-1943ರ ಏ.1ರಂದು ಹೊಸರಿತ್ತಿ ಕಂದಾಯ ಕಚೇರಿ ಮೇಲೆ ಹೋರಾಟಗಾರರ ದಾಳಿ
ಬ್ರಿಟಿಷರ ಗುಂಡಿಗೆ 3 ಮಂದಿ ಬಲಿ
1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿ ವೇಳೆ ದೇಶಾದ್ಯಂತ 550 ಅಂಚೆಕಚೇರಿಗಳು, 250 ರೈಲು ನಿಲ್ದಾಣಗಳು, 70ಕ್ಕೂ ಹೆಚ್ಚು ಠಾಣೆಗಳು, 83ಕ್ಕೂ ಹೆಚ್ಚು ಇತರೆ ಸರ್ಕಾರಿ ಕಚೇರಿಗಳು ಸ್ವಾತಂತ್ರ್ಯ ಹೋರಾಟಗಾರರ ಆಕ್ರೋಶಕ್ಕೆ ತುತ್ತಾದರೆ ಬ್ರಿಟಿಷರ ಬಂದೂಕಿನ ಗುಂಡಿಗೆ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣತ್ಯಾಗ ಮಾಡಿದರು. ಅಂತಹ ಘಟನೆಗೆ ಸಾಕ್ಷಿಯಾಗಿ ನಿಂತಿರುವುದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಕೋಗನೂರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೈಲಾರ ಮಹಾದೇವ ಮತ್ತವರ ಸಹಚರರಾಗಿದ್ದ ಕೋಗನೂರ ಗ್ರಾಮದ ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ 1943ರ ಏ.1ರಂದು ಹೊಸರಿತ್ತಿ ಕಂದಾಯ ಕಚೇರಿಯ ಮೇಲೆ ದಾಳಿ ಮಾಡುವ ವೇಳೆಯಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮರಾಗಿದ್ದು ಇತಿಹಾಸ.
ಮೈಲಾರ ಮಹಾದೇವಪ್ಪ ನೇತೃತ್ವ, ಮಾರ್ಗದರ್ಶನದಲ್ಲಿ ಕೋಗನೂರಿನ 19 ಹೋರಾಟಗಾರರು ಚಲೇಜಾವ್ ಚಳವಳಿಗೆ ಧುಮುಕಿದ್ದರು. ಇವರೆಲ್ಲ ಹೊಸರಿತ್ತಿ, ಗುಡಗೇರಿ ಗ್ರಾಮಗಳಲ್ಲಿದ್ದ ಬ್ರಿಟಿಷರ ಕಚೇರಿಗಳ ಮೇಲೆ ದಾಳಿ ಮಾಡಿ ಅಲ್ಲಿದ್ದ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಅಪಹರಿಸಿ ಅದನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಬಡವರಿಗೆ ಹಂಚುವ ಕಾರ್ಯ ಮಾಡುತ್ತಿದ್ದರು. ಬ್ರಿಟಿಷರ ಪೋಸ್ಟ್ ಆಫೀಸ್ ಹಾಗೂ ಸರ್ಕಾರಿ ಕಚೇರಿ ಧ್ವಂಸ ಮಾಡಿ ಸಿಂಹಸ್ವಪ್ನರಾಗಿದ್ದರು. 1943ರ ಏ.1ರಂದು ಹೊಸರಿತ್ತಿಯ ಕಂದಾಯ ಕಚೇರಿಯ ಮೇಲೆ ದಾಳಿ ವೇಳೆ ಅಲ್ಲಿದ್ದ ಹಣ ಅಪಹರಣ ಮಾಡುವ ವೇಳೆಯಲ್ಲಿ ಬ್ರಿಟಿಷರು ಗುಂಡಿನ ಮಳೆಗರೆದರು. ಈ ವೇಳೆ ಮೈಲಾರ ಮಹಾದೇವಪ್ಪ, ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ವೀರಮರಣವನ್ನಪ್ಪಿದರು.
undefined
India@75:ಪೋರ್ಚುಗೀಸರನ್ನು ಮಟ್ಟ ಹಾಕಿದ ಮಲಯಾಳಿಗಳ ಸಾಹಸಗಾಥೆ!
ಸ್ಮಾರಕ ನಿರ್ಮಾಣ: ಲಕ್ಷ್ಮೇಶ್ವರಕ್ಕೆ ಸಮೀಪದ ಕೋಗನೂರ ಗ್ರಾಮದಲ್ಲಿ ಈ ಮೂವರು ಹುತಾತ್ಮರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವೃತ್ತ ನಿರ್ಮಿಸಲಾಗಿದೆ. ಪ್ರತಿವರ್ಷ ಆ.15 ಹಾಗೂ ಜ.26ರಂದು ಧ್ವಜಾರೋಹಣ ನೆರವೇರಿಸಿ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯ ಗ್ರಾ.ಪಂ. ಆಡಳಿತ ಮಂಡಳಿ ಮಾಡುತ್ತಿದೆ.
India@75: ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿ ತರೀಕೆರೆ ಹಳೆ ತಾಲೂಕು ಕಚೇರಿ
ಕೋಗನೂರು ತಲುಪುದು ಹೇಗೆ?: ಗದಗ ಜಿಲ್ಲೆಯ ಶಿರಹಟ್ಟಿಹಾಗೂ ಲಕ್ಷ್ಮೇಶ್ವರ ತಾಲೂಕಿನ ಮೂಲಕ ಕೊಗನೂರು ತಲುಪಲು ಬಸ್ ಸೌಕರ್ಯವಿದೆ. ಲಕ್ಷ್ಮೇಶ್ವರದ ಮೂಲಕ ಬೂದಿಹಾಳ ಮಾರ್ಗವಾಗಿ ಕೋಗನೂರು ಗ್ರಾಮ ತಲುಪಲು 30 ಕಿ.ಮೀ. ದೂರ ಸಾಗಬೇಕು. ಅದೇ ಬೆಳ್ಳಟ್ಟಿಮಾರ್ಗವಾಗಿ ಕೇವಲ 10 ಕಿ.ಮೀ. ಅಂತರದಲ್ಲಿ ಕೋಗನೂರ ಗ್ರಾಮ ಸಿಗುತ್ತದೆ. ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗದಲ್ಲಿ ಯಲವಿಗಿ ರೈಲ್ವೆ ನಿಲ್ದಾಣವಿದ್ದು ಇಲ್ಲಿ ಲೋಕಲ್ ಟ್ರೈನ್‌ಗಳಿಗಷ್ಟೇ ನಿಲುಗಡೆ ಇದೆ. ಇಲ್ಲಿಂದ ಕೋಗನೂರು 10 ಕಿ.ಮೀ. ದೂರದಲ್ಲಿದೆ.
ಅಶೋಕ ಸೊರಟೂರ