10000 ಗಡಿಯತ್ತ ಸೋಂಕು| ನಿನ್ನೆ ಮತ್ತೆ 800 ಮಂದಿಗೆ ವೈರಸ್| ಮತ್ತೆ 40 ಸಾವು, ಮೃತರ ಸಂಖ್ಯೆ 327ಕ್ಕೆ| 3 ರಾಜ್ಯಗಳಲ್ಲಿ 1000ಕ್ಕಿಂತ ಹೆಚ್ಚು ಮಂದಿಗೆ ಸೋಂಕು
ನವದೆಹಲಿ(ಏ.13): ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು, ಭಾನುವಾರ ಮತ್ತೆ 816 ಪ್ರಕರಣಗಳು ದಾಖಲಾಗುವುದರೊಂದಿಗೆ ಸೋಂಕಿತರ ಸಂಖ್ಯೆ 9136ಕ್ಕೆ ಏರಿಕೆ ಆಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10 ಸಾವಿರದ ಗಡಿಯತ್ತ ಸಾಗುತ್ತಿದೆ.
ಇದೇ ವೇಳೆ ಮೃತ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಆಗಿದ್ದು, ಭಾನುವಾರ ದೇಶದೆಲ್ಲೆಡೆ 40 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ 327ಕ್ಕೆ ಏರಿದೆ. ಕೊಂಚ ಸಮಾಧಾನಕರ ಸಂಗತಿಯೆಂದರೆ, ದೇಶದಲ್ಲಿ ಈವರೆಗೆ 996 ಮಂದಿ ಸೊಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಲಾಕ್‌ಡೌನ್ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್ ಕೈಕಟ್!
ಇದೇ ವೇಳೆ ಮಹಾರಾಷ್ಟ್ರದಲ್ಲಿ 221 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ತಲುಪಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 1,982 ಮಂದಿಗೆ ಸೋಂಕು ತಗುಲಿದೆ. ಭಾನುವಾರ ಮತ್ತೆ 22 ಮಂದಿ ಕೊರೋನಾ ವೈರಸ್‌ಗೆ ಬಲಿ ಆಗಿದ್ದು, ಸಾವಿನ ಸಂಖ್ಯೆ 149ಕ್ಕೆ ಏರಿಕೆ ಆಗಿದೆ. ಮುಂಬೈನಲ್ಲಿ ಕಳೆದ ಒಂದು ವಾರದಿಂದ ಪ್ರತಿನಿತ್ಯ ಸರಾಸರಿ 20 ಜನರಂತೆ ಸಾವಿಗೀಡಾಗುತ್ತಿರುವುದು ಹಾಗೂ ಪ್ರತಿನಿತ್ಯ ಸುಮಾರು 200 ಮಂದಿ ಸೋಂಕಿಗೆ ತುತ್ತಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಮುಂಬೈನಲ್ಲಿ 16, ಪುಣೆಯಲ್ಲಿ 3, ನವಿ ಮುಂಬೈನಲ್ಲಿ 2, ಸೊಲ್ಲಾಪುರದಲ್ಲಿ ಒಬ್ಬ ವ್ಯಕ್ತಿ ಕೊರೋನಾ ವೈರಸ್‌ನಿಂದ ಸಾವಿಗೀಡಾಗಿದ್ದಾರೆ. ಇದೇ ವೇಳೆ ಸೋಂಕು ನಿಯಂತ್ರಣಕ್ಕೆ ಕ್ಷಿಪ್ರಗತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮಹಾರಾಷ್ಟ್ರದಲ್ಲಿ 61,247 ಜನರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಲಾಕ್‌ಡೌನ್ ಎಫೆಕ್ಟ್: ಬಡ ಜನರಿಗೆ ಸಚಿವ ಆನಂದ್‌ಸಿಂಗ್ ನೆರವು
ಇದೇ ವೇಳೆ ತಮಿಳುನಾಡಿನಲ್ಲಿಯೂ ಸೋಂಕು ಅಪಾಯಕಾರಿ ಮಟ್ಟದಲ್ಲಿ ಏರಿಕೆ ಆಗುತ್ತಿದ್ದು, ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 1 ಸಾವಿರ ಗಡಿ ದಾಟಿದೆ. ಭಾನುವಾರ ಹೊಸದಾಗಿ 106 ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ. ಮತ್ತೊಬ್ಬ ವ್ಯಕ್ತಿ ಸಾವಿಗೀಡಾಗುವ ಮೂಲಕ ಒಟ್ಟೂಸಾವಿನ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ಇದೇ ವೇಳೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಸೋಂಕಿತರ ಸಂಖ್ಯೆ 1154ಕ್ಕೆ ಏರಿಕೆ ಆಗಿದೆ. ರಾಜಸ್ಥಾನದಲ್ಲಿ 700ರ ಗಡಿ ದಾಟಿದರೆ, ತೆಲಂಗಾಣ ಹಾಗೂ ಮಧ್ಯ ಪ್ರದೇಶಗಳಲ್ಲಿ 500ರ ಗಡಿ ದಾಟಿದೆ.