ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರ ಸ್ವಾತಂತ್ರ್ಯ ಸಂಗ್ರಾಮದ ಹಲವು ಘಟನಾವಳಿಗಳಿಗೆ ಸಾಕ್ಷಿಯಾಗಿದ್ದು, ಅದರಲ್ಲೂ ದಂಡು ಪ್ರದೇಶ (ಕಂಟೋನ್ಮೆಂಟ್) ಸ್ವಾತಂತ್ರ್ಯದ ದಂಗೆಯ ಕಿಡಿ ಹೊತ್ತಿಸಿದ ನೆಲೆಯಾಗಿತ್ತು.
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರ ಸ್ವಾತಂತ್ರ್ಯ ಸಂಗ್ರಾಮದ ಹಲವು ಘಟನಾವಳಿಗಳಿಗೆ ಸಾಕ್ಷಿಯಾಗಿದ್ದು, ಅದರಲ್ಲೂ ದಂಡು ಪ್ರದೇಶ (ಕಂಟೋನ್ಮೆಂಟ್) ಸ್ವಾತಂತ್ರ್ಯದ ದಂಗೆಯ ಕಿಡಿ ಹೊತ್ತಿಸಿದ ನೆಲೆಯಾಗಿತ್ತು.
ಅಂದು ಬ್ರಿಟಿಷರ ಅತಿ ದೊಡ್ಡ ಸೇನಾ ನೆಲೆಯಾಗಿದ್ದ ದಂಡು ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧದ ಪ್ರತಿರೋಧವು ಭಾರತೀಯರಿಗಿದ್ದ ಸ್ವಾತಂತ್ರ್ಯದ ದಾಹದ ತೀವ್ರತೆ ಬಿಂಬಿಸುತ್ತಿತ್ತು. ಭಾರತೀಯರು ಕೆಳ ದರ್ಜೆಯ ಜನ ಎಂದು ನಿಂದಿಸಿದ ಬ್ರಿಟಿಷ್ ಸೇನಾಧಿಕಾರಿಯ ಬಲಿ ಪಡೆದ ವೀರಭೂಮಿ ಇದು.
ಬೆಂಗಳೂರಿಗೆ ಪ್ರಿನ್ಸ್ ಆಫ್ ವೇಲ್ಸ್ ಆಗಮಿಸಿದಾಗ ನಡೆದ ಭಾರೀ ಪ್ರತಿಭಟನೆ ವೇಳೆ ಗೋಲಿಬಾರ್ ಆದಾಗ ದಸ್ತಗೀರ್ ಮತ್ತು ಅಬ್ದುಲ್ ರಜಾಕ್ ಎಂಬಿಬ್ಬರು ತರುಣರು ಎದೆಯೊಡ್ಡಿದ ವೀರರ ತವರೂರು ಈ ದಂಡು ಪ್ರದೇಶ. ಹೀಗೆ, ಸ್ವಾತಂತ್ರ್ಯಕ್ಕಾಗಿ ನಡೆದ ಅನೇಕ ಚಳವಳಿ, ಹೋರಾಟಗಳು ಹಾಗೂ ಬ್ರಿಟಿಷರ ವಿರುದ್ಧದ ದಂಗೆಯ ಅನೇಕ ಘಟನಾವಳಿಗಳು ಬೆಂಗಳೂರಿನ ದಂಡು ಪ್ರದೇಶದ ಗರ್ಭದಲ್ಲಿ ಅಡಗಿವೆ.
India@75: ಸ್ವತಂತ್ರ್ಯ ಹೋರಾಟಗಾರರ ಜನ್ಮಭೂಮಿ ವಿಜಯಪುರದ ಚಡಚಣ
ಗುಂಡಿಟ್ಟು ಕೊಲ್ಲೋದು ಸಾಮಾನ್ಯ:
ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಅವಧಿಯಲ್ಲಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಒಬ್ಬ ಪಂಜಾಬಿ ಕಾವಲುಗಾರ ಮತ್ತು ಒಬ್ಬ ಬ್ರಿಟಿಷ್ ಸೇನಾಧಿಕಾರಿ ನಡುವೆ ಜಗಳವಾಗಿ ಬ್ರಿಟಿಷ್ ಅಧಿಕಾರಿ ಕೊಲ್ಲಲ್ಪಟ್ಟ. ಮರು ದಿನವೇ ಬ್ರಿಟಿಷರು ಪಂಜಾಬಿ ಸೈನಿಕರಿಬ್ಬರನ್ನು ಗುಂಡಿಟ್ಟು ಕೊಂದರು. ಈ ರೀತಿಯ ಪ್ರಕರಣಗಳು ಇಲ್ಲಿ ಸಾಮಾನ್ಯವಾಗಿದ್ದವು. ದಂಡು ಪ್ರದೇಶದ ಈಗಿನ ಕಮರ್ಷಿಯಲ್ ಸ್ಟ್ರೀಟ್‌ನ ಮದ್ಯದಂಗಡಿ ಬಂದ್‌ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಇಬ್ಬರು ಮುಸ್ಲಿಂ ಯುವಕರನ್ನು ಬ್ರಿಟಿಷರು ಬಂದೂಕಿನ ಬಾಯೋನೆಟ್‌ನಿಂದ ಇರಿದು ಕೊಂದಿದ್ದರು.
ಸ್ಥಳ, ರಸ್ತೆಗಳಿಗೆ ಬ್ರಿಟಿಷರ ಹೆಸರು:
ದಂಡು ಪ್ರದೇಶದ ವಿವಿಧ ರಸ್ತೆ ಮತ್ತು ಸ್ಥಳಗಳಿಗೆ ಬ್ರಿಟಿಷ್ ಸೇನೆ ಮತ್ತು ಬ್ರಿಟಿಷ್ ಅಧಿಕಾರಿಗಳ ಹೆಸರು ಇಡಲಾಗಿದೆ. ಇನ್ಫೆಂಟ್ರಿ ರಸ್ತೆ, ಕ್ಯಾವಲ್ರಿ ರಸ್ತೆ, ಆರ್ಟಲರಿ ರಸ್ತೆ, ಗನ್ ಟ್ರೂಪ್ ರಸ್ತೆ ಇತ್ಯಾದಿ. ಇನ್ನು ಲಾರ್ಡ್ ಕರ್ಜನ್ 1900ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ನೆನಪಿಗೆ ಕರ್ಜನ್ ಸ್ಟ್ರೀಟ್, ಸ್ಟುಆರ್ಚ್ ಫ್ರೇಸರ್ ಎಂಬ ಅಧಿಕಾರಿ ಹೆಸರನ್ನು ಫ್ರೇಸರ್ ಟೌನ್‌ಗೆ, ಕರ್ನ್‌ಲ್ ಕ್ಲಾಕ್ಸ್ ಎಂಬ ಅಧಿಕಾರಿ ಹೆಸರನ್ನು ಕ್ಲಾಕ್ಸ್‌ಪೇಟೆ(ಮುಂದೆ ಮರ್ಫಿಟೌನ್ ಆಯಿತು) ಹೆಸರಿಡಲಾಗಿದೆ. ಡಾ.ಎಚ್.ಬೆನ್ಸನ್ ರಿಚರ್ಡ್ ಅವರ ಹೆಸರನ್ನು ಬೆನ್ಸನ್‌ಟೌನ್‌ಗೆ, ಕಲೆಕ್ಟರ್ ಆಗಿದ್ದ ಸರ್ ರಿಚರ್ಡ್ ಅವರ ಹೆಸರನ್ನು ರಿಚರ್ಡ್ ಟೌನ್‌ಗೆ ಹೀಗೆ ಕಲೆಕ್ಟರ್ ಆಗಿದ್ದ ಆಸ್ಟಿನ್, ಟಸ್ಕರ್...ಹೀಗೆ ಬ್ರಿಟಿಷ್ ಅಧಿಕಾರಿಗಳ ಹೆಸರುಗಳನ್ನು ವಿವಿಧ ಪ್ರದೇಶಗಳಿಗೆ ನಾಮಕರಣ ಮಾಡಲಾಗಿದೆ. ಸರ್ ಮಾರ್ಕ್ ಕಬ್ಬನ್ ಅವರ ಸೆಕ್ರೆಟರಿಯಾಗಿದ್ದ ಕನ್ನಿಂಗ್ ಹ್ಯಾಮ್ ಅವರ ಹೆಸರನ್ನು ರಸ್ತೆಗೆ ಇಡಲಾಗಿದೆ. ಇನ್ನು ಕ್ವೀನ್ಸ್ ರಸ್ತೆ, ಎಡ್ವರ್ಡ್ ರಸ್ತೆ ಎಂಬ ಹೆಸರುಗಳನ್ನು ಇಂದಿಗೂ ಕಾಣಬಹುದು.
ಸೊಳ್ಳೆ ಕಾಟಕ್ಕೆ ಸೇನಾ ನೆಲೆ ಸ್ಥಳಾಂತರ
ಆಂಗ್ಲೋ ಮೈಸೂರು ಯುದ್ಧದಲ್ಲಿ (1791) ಟಿಪ್ಪು ಸುಲ್ತಾನ್ ಸೋತಾಗ ಬೆಂಗಳೂರು ಬ್ರಿಟಿಷರ ತೆಕ್ಕೆಗೆ ಬಂತು. ಈ ಯುದ್ಧಕ್ಕಾಗಿ ಹಲಸೂರು, ಮಾವಳ್ಳಿಗಳಲ್ಲಿ ಬ್ರಿಟಿಷರು ಸೇನೆ ಜಮಾವಣೆ ಮಾಡಿದ್ದರು. ಇದೇ ಮುಂದೆ ಕಂಟೋನ್ಮೆಂಟ್ ಸೃಷ್ಟಿಗೆ ಕಾರಣವಾಯಿತು (ಕಂಟೋನ್ಮೆಂಟ್ ಎಂದರೆ ಸೈನ್ಯದ ದಳಗಳಿಗೆ ಗೊತ್ತು ಮಾಡಿದ ಸ್ಥಳ). ಟಿಪ್ಪು ಸುಲ್ತಾನ್‌ನನ್ನು ಮಣಿಸಿದ ಬಳಿಕ ಮೊದಲು ಶ್ರೀರಂಗಪಟ್ಟಣದಲ್ಲಿ ಕಂಟೋನ್ಮೆಂಟ್ ಸ್ಥಾಪಿಸಲಾಗಿತ್ತು. ಆದರೆ, ಅಲ್ಲಿ ಸೊಳ್ಳೆ ಕಾಟ ಎಂಬ ಕಾರಣಕ್ಕೆ ಬೆಂಗಳೂರಿಗೆ ಸೇನೆ ಸ್ಥಳಾಂತರಿಸಲಾಗಿತ್ತು.
ದಂಡು ಪ್ರದೇಶ ಎಲ್ಲಿತ್ತು?
ಬ್ರಿಟಿಷರ ಕಂಟೋನ್ಮೆಂಟ್ ಪ್ರದೇಶವು ಈಗಿನ ರಾಜಭವನದಿಂದ ಎನ್‌ಜಿಇಎಫ್ (ಬಿನ್ನಮಂಗಲ) ವರೆಗೆ, ದಕ್ಷಿಣದ ಅಗರ ಗ್ರಾಮದಿಂದ ಉತ್ತರದಲ್ಲಿ ಟ್ಯಾನರಿ ರಸ್ತೆ ವರೆಗೆ ಒಟ್ಟು 34 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿತ್ತು. ಬೆಂಗಳೂರಿನಲ್ಲಿ ಕಂಟೋನ್ಮೆಂಟ್ ರೈಲು ನಿಲ್ದಾಣವಿದ್ದು, ಆ ಪ್ರದೇಶವನ್ನು ಕಂಟೋನ್ಮೆಂಟ್ ಎಂದೇ ಕರೆಯಲಾಗುತ್ತದೆ.
India@75:ಸ್ವತಂತ್ರ್ಯ ಹೋರಾಟಕ್ಕೆ ಶಿಸ್ತಿನ ಸಿಪಾಯಿಗಳ ನೀಡಿದ 'ಹಿಂದೂಸ್ತಾನ್ ಸೇವಾದಳ'
ಹಲವು ಹೋರಾಟದ ಕಾರ್ಯಕ್ರಮ:
ಕಾಂಗ್ರೆಸ್ ಸ್ಥಾಪನೆಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ 1935ರಲ್ಲಿ ಕಂಟೋನ್ಮೆಂಟ್‌ನಲ್ಲಿ ಸಾವಿರಾರು ಸಂಖ್ಯೆಯ ಯುವಕರು ಸೇರಿ ಅದ್ಧೂರಿ ಆಚರಣೆ ಮಾಡಿದ್ದರು. ಇದೇ ಹಲವು ಕಾರ್ಯಕ್ರಮಗಳನ್ನು ಸೇನಾ ನೆಲೆ ವ್ಯಾಪ್ತಿಯಲ್ಲಿ ಜರುಗಿದ್ದವು. ಕಂಟೋನ್ಮೆಂಟ್ ನಿವಾಸಿಗಳಾದ ಟಿ.ಸಚ್ಚಿದಾನಂದ ಶಿವಂ, ಎಂ.ಎಂ.ದೇವರಾಜ್ ಚೆಟ್ಟಿಯಾರ್, ಆರ್.ಕೃಷ್ಣಯ್ಯ, ಸೆಟ್ಲೂರ್, ಹಾಜಿ ಉಸ್ಮಾನ್ ಸೇಠ್ ಸೇರಿ ಹಲವರು ನೆಹರು ಸೇವಾ ಸಂಘಂ ಹಾಗೂ ಗಾಂಧಿ ಚರಕಾ ಸಂಘ ಸ್ಥಾಪಿಸಿಕೊಂಡು ಚಳವಳಿಯಲ್ಲಿ ಭಾಗಿಗಳಾಗಿದ್ದರು.
- ವಿಶ್ವನಾಥ ಮಲೇಬೆನ್ನೂರು