World Earth Day 2022: ನ್ಯಾಟ್ ಜಿಯೋದಲ್ಲಿ ತುಳಸಿ ಗೌಡ, ವಾಣಿ ಮೂರ್ತಿ ಕಿರುಚಿತ್ರ ಪ್ರಸಾರ

By Suvarna News  |  First Published Apr 22, 2022, 2:38 PM IST

ವಿಶ್ವ ಭೂಮಿ ದಿನ ಪ್ರಯುಕ್ತ ಪರಿಸರ ರಕ್ಷಣೆ ಕಾರ್ಯದಲ್ಲಿ ನಿರತರಾಗಿರುವ 10 ಜನ ಸಾಧಕರ ಕಿರುಚಿತ್ರಗಳನ್ನು ನ್ಯಾಷನಲ್ ಜಿಯೋಗ್ರಾಫಿಕ್ ತಮ್ಮ ವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಿದೆ


ಮುಂಬೈ (ಏ. 22): ಪರಿಸರ ಸಂರಕ್ಷಣೆಗೆ ಜೀವನವನ್ನು ಮುಡಿಪಾಗಿ ಇರಿಸಿಕೊಂಡಿರುವ ಪರಿಸರ ಹೋರಾಟಗಾರರಿಗೆ ಡಿಸ್ನಿ ಸ್ಟಾರ್ ಸಂಸ್ಥೆ ಗೌರವ ಸಲ್ಲಿಸುತ್ತಿದೆ. ಇಂದು(ಏ.22) ವಿಶ್ವ ಭೂಮಿ ದಿನ ಪ್ರಯುಕ್ತ ಪರಿಸರ ರಕ್ಷಣೆ ಕಾರ್ಯದಲ್ಲಿ ನಿರತರಾಗಿರುವ 10 ಜನ ಸಾಧಕರ ಕಿರುಚಿತ್ರಗಳನ್ನು ನ್ಯಾಷನಲ್ ಜಿಯೋಗ್ರಾಫಿಕ್ ತಮ್ಮ ವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಿದೆ. 10 ಜನ ಸಾಧಕರಲ್ಲಿ ಕರ್ನಾಟಕದ ಪದ್ಮಶ್ರೀ ತುಳಸಿ ಗೌಡ ( Tulasi Gowda) ಮತ್ತು ವಾಣಿ ಮೂರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಡಿಸ್ನಿ ಸ್ಟಾರ್ ಸಂಸ್ಥೆ ವನ್ ಫಾರ್ ಚೇಂಜ್ ಎಂಬ ಅಭಿಯಾನ ಆರಂಭಿಸಿದ್ದು, ಈ ಅಭಿಯಾನದಲ್ಲಿ ಪರಿಸರಕ್ಕೆ ಒಳಿತು ಮಾಡುವ ಕೆಲಸ ಮಾಡುತ್ತಿರುವ 30 ಜನರ ಕುತೂಹಲಕಾರಿ ಕತೆಗಳನ್ನು ಕಿರುಚಿತ್ರ ರೂಪದಲ್ಲಿ ಪ್ರಸಾರ ಮಾಡಲಿದೆ. ಆ ಅಭಿಯಾನದ ಮೊದಲ ಭಾಗವಾಗಿ 10 ಜನರ ಕಿರುಚಿತ್ರ ಇಂದು ಪ್ರಸಾರವಾಗಲಿದೆ. ಈ ಹತ್ತು ಮಂದಿಯಲ್ಲಿ ಕರ್ನಾಟಕದ ಇಬ್ಬರು ಇದ್ದಾರೆ ಅನ್ನುವುದು ನಾಡಿಗೆ ಹೆಮ್ಮೆ ತರುವಂಥ ವಿಷಯ. 

Tap to resize

Latest Videos

undefined

ಇದನ್ನೂ ಓದಿ: ಮಂಗಳೂರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ಅಕ್ಷರ ಸಂತ ಮತ್ತು ವೃಕ್ಷಮಾತೆ, ದಿವ್ಯ ಸಮಾಗಮ

ಅರಣ್ಯ ರಕ್ಷಣೆಗೆ ಹೆಸರಾಗಿರುವ ಉತ್ತರ ಕನ್ನಡದ ಪದ್ಮಶ್ರೀ ತುಳಸಿ ಗೌಡ ಮತ್ತು ಮನೆಯ ಕಸವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸುವುದರ ಕುರಿತು ಜಾಗೃತಿ ಮೂಡಿಸುತ್ತಿರುವ, ವರ್ಮ್ ರಾಣಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ವಾಣಿ ಮೂರ್ತಿ ನ್ಯಾಷನಲ್ ಜಿಯೋಗ್ರಫಿಕ್ ವಾಹಿನಿಯ ಈ ವನ್ ಫಾರ್ ಚೇಂಜ್ ಗೌರವಕ್ಕೆ ಪಾತ್ರರಾಗಿದ್ದಾರೆ. ತುಳಸಿ ಗೌಡ ಅವರು ಚಿಕ್ಕಂದಿನಿಂದಲೂ ಕಾಡು ಬೆಳೆಸುವ ಕೆಲಸದಿಂದ ಖ್ಯಾತಿ ಹೊಂದಿದ್ದಾರೆ.ಮರಗಳ ಕುರಿತ ಮಾಹಿತಿ ಕಣಜ ಎಂದೇ ಅವರನ್ನು ಗುರುತಿಸಲಾಗುತ್ತದೆ.

ಇನ್ನು ವಾಣಿ ಮೂರ್ತಿಯವರು ಮನೆಯ ಕಸವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸಿ ಅದರಿಂದ ತರಕಾರಿ ಬೆಳೆಸುತ್ತಾರೆ. ಆ ಮೂಲಕ ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಇವರ ಸಾಮಾಜಿಕ ಜಾಲತಾಣಕ್ಕೆ ಸುಮಾರು ಎರಡೂವರೆ ಲಕ್ಷ ಮಂದಿ ಹಿಂಬಾಲಕರು ಇದ್ದಾರೆ.

ನ್ಯಾಟ್ ಜಿಯೋದಲ್ಲಿ ಇವರೊಂದಿಗೆ ಪಕ್ಷಿ ರಕ್ಷಣೆಯಲ್ಲಿ ತೊಡಗಿಸಿಕೊಂಡು ಮಹಿಳೆಯರನ್ನು ಒಟ್ಟುಗೂಡಿಸಿ ಹರ್ಗಿಲಾ ಆರ್ಮಿ ಕಟ್ಟಿರುವ ಪೂರ್ಣಿಮಾ ಬರ್ಮನ್ ದೇವಿ, ಕಾರ್ಬನ್ ವೇಸ್ಟ್‌ ನಿಂದ ಟೈಲ್ಸ್ ತಯಾರಿಸುವ ತೇಜಸ್ ಸಿದ್ನಾಳ್, ಗೋವಾದಲ್ಲಿ ಹವಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವೆಂಕಟೇಶ್ ಚಾರ್ಲು, ರೈತರಿಗೆ ನೆರವಾಗುವ ಉತ್ಪನ್ನ ರೂಪಿಸಿರುವ ವಿದ್ಯುತ್ ಮೋಹನ್, ಬುಂದೇಲ್‌ಖಂಡದಲ್ಲಿ ಪರಿಸರ ಜಾಗೃತಿ ಮೂಡಿಸಿರುವ ಆರ್‌ಜೆ ವರ್ಷಾ ರಾಯ್ಕರ್, ಹಳ್ಳಿಗಾಡಲ್ಲಿ ಸೋಲಾರ್ ಕ್ರಾಂತಿ ಮಾಡಿರುವ ರುಕ್ಮಣಿ ಕಟಾರ, ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವ ಪೂನಮ್, ಆದಿತ್ಯ ಸಿಂಗ್ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ತಯಾರಕ ಸೋನಮ್ ವಾಂಗ್‌ಚುಕ್ ಕುರಿತ ಕಿರುಚಿತ್ರಗಳು ಪ್ರಸಾರವಾಗಲಿವೆ.

ಇದನ್ನೂ ಓದಿ: 23ನೇ ವಯಸ್ಸಿನಿಂದಲೂ ಗಿಡ ನೆಡುತ್ತಲೇ ಇದ್ದಾರೆ 72 ವರ್ಷದ ತುಳಸಿಗೌಡ

ಈ ಕುರಿತು ಮಾತನಾಡಿರುವ ಡಿಸ್ನಿ ಸ್ಟಾರ್ ವಾಹಿನಿಗಳ ಮುಖ್ಯಸ್ಥ ಕೆವಿನ್, ಇಷ್ಟು ವರ್ಷಗಳ ಪಯಣದಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿ ಪ್ರೇಕ್ಷಕರಿಗೆ ಪರಿಸರವನ್ನು ಪ್ರೀತಿಸಲು ಪ್ರೇರೇಪಿಸುವ ಕಾರ್ಯಕ್ರಮಗಳನ್ನು ತೋರಿಸುತ್ತಾ ಬಂದಿದೆ. ಈಗ ವನ್ ರ್ ಚೇಂಜ್ ಮೂಲಕ ಪ್ರಕೃತಿಯ ಜೊತೆ ಸೇರಿಕೊಳ್ಳಲು ಸ್ಫೂರ್ತಿ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ದಿಯಾ ಮಿರ್ಜಾ, ಪರಿಸರ ಸಂರಕ್ಷಣೆಯ ಕಡೆಗೆ ಒಂದು ಹೆಜ್ಜೆ ಇಡುವುದು ಮುಖ್ಯ. ನಾನು ಆರಂಭದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ವಿರೋಧಿಸಿ ಸ್ಟೀಲ್ ಬಾಟಲ್ ಬಳಸಲು ಆರಂಭಿಸಿದಾಗ ಅನೇಕರು ನಕ್ಕಿದ್ದರು. ಆದರೆ ಈಗ ಬಹುತೇಕರು ಸ್ಟೀಲ್ ಬಾಟಲ್ ಬಳಸುತ್ತಾರೆ. ನೀವು ಈಗ ಇಡುವ ಒಂದು ಹೆಜ್ಜೆ ಮಹತ್ತರ ಬದಲಾವಣೆ ತರಬಲ್ಲದು. ಮುಂದಿನ ಪೀಳಿಗೆ ಹೆಮ್ಮೆ ಪಡುವಂತೆ ಪರಿಸರವನ್ನು ಅವರಿಗೆ ದಾಟಿಸೋಣ ಎಂದರು.

click me!