ಕೊರೋನಾ ಮತ್ತಷ್ಟು ಏರಿಕೆ: ಒಂದೇ ದಿನ 12,847 ಕೇಸ್‌..!

By Kannadaprabha NewsFirst Published Jun 18, 2022, 1:30 AM IST
Highlights

*   ಕೇರಳದ 8 ಸೇರಿ 14 ಮಂದಿ ಸಾವು
*   ಸಕ್ರಿಯ ಕೇಸು 63 ಸಾವಿರಕ್ಕೆ ಏರಿಕೆ
*   ಟೆಸ್ಟಿಂಗ್‌ ಏರಿಕೆ: 5.19 ಲಕ್ಷ ಪರೀಕ್ಷೆ
 

ನವದೆಹಲಿ(ಜೂ.18):  ಕೋವಿಡ್‌ ಪ್ರಕರಣಗಳ ಸಂಖ್ಯೆ ಗುರುವಾರಕ್ಕಿಂತ ಶುಕ್ರವಾರ ಮತ್ತಷ್ಟು ಏರಿಕೆ ಕಂಡಿದ್ದು, ಒಂದೇ ದಿನ 12,847 ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 63,063ಕ್ಕೆ ಏರಿದೆ. 14 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳ ಸೇರಿ ದೇಶದ ಅನೇಕ ರಾಜ್ಯಗಳಲ್ಲಿ ಸೋಂಕು ದಿನೇ ದಿನೇ ಏರತೊಡಗಿದ್ದು, ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. 7985 ಮಂದಿ ಮಾತ್ರ ಗುಣಮುಖರಾದ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 4,848ರಷ್ಟುಏರಿ, 63 ಸಾವಿರದ ಗಡಿ ದಾಟಿದೆ. ಗುರುವಾರವಷ್ಟೇ 12,213 ಪ್ರಕರಣ ದಾಖಲಾಗಿದ್ದವು. ಅದು 111 ದಿನದ ಗರಿಷ್ಠವಾಗಿತ್ತು.

ಕೊರೋನಾ ಕಾಟ: ಮತ್ತೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ಟೆಸ್ಟ್‌

ಈ ನಡುವೆ, ಪರೀಕ್ಷಾ ಪ್ರಮಾಣ ಹೆಚ್ಚಿದ್ದು, 5.19 ಲಕ್ಷ ಪರೀಕ್ಷೆ ನಡೆಸಲಾಗಿದೆ. ಸೋಂಕಿನ ಏರಿಳಿತದ ಮಾಪನವಾದ ಪಾಸಿಟಿವಿಟಿ ದರ ಗುರುವಾರದ ಶೇ.2.35ರಿಂದ ಶುಕ್ರವಾರ ಶೇ.2.47ಕ್ಕೆ ಏರಿದೆ. ವಾರದ ಪಾಸಿಟಿವಿಟಿ ದರ ಶೇ.2.41ರಷ್ಟಿದೆ. ಚೇತರಿಕೆ ದರ ಶೇ.98.64ರಷ್ಟು ದಾಖಲಾಗಿದೆ.

ಶುಕ್ರವಾರದ 14 ಸಾವುಗಳಲ್ಲಿ 8 ಸಾವು ಕೇರಳದಲ್ಲೇ ದಾಖಲಾಗಿವೆ. ಉಳಿದಂತೆ ಮಹಾರಾಷ್ಟ್ರದ 3, ದಿಲ್ಲಿಯ 2 ಹಾಗೂ ಕರ್ನಾಟಕದ 1- ಇದರಲ್ಲಿ ಸೇರಿವೆ. ಸಾವಿನ ದರ ಶೇ.1.21 ಇದೆ. ಈ ನಡುವೆ, 195.84 ಕೋಟಿ ಡೋಸ್‌ ಕೊರೋನಾ ಲಸಿಕೆಗಳನ್ನು ಈವರೆಗೆ ವಿತರಿಸಲಾಗಿದೆ.
 

click me!