India@75: ಬ್ರಿಟಿಷರು, ಜಮೀನ್ದಾರರಿಗೆ ಸಿಂಹಸ್ವಪ್ನವಾಗಿದ್ದ ಬಾಗಲಕೋಟೆಯ ಧೀರ ಸಿಂಧೂರ ಲಕ್ಷ್ಮಣ

By Suvarna NewsFirst Published Aug 1, 2022, 4:38 PM IST
Highlights

ಸಿಂಧೂರ ಲಕ್ಷ್ಮಣ ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಜತ್ತ ತಾಲೂಕಿನ ಸಿಂಧೂರ ಗ್ರಾಮದಲ್ಲಿ 1898ರಲ್ಲಿ ಜನಿಸಿದ್ದ. ಬಾಲ್ಯದಿಂದಲೂ ಶೌರ್ಯಕ್ಕೆ ಹೆಸರಾಗಿದ್ದ. 

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಸಮೀಪದಲ್ಲಿ ಕಪ್ಪರ ಪಡಿಯಮ್ಮನ ದೇವಾಲಯವಿದೆ. ಪಡಿ ಎಂದರೆ ಬೃಹದಾಕಾರದ ಕಲ್ಲುಗಳು ಸಂಧಿಸುವ ಸ್ಥಳ. ಈ ಪಡಿ ಪ್ರದೇಶವು ಶತ್ರುಗಳಿಂದ ತಪ್ಪಿಸಿಕೊಳ್ಳುವ ಅಡಗುದಾಣವಾಗಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಭಾಗದ ಕ್ರಾಂತಿಕಾರಿಗಳಿಗೆಲ್ಲ ಆಶ್ರಯ ನೀಡಿದ ಈ ಪಡಿ, ಶೂರ ಸಿಂಧೂರ ಲಕ್ಷ್ಮಣನ ಕ್ರಾಂತಿಯ ಬಿಡಾರವೂ ಆಗಿತ್ತು. ಇಲ್ಲಿಂದಲೇ ಲಕ್ಷ್ಮಣ ಕ್ರಾಂತಿಕಾರ್ಯಗಳನ್ನು ನಡೆಸುತ್ತಿದ್ದ. ಈ ಪಡಿಯಲ್ಲಿ ಆಂಜನೇಯನ ವಿಗ್ರಹ, ಸಿಂಧೂರ ಲಕ್ಷ್ಮಣ ಉಳಿದುಕೊಂಡಿದ್ದ ಕೋಣೆಗಳನ್ನು ಕಾಣಬಹುದಾಗಿದೆ. ಇಲ್ಲಿಯೇ ಇರುವ ಸಿಂಧೂರ ಲಕ್ಷ್ಮಣನ ಸಮಾಧಿ ಇಂದಿಗೂ ಆತನ ಹೋರಾಟದ ಬದುಕನ್ನು ನೆನಪಿಸುತ್ತದೆ.

ಸಿಂಧೂರ ಲಕ್ಷ್ಮಣನ ಸ್ವಾತಂತ್ರ್ಯ ಹೋರಾಟ:

ಸಿಂಧೂರ ಲಕ್ಷ್ಮಣ ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಜತ್ತ ತಾಲೂಕಿನ ಸಿಂಧೂರ ಗ್ರಾಮದಲ್ಲಿ 1898 ರಲ್ಲಿ ಜನಿಸಿದ್ದ. ಬಾಲ್ಯದಿಂದಲೂ ಶೌರ್ಯಕ್ಕೆ ಹೆಸರಾಗಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದ ಆತನ ಸೋದರ ಮಾವಂದಿರಿಬ್ಬರು ಒಮ್ಮೆ ಬ್ರಿಟಿಷರಿಂದ ತಪ್ಪಿಸಿಕೊಂಡು ಆಶ್ರಯ ಕೇಳಿ ಆತನ ಮನೆಗೆ ಬಂದಿದ್ದರು. ಈ ವಿಷಯ ತಿಳಿದ ಬ್ರಿಟಿಷರು ಲಕ್ಷ್ಮಣನ ಮನೆಗೆ ಮುತ್ತಿಗೆ ಹಾಕಿ ಆತನ ಇಬ್ಬರು ಮಾವಂದಿರ ಜೊತೆಗೆ ಯಾವ ತಪ್ಪೂ ಮಾಡದ ಲಕ್ಷ್ಮಣನನ್ನೂ ಬಂಧಿಸಿ ಜೈಲಿಗಟ್ಟಿದರು. ಇದು ಆತನನ್ನು ಕೆರಳಿಸಿತು.

India@75:ಸ್ವತಂತ್ರ್ಯ ಹೋರಾಟಗಾರರ ಜನ್ಮಭೂಮಿ ವಿಜಯಪುರದ ಚಡಚಣ

ಬೀಳಗಿಯ ಗುಡ್ಡಗಳೇ ಅಡಗುದಾಣ:

ಇದೇ ವೇಳೆ ದೇಶದಲ್ಲಿ ಅಸಹಕಾರ ಚಳವಳಿಗೆ ಗಾಂಧೀಜಿ ಕರೆ ಕೊಟ್ಟರು. ಈ ಸಂದರ್ಭದಲ್ಲಿ ಕರ್ನಾಟಕದ ಜಮಖಂಡಿ ಹಾಗೂ ಬೀಳಗಿಯ ಗುಡ್ಡಗಳನ್ನೇ ತನ್ನ ಅಡಗುದಾಣಗಳನ್ನಾಗಿ ಮಾಡಿಕೊಂಡಿದ್ದ ಲಕ್ಷ್ಮಣ, ಬ್ರಿಟಿಷರ ವಿರುದ್ಧ ಸಮರ ಸಾರಿ ತೆರಿಗೆ ಸಂಗ್ರಹಿಸಿಟ್ಟಿದ್ದ ಖಜಾನೆಗಳು, ಗೋದಾಮುಗಳನ್ನು, ಬ್ರಿಟಿಷರಿಗೆ ಸಹಕರಿಸುತ್ತಿದ್ದ ಶ್ರೀಮಂತರ ಮನೆಗಳನ್ನೂ ಲೂಟಿ ಮಾಡಿ ಆ ಹಣವನ್ನೆಲ್ಲ ಮಹಾರಾಷ್ಟ್ರದ ಸಾಂಗಲಿ, ಅಂದಿನ ವಿಜಯಪುರ ಜಿಲ್ಲೆಯ ಬೀಳಗಿ, ಜಮಖಂಡಿ ತಾಲೂಕಿನಲ್ಲಿದ್ದ ಬಡವರಿಗೆ ಹಂಚುತ್ತಿದ್ದ. ಬ್ರಿಟಿಷ್‌ ಅಧಿಕಾರಿಯೊಬ್ಬ ಈತನ ಮೇಲೆ ಗುಂಡು ಹಾರಿಸಲು ಬಂದಾಗ, ಆತನನ್ನು ಅನಾಮತ್ತಾಗಿ ಎತ್ತಿ ಗೋಡೆಗೆ ಬಿಸಾಕಿ ಕೊಂದು ಹಾಕಿದ್ದ.

India@75:ಸ್ವತಂತ್ರ್ಯ ಹೋರಾಟಕ್ಕೆ ಶಿಸ್ತಿನ ಸಿಪಾಯಿಗಳ ನೀಡಿದ 'ಹಿಂದೂಸ್ತಾನಿ ಸೇವಾದಳ'

ಸಿಂಧೂರ ಲಕ್ಷ್ಮಣ ಏಳಡಿ ಎತ್ತರದ ಅಜಾನುಬಾಹುವಾಗಿದ್ದ. ಆತ 10 ಅಡಿ ಎತ್ತರದ ಗೋಡೆಗಳನ್ನೂ ಲೀಲಾಜಾಲವಾಗಿ ಹಾರಿಬಿಡುವ ಸಾಮರ್ಥ್ಯ ಹೊಂದಿದ್ದ. ತನ್ನೊಡನೆ ಹತ್ತಾರು ಜನ ಬೆಂಬಲಿಗರ ಚಿಕ್ಕ ಪಡೆಯನ್ನು ಕಟ್ಟಿಕೊಂಡಿದ್ದ ಆತನನ್ನು ನೇರವಾಗಿ ಎದುರಿಸಿ, ಬಂಧಿಸುವುದು ಅಸಾಧ್ಯವೆನಿಸಿದಾಗ ಬ್ರಿಟಿಷರು ಎಂದಿನಂತೆ ಮೋಸದ ಮಾರ್ಗ ಹಿಡಿದರು. ಸಿಂಧೂರ ಲಕ್ಷ್ಮಣನ ನಿಕಟವರ್ತಿಯಾಗಿದ್ದ ಬೀಳಗಿಯ ವೆಂಕಪ್ಪಗೌಡನನ್ನು ಬಂಧಿಸಿ, ಚಿತ್ರಹಿಂಸೆ ನೀಡಿ ಆತನಿಂದ ಮಾಹಿತಿ ಪಡೆದು, 1922ರಲ್ಲಿ ಸಿಂಧೂರ ಲಕ್ಷ್ಮಣ ಖಜಾನೆಯೊಂದನ್ನು ಲೂಟಿ ಮಾಡುವ ಸಂದರ್ಭದಲ್ಲಿ ಮರೆಯಲ್ಲಿ ನಿಂತು ಆತನನ್ನು ಗುಂಡಿಟ್ಟು ಕೊಂದರು. ಕ್ರಾಂತಿಕಾರಿ ಯುವಕನೊಬ್ಬ ಕೇವಲ ತನ್ನ 24ನೇ ವಯಸ್ಸಿನಲ್ಲಿ ಬ್ರಿಟಿಷರ ಮೋಸಕ್ಕೆ ಬಲಿಯಾದ.

ಪಡಿಯಮ್ಮ ದೇಗುಲ ತಲುಪುವುದು ಹೇಗೆ?

ಬಾಗಲಕೋಟೆಯಿಂದ ಬೀಳಗಿ ಪಟ್ಟಣಕ್ಕೆ ರಸ್ತೆ ಮಾರ್ಗದಲ್ಲಿ ಬಂದು ಬೀಳಗಿಯಿಂದ ನಾಗರಾಳ ಗ್ರಾಮದತ್ತ 5 ಕಿ.ಮೀ. ದೂರಕ್ಕೆ ಸಾಗಿದರೆ ಕಪ್ಪರ ಪಡಿಯಮ್ಮನ ದೇವಾಲಯವಿರುವ ಗುಡ್ಡ ತಲುಪಬಹುದಾಗಿದೆ.

- ಆನಂದ ಜಡೀಮಠ ಬೀಳಗಿ

click me!