್ಪಿತಸ್ಥರನ್ನು ಹಿಡಿದು ಶಿಕ್ಷೆಗೆ ಒಳ ಪಡಿಸಲಾಗುವುದು.  ಯಾಣಿಕರು, ವಿಮಾನಯಾನ ಸಂಸ್ಥೆಗಳು ಮತ್ತು ಎಲ್ಲಾ ಪಾಲುದಾರರ ಭದ್ರತೆಗೆ ಸರ್ಕಾರ ಸಿದ್ಧವಾಗಿದೆ ಎಂದರು.

ದೆಹಲಿ ಪೊಲೀಸರಿಂದ ಪ್ರಕರಣ ದಾಖಲು
ನವದೆಹಲಿ: ದೆಹಲಿಯಿಂದ ಹೊರಟ 7 ವಿಮಾನಗಳಿಗೆ ಹುಸಿ ಬಾಂಬ್ ಕರೆ ಬಂದಿರುವ ಬಗ್ಗೆ ದೆಹಲಿಯ ವಿಮಾನ ನಿಲ್ದಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಬೆದರಿಕೆ ಸಂದೇಶ ಬಂದಿರುವ ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ನಡೆಸುತ್ತಿರುವವರಿಗೆ ಬಲೆ ಬೀಸಲಾಗಿದೆ. ಶೀಘ್ರವಾಗಿ ಅವರನ್ನು ಹಿಡಿಯಲಾಗುತ್ತದೆ. ಎಫ್‌ಐಆರ್‌ಗಳ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದರು.

ಬೆದರಿಕೆ ವಿರುದ್ಧ ಕಠಿಣ ಕ್ರಮ
ನವದೆಹಲಿ: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡಿ ಆತಂಕ ಸೃಷ್ಟಿಸಿದವರನ್ನು 'ಹಾರಾಟ ನಿಷೇಧ ಪಟ್ಟಿ'ಗೆ ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ. ಕಳೆದ 3 ದಿನಗಳಲ್ಲಿ 19 ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿದ ಬೆನ್ನಲ್ಲೇ ವಿಮಾನಗಳಿಗೆ ಹಾಗೂ ವಿಮಾನಯಾನ ಸಂಬಂಧಿತ ಮೂಲಸೌಕರ್ಯಗಳಿಗೆ ಬೆದರಿಕೆ ಒಡ್ಡುವವರು ವಿಮಾನದಲ್ಲಿ ಪ್ರಯಾಣ ಮಾಡದಂತೆ ನಿರ್ಬಂಧಿಸುವ ಪ್ರಸ್ತಾವನೆಯನ್ನು ನಾಗರಿಕ ವಿಮಾನಯಾನ ಭದ್ರತಾ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಿದೆ.

ಬಾಂಬ್ ಬೆದರಿಕೆ: ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

ಬಾಂಬ್ ಬೆದರಿಕೆ ಕರೆ ಮಾಡಿದ್ದ ಬಾಲಕ ವಶ 
ರಾಜನಂದಗಾಂವ್: ತನ್ನ ಸ್ನೇಹಿತನ ಹೆಸರಿನಲ್ಲಿ ನಕಲಿ ಎಕ್ಸ್ ಖಾತೆ ತೆರೆದು 4 ವಿಮಾನಗಳಿಗೆ ಬಾಂಬ್ ಬೆದರಿಕೆಗಳನ್ನು ಕಳುಹಿಸಿದ್ದ ಛತ್ತೀಸ್‌ಗಢದ ರಾಜನಂದಗಾಂವ್‌ನ ಬಾಲಕನನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 11ನೇ ತರಗತಿಯಲ್ಲಿ ಓದುತ್ತಿದ್ದ 17 ವರ್ಷದ ಬಾಲಕ ಹಣದ ವಿಚಾರವಾಗಿ ತನ್ನ ಸ್ನೇಹಿತನೊಂದಿಗೆ ಜಗಳವಾಡಿದ್ದ. ಹೀಗಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಳೆದ ಸೋಮವಾರ ಮುಂಬೈ-ನ್ಯೂಯಾರ್ಕ್ ಏರ್ ಇಂಡಿಯಾ, ಮಸ್ಕತ್- ಜೆಡ್ಡಾ ಇಂಡಿಗೋನ 2 ವಿಮಾನಗಳು ಸೇರಿದಂತೆ 4 ವಿಮಾನಗಳಲ್ಲಿ ಬಾಂಬ್ ಇರುವ ಬಗ್ಗೆ ಪೋಸ್ಟ್ ಮಾಡಿದ್ದ. ಈ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು ಆತನನ್ನು ವಿಚಾರಣೆಗೆ ಕರೆಸಿದ್ದರು. ವಿಚಾರಣೆ ವೇಳೆ ಬಾಲಕ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

click me!