18000 ಹೊಸ ಕೇಸ್‌, 36 ದಿನಗಳ ಗರಿಷ್ಠ: ದೇಶದಲ್ಲಿ ಕೊರೋನಾ 2ನೇ ಅಲೆ ಭೀತಿ

By Suvarna NewsFirst Published Mar 7, 2021, 8:07 AM IST
Highlights

: ದೇಶದಲ್ಲಿ ದಿನೇ ದಿನೇ ಕೊರೋನಾ ತೀವ್ರತೆ ಹೆಚ್ಚು| ನಿನ್ನೆ 18000 ಹೊಸ ಕೇಸ್‌: 36 ದಿನಗಳ ಗರಿಷ್ಠ| ದೇಶದಲ್ಲಿ ಕೊರೋನಾ 2ನೇ ಅಲೆ ಭೀತಿ

ನವದೆಹಲಿ(ಮಾ.07): ದೇಶದಲ್ಲಿ ದಿನೇ ದಿನೇ ಕೊರೋನಾ ತೀವ್ರತೆ ಹೆಚ್ಚುತ್ತಿದ್ದು, 36 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ಒಂದೇ ದಿನ ದೇಶದಲ್ಲಿ 18 ಸಾವಿರಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಸಕ್ರಿಯ ಸೋಂಕಿತರ ಸಂಖ್ಯೆ 1.80 ಲಕ್ಷಕ್ಕೆ ಏರಿದೆ.

ಶನಿವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ತಾಸು ಅವಧಿಯಲ್ಲಿ 18,327 ಹೊಸ ಪ್ರಕರಣ ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,11,92,088ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಿಂದೆ ಜ.29ರಂದು 18,855 ಪ್ರಕರಣ ವರದಿಯಾಗಿದ್ದವು. ಆ ಬಳಿಕ ಪ್ರಕರಣಗಳ ಸಂಖ್ಯೆ 18 ಸಾವಿರ ದಾಟಿರಲಿಲ್ಲ.

ಇದೇ ವೇಳೆ ಈ ಅವಧಿಯಲ್ಲಿ 108 ಜನರು ಸೋಂಕಿಗೆ ಬಲಿಯಾಗಿದ್ದು, ತನ್ಮೂಲಕ ಒಟ್ಟು ಸಾವಿಗೀಡಾದವರ ಸಂಖ್ಯೆ 1,57,656ಕ್ಕೆ ಏರಿಕೆಯಾಗಿದೆ. ಆದರೆ ಒಟ್ಟು ಸೋಂಕಿತರ ಪೈಕಿ 1,08,54,128 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಹೀಗಾಗಿ ದೇಶದಲ್ಲಿ ಸದ್ಯ 1,80,304 ಸಕ್ರಿಯ ಪ್ರಕರಣಗಳವೆ. ನಿತ್ಯ ದೃಢವಾಗುತ್ತಿರುವ ಕೇಸ್‌ ಪೈಕಿ ಶೇ.82ರಷ್ಟುಪ್ರಕರಣಗಳು ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ ಮತ್ತು ತಮಿಳುನಾಡಿನಿಂದ ವರದಿಯಾಗುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

click me!