
ಮಮ್ಮಿ-ಡ್ಯಾಡಿಗೆ ಅವನ ಮೇಲೆಯೇ ಹೆಚ್ಚು ಪ್ರೀತಿ: 12 ವರ್ಷದ ತಮ್ಮನನ್ನು ಕೊಂದ ಅಪ್ರಾಪ್ತ ಅಣ್ಣ
ಭುವನೇಶ್ವರ: ತಂದೆ ಮತ್ತು ತಾಯಿಗೆ ಕಿರಿಯ ಸೋದರನ ಮೇಲೆಯೇ ಹೆಚ್ಚು ಪ್ರೀತಿ ಎಂಬ ಕಾರಣಕ್ಕೆ ಅಣ್ಣನೇ ತಮ್ಮನನ್ನು ಕೊ*ಲೆ ಮಾಡಿರುವ ಅಘಾತಕಾರಿ ಘಟನೆಯೊಂದು ಒಡಿಶಾದ ಬಲಂಗೀರ್‌ನ ತಿಥಿಲಗಢದಲ್ಲಿ ನಡೆದಿದೆ. 12 ವರ್ಷದ ತಮ್ಮನನ್ನು 17 ವರ್ಷದ ಅಪ್ರಾಪ್ತ ಕೊ*ಲೆ ಮಾಡಿದ್ದಾನೆ. ಪೋಷಕರು ಕಿರಿಯ ಮಗ ಕಾಣೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗಿ 45 ದಿನಗಳಾದ್ರೂ ಅಪ್ರಾಪ್ತ ಯಾವುದೇ ವಿಷಯವನ್ನು ಬಾಯಿಬಿಟ್ಟಿರಲಿಲ್ಲ. ಇದೀಗ ಸೋದರನನ್ನು ಕೊಂದಿರುವ ವಿಷಯವನ್ನು ಅಪ್ರಾಪ್ತ ಒಪ್ಪಿಕೊಂಡಿದ್ದಾರೆ.
ಇಬ್ಬರು ಮಕ್ಕಳಲ್ಲಿ ಒಬ್ಬ ಮೃತನಾದ್ರೆ, ಮತ್ತೊಬ್ಬ ಜೈಲು ಸೇರಿದ್ದನ್ನು ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಪೊಲೀಸರು ಶನಿವಾರ 17 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಸೋದರನನ್ನು ಕೊಂದು ಯಾರಿಗೂ ತಿಳಿಯದಂತೆ ಗುಂಡಿಯೊಂದರಲ್ಲಿ ಹೂತು ಹಾಕಿದ್ದನು. ಪೋಷಕರು ಪ್ರೀತಿ ತೋರಿಸುವಲ್ಲಿ ನಮ್ಮಿಬ್ಬರ ನಡುವೆ ತಾರತಮ್ಯ ಮಾಡುತ್ತಿದ್ದರು ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾನೆ. ಮಕ್ಕಳ ಪೋಷಕರು ದಿನಗೂಲಿ ಕೆಲಸಗಾರರು ಎಂದು ತಿಳಿದು ಬಂದಿದೆ.
ಪುತ್ರ ಕಾಣದಿದ್ದಾಗ ಆತಂಕಗೊಂಡ ಪೋಷಕರು ಜೂನ್ 29 ರಂದು ತಮ್ಮ 12 ವರ್ಷದ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯ ಆರಂಭದಲ್ಲಿ ಇದೊಂದು ಕಿಡ್ನ್ಯಾಪ್ ಕೇಸ್ ಎಂಬ ಆಯಾಮದಲ್ಲಿಯೇ ತನಿಖೆ ಪ್ರಾರಂಭವಾಗಿತ್ತು. ಬಾಲಕ ಕಾಣೆಯಾಗಿ 45 ದಿನಗಳಾದರೂ ಪೊಲೀಸರಿಗೆ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ. ಬಾಲಕನ ಮನೆ, ಶಾಲೆ ಭಾಗದಲ್ಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪೋಷಕರು ಕಣ್ಣೀರು ಹಾಕುತ್ತಿದ್ರೂ ಹಿರಿಯ ಮಗ ತನಗೆ ಏನು ಗೊತ್ತಿಲ್ಲ ಎಂಬಂತಿದ್ದನು.
ಯಾವುದೇ ಸುಳಿವು ಸಿಗದಿದ್ದಾಗ ಪೊಲೀಸರು, ಬಾಲಕನ ಪೋಷಕರನ್ನು ಪದೇ ಪದೇ ವಿಚಾರಣೆಗೆ ಒಳಪಡಿಸುತ್ತಾರೆ. ಈ ವೇಳೆ ಹಿರಿಯ ಮಗ ಮನೆಯಲ್ಲಿ ನೆಲ ಒರೆಸುತ್ತಿದ್ದ. ಆತ ಎಂದಿಗೂ ಈ ಕೆಲಸ ಮಾಡಿರಲಿಲ್ಲ. ಇದು ಸಾಮಾನ್ಯ ವಿಷಯವಲ್ಲ ಎಂದು ತಾಯಿ ಹೇಳಿದ್ದರು. ತಾಯಿ ಈ ವಿಷಯ ಹೇಳುತ್ತಿದ್ದಂತೆ ಹಿರಿಯ ಮಗನನ್ನು ಗದರಿ ಕೇಳಿದಾಗ ಕೊ*ಲೆಯ ವಿಷಯವನ್ನು ಬಾಯಿಬಿಟ್ಟಿದ್ದಾನೆ. ಪೋಷಕರು ತಮ್ಮ ಕಿರಿಯ ಸಹೋದರನ ಬಗ್ಗೆ ಪಕ್ಷಪಾತ ತೋರಿದ ಕಾರಣ ಮತ್ತು ತಾನು ಒಂಟಿತನ ಅನುಭವಿಸಿದ ಕಾರಣ ತನ್ನ ಸಹೋದರನನ್ನು ಕೊಂದಿದ್ದೇನೆ ಎಂದು 17 ವರ್ಷದ ಬಾಲಕ ಪೊಲೀಸರಿಗೆ ವಿವರಿಸಿದ್ದಾನೆ.
ಕಿರಿಯ ಸಹೋದರನಿಗೆ ಇರಿದಾಗ ನೆಲದ ಮೇಲೆ ಬಿದ್ದ ರಕ್ತವನ್ನು ಒರೆಸಲು ಮನೆಯನ್ನು ಸ್ವಚ್ಛಗೊಳಿಸಿದ್ದ. ತೋಟದಿಂದ ಸಲಿಕೆ ಬಳಸಿ 12 ವರ್ಷದ ಬಾಲಕನನ್ನು ಪೋಷಕರ ಮಲಗುವ ಕೋಣೆಯ ಬಳಿಯ ಗುಂಡಿಯಲ್ಲಿ ಹೂತಿದ್ದನು. ರಾತ್ರಿ ವೇಳೆ ಯಾರ ಗಮನಕ್ಕೂ ಬಾರದಂತೆ ಶವವನ್ನು ಹೂಳಲಾಯಿತು. ಮನೆಯೊಳಗೆ ಹೂಳಲಾದ ನಂತರ, ರಾತ್ರಿ ವೇಳೆ ಶವವನ್ನು ಮನೆಯ ಹೊರಗೆ ಸ್ಥಳಾಂತರಿಸಲಾಯಿತು.
ಮಗುವನ್ನು ಅಪಹರಿಸಲಾಗಿದೆ ಎಂಬ ಅನುಮಾನದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು. ಹತ್ತಿರದ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದರೂ ಅಪಹರಣದ ಅನುಮಾನವನ್ನು ದೃಢೀಕರಿಸುವ ಯಾವುದೇ ದೃಶ್ಯಾವಳಿಗಳು ಸಿಗದ ಕಾರಣ ಪೊಲೀಸರು ಮನೆಯನ್ನು ಕೇಂದ್ರೀಕರಿಸಿ ತನಿಖೆ ಆರಂಭಿಸಿದಾಗ ಕೊ*ಲೆಗಾರ ಮನೆಯಲ್ಲಿರೋದು ತನಿಖೆಯಲ್ಲಿ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ