ಗುಂಡಿಗೆ ಎದೆಯೊಡ್ಡಿದ ಬೈಲಹೊಂಗಲದ ಸಪ್ತವೀರರು!

By Kannadaprabha News  |  First Published Aug 2, 2022, 1:30 PM IST

ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಇನ್ನೇನು ಪ್ರಾಣ ಪಕ್ಷಿ ಹಾರಿ ಹೋಗುತ್ತದೆ ಎನ್ನುವ ಸಮಯದಲ್ಲೂ ಆ ಏಳು ಜನ ವೀರರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುತ್ತಿದ್ದರು. ಆ ವೀರರ ಸ್ಮಾರಕ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದೆ. 


ವರದಿ: ಉದಯ ಕೊಳೇಕರ ಬೈಲಹೊಂಗಲ

ಬೈಲಹೊಂಗಲ (ಆ.2) : ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಇನ್ನೇನು ಪ್ರಾಣ ಪಕ್ಷಿ ಹಾರಿ ಹೋಗುತ್ತದೆ ಎನ್ನುವ ಸಮಯದಲ್ಲೂ ಆ ಏಳು ಜನ ವೀರರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುತ್ತಿದ್ದರು. ಭಾರತ ಮಾತೆಗೆ ಜಯಘೋಷ ಕೂಗುತ್ತಿದ್ದರು. ವಂದೇ ಮಾತರಂ ಎಂಬ ಘೋಷಣೆ ಮೊಳಗುತ್ತಿತ್ತು. ಬೈಲಹೊಂಗಲದ ಹೃದಯ ಭಾಗದಲ್ಲಿರುವ ಆ ವೀರರ ಸ್ಮಾರಕ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದೆ.

Tap to resize

Latest Videos

ಗೋಲಿಬಾರ್‌(Golibar)ನಲ್ಲಿ ಪ್ರಾಣ ತ್ಯಾಗ ಮಾಡಿದ ಏಳು ಜನ ವೀರರ ಸ್ಮರಣಾರ್ಥ ಬೈಲಹೊಂಗಲ(Bylahongala)_ ಪಟ್ಟಣದ ಹೃದಯ ಭಾಗದ ರಾಯಣ್ಣ ವೃತ್ತದಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ. ಇಂದಿಗೂ ಪ್ರತಿಯೊಂದು ಹೋರಾಟ, ಚಳವಳಿಗಳು ಈ ಸ್ಥಳದಿಂದಲೇ ಆರಂಭಗೊಳ್ಳುತ್ತವೆ. ಪ್ರತಿಯೊಬ್ಬರಿಗೂ ದೇಶ, ನಾಡು, ನುಡಿ, ಸ್ವಾತಂತ್ರ್ಯದ ಮಹತ್ವ ಕುರಿತು ಹುತಾತ್ಮರ ಸ್ಮಾರಕ ಜಾಗೃತಿ ಮೂಡಿಸುವ ಶ್ರದ್ಧಾ ಕೇಂದ್ರವಾಗಿದೆ.

India@75: ದಾಸ್ಯದ ವಿರುದ್ಧ ದಂಗೆ ನಡೆದ ಸ್ಥಳ ಬೆಂಗಳೂರು ದಂಡು

ಭಾರತ ಬಿಟ್ಟು ತೊಲಗಿ ಆಂದೋಲನ:

ಮಹಾತ್ಮಾ ಗಾಂಧೀಜಿ(Mahatma Gandhiji)ಅವರ ಕರೆಯ ಮೇರೆಗೆ 1942ರ ಆಗಷ್ಟ17ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿರಿ ಆಂದೋಲನ ನಡೆಯಿತು. ಇದಕ್ಕೆ ಪೂರಕವಾಗಿ ಬೈಲಹೊಂಗಲದ ಶಾಲೆಯೊಂದರಲ್ಲಿ ಹೋರಾಟ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸ್ಥಳೀಯ ಹೋರಾಟಗಾರರು ಪಾಲ್ಗೊಂಡಿದ್ದರು. ಈ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಬಂದ ಆಂಗ್ಲ ಅಧಿಕಾರಿಗಳು ಹೋರಾಟಗಾರರನ್ನು ಬಂಧಿಸಿ ಸೆರೆ ಮನೆಯಲ್ಲಿಟ್ಟರು. ಬಂಧಿತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ನೂರಾರು ಚಳವಳಿಗಾರರು ಪ್ರತಿಭಟನೆ ಮೂಲಕ ಠಾಣೆಗೆ ಮುತ್ತಿಗೆ ಹಾಕಲು ಹೊರಟರು. ಪ್ರತಿಭಟನಾಕಾರರನ್ನು ಚದುರಿಸಲು ಇನ್ಸಪೆಕ್ಟರ್‌ ಸಮೇತ 80 ಪೊಲೀಸರ ಗುಂಪು ಎದುರಾಯಿತು. ಪೊಲೀಸರನ್ನು ನೋಡುತ್ತಿದ್ದಂತೆಯೇ ಬೋಲೋ ಭಾರತ ಮಾತಾಕೀ ಜೈ, ವಂದೇ ಮಾತರಂ, ಬಂಧಿತರನ್ನು ಬಿಡುಗಡೆ ಮಾಡಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿರಿ ಎನ್ನುವ ಘೋಷಣೆಗಳನ್ನು ಮೊಳಗಿಸುತ್ತ ಚಳವಳಿಗಾರರು ಮುನ್ನುಗಿದರು.

ಹೋರಾಟಗಾರರ ಮೇಲೆ ಗುಂಡಿನ ದಾಳಿ:

ಈ ವೇಳೆ ಇನ್ಸಪೆಕ್ಟರ್‌ ಪೀರಜಾದೆ ಚಳವಳಿಗಾರರನ್ನು ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸುವಂತೆ ಆದೇಶ ನೀಡಿದರು. ಆದರೂ ಗುಂಡಿನ ಸಪ್ಪಳ ಕೇಳುತ್ತಲೇ ಘೋಷಣೆಗಳೊಂದಿಗೆ ಪ್ರತಿಭನಾಕಾರರು ಮುನ್ನಡೆದರು. ಕೆಲವರು ಪೊಲೀಸರ ಕಡೆಗೆ ಕಲ್ಲುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಅದರಲ್ಲೊಂದು ಕಲ್ಲು ಪಿರಜಾದೇ ಕೈಗೆ ಬಿತ್ತು. ಇದರಿಂದ ಕೋಪಗೊಂಡ ಇನ್ಸಪೆಕ್ಟರ್‌ ತನ್ನಲ್ಲಿದ್ದ ರಿವಾಲ್ವಾರನಿಂದ ಗುಂಡು ಹಾರಿಸಿದ. ಈ ವೇಳೆ ಗುಂಡುಗಳು ಸ್ವಾತಂತ್ರ್ಯ ಹೋರಾಟಗಾರರಾದ ರಾಮಪ್ಪ ಶಿವಪ್ಪ ದೊಡವಾಡ, ರಾಚಪ್ಪ ವೀರಪ್ಪ ಹೆಬ್ಬಾಳ, ಮಲ್ಲಪ್ಪ ಜಕ್ಕಪ್ಪ ಹಿರೇಹಳ್ಳಿ, ದತ್ತು ಲಕ್ಷ್ಮಣ ಮಾತಾಡೆ, ಸಿದ್ದಪ್ಪ ಗುರಪ್ಪ ಸತ್ತಿಗೇರಿ, ಗುರುಸಿದ್ದಪ್ಪ ದುಂಡಪ್ಪ ಬೆಳಗಾಂವಿ, ಶಿವಲಿಂಗಪ್ಪ ಯಲ್ಲಪ್ಪ ಕೋತಂಬ್ರಿ ಅವರ ದೇಹ ಸೇರಿದವು. ಗಾಯಗೊಂಡು ಕೊನೆಯ ಉಸಿರಿನವರೆಗೆ ಈ ಏಳು ವೀರರ ಬಾಯಿಂದ ಬಂದದ್ದು ಮಾತ್ರ ದೇಶಪ್ರೇಮದ ಘೋಷಣೆಗಳು. ಇದು ಈ ನಾಡಿನ ಕೆಚ್ಚೆದೆಗೆ ಸಾಕ್ಷಿಯಾಗಿದೆ. ಇದೇ ಕಾರಣಕ್ಕೆ ಬೈಲಹೊಂಗಲ ಗಂಡು ಮೆಟ್ಟಿನ ನಾಡು ಎಂದು ಜನಜನಿತವಾಗಿದೆ.

ಆಗಸ್ಟ್ 2 ರಿಂದ 15ರವರೆಗೆ ತಿರಂಗ ಬಾವುಟವನ್ನು ನಿಮ್ಮ ಪ್ರೊಫೈಲ್‌ ಫೋಟೋ ಮಾಡಿಕೊಳ್ಳಬಹುದು: ಮೋದಿ

ತಲುಪುವುದು ಹೇಗೆ?

ಬೆಳಗಾವಿಯಿಂದ ಬೈಲಹೊಂಗಲ 40 ಕಿ.ಮೀ. ದೂರದಲ್ಲಿದೆ. ಪಟ್ಟಣದ ಬಸ್‌ ನಿಲ್ದಾಣದಿಂದ ಪೂರ್ವಕ್ಕೆ 50ರಿಂದ 60 ಮೀಟರ್‌ ದೂರದಲ್ಲಿಯೇ ರಾಯಣ್ಣ ವೃತ್ತದಲ್ಲಿನ ಹುತಾತ್ಮ ಸ್ಮಾರಕವಿದೆ.

click me!