ಮಲೆನಾಡು, ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ನಿಡಘಟ್ಟಹತ್ತು ಹಲವು ಸ್ವಾತಂತ್ರ್ಯಯೋಧರನ್ನು ಕಂಡ ಪುಟ್ಟಊರು. ಮಹಾತ್ಮ ಗಾಂಧೀಜಿಯ ತತ್ವ, ಸಿದ್ಧಾಂತಗಳಿಂದ ಪ್ರೇರೇಪಿತರಾಗಿ ಇಲ್ಲಿನ ಎಲೆ ನಂಜಪ್ಪ, ಸಿದ್ದರಾಮಯ್ಯ, ಗಿರಿಗೌಡ, ನಂಜಪ್ಪ, ಗಣೇಶ್‌ರಾವ್, ಭಾಷಾ ಅಯ್ಯಂಗಾರ್ ಸೇರಿ ಅನೇಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಮಲೆನಾಡು, ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ನಿಡಘಟ್ಟಹತ್ತು ಹಲವು ಸ್ವಾತಂತ್ರ್ಯಯೋಧರನ್ನು ಕಂಡ ಪುಟ್ಟಊರು. ಮಹಾತ್ಮ ಗಾಂಧೀಜಿಯ ತತ್ವ, ಸಿದ್ಧಾಂತಗಳಿಂದ ಪ್ರೇರೇಪಿತರಾಗಿ ಇಲ್ಲಿನ ಎಲೆ ನಂಜಪ್ಪ, ಸಿದ್ದರಾಮಯ್ಯ, ಗಿರಿಗೌಡ, ನಂಜಪ್ಪ, ಗಣೇಶ್‌ರಾವ್, ಭಾಷಾ ಅಯ್ಯಂಗಾರ್ ಸೇರಿ ಅನೇಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಊರೂರು ಸುತ್ತಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಇವರೆಲ್ಲ ಒಂದೆಡೆ ಸೇರಿ ಹೋರಾಟದ ರೂಪುರೇಷೆ ಕುರಿತು ಚರ್ಚೆ ನಡೆಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಕಾವು ಉತ್ತುಂಗದಲ್ಲಿದ್ದ ಕಾಲದಲ್ಲಿ ಇವರು ಒಂದೆಡೆ ಸೇರಿ ಚರ್ಚೆ ನಡೆಸುತ್ತಿದ್ದ, ಮುಂದಿನ ಹೋರಾಟದ ರೂಪುರೇಷೆ ತಯಾರಿಸುತ್ತಿದ್ದ ನಿಡಘಟ್ಟದ ಜಾಗವೀಗ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಹೋರಾಟಕ್ಕೆ ಪ್ರೇರಣೆ ನೀಡಿದ ಆ ಜಾಗದಲ್ಲಿ 1948ರಲ್ಲಿ ಗಾಂಧೀಜಿ ದೇವಾಲಯ ನಿರ್ಮಾಣ ಮಾಡಲಾಗಿದ್ದು, ನಿತ್ಯ ಪೂಜೆ ನಡೆಸಲಾಗುತ್ತಿದೆ.
India@75: ಸ್ವಾತಂತ್ರ್ಯ ಸೇನಾನಿಗಳ ಅಡಗುತಾಣವಾಗಿದ್ದ ಮಧುಗಿರಿ ಕೋಟೆ
ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ, 1927ರಲ್ಲಿ ಮಹಾತ್ಮ ಗಾಂಧೀಜಿ ಜಿಲ್ಲೆಯ ಕಡೂರು ಹಾಗೂ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು. ಸ್ವಾತಂತ್ರ್ಯ ಹೋರಾಟದ ಕುರಿತು ಜಾಗೃತಿ ಮೂಡಿಸಿದ್ದರು. ಗಾಂಧೀಜಿ ಬಂದು ಹೋದ ನಂತರ ಜಿಲ್ಲೆಯಲ್ಲಿ ಸ್ವಾತಂತ್ರ್ಯದ ಕುರಿತು ಅರಿವು ಮೂಡಿತು. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಾಯಿತು. ಬ್ರಿಟಿಷರ ವಿರುದ್ಧ ಗ್ರಾಮ, ಗ್ರಾಮಗಳಲ್ಲಿ ಾಗೃತಿ ಮೂಡಿಸಲು ಹಲವು ಮಂದಿ ಯುವಕರ ತಂಡಗಳು ರಚನೆಯಾಯಿತು.
ಊರೂರು ಸುತ್ತಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಈ ಯುವಕ ಪಡೆ ಮಾಡುತ್ತಿತ್ತು. ಹಾಗೆ ದಿನವಿಡೀ ಊರೂರು ಸುತ್ತಿಬರುತ್ತಿದ್ದ ಯುವಕರ ಪಡೆ ಸಂಜೆ ಊರಿಗೆ ವಾಪಸ್ ಬಂದ ನಂತರ ಒಂದೆಡೆ ಸೇರಿ ಸಭೆ ನಡೆಸುತ್ತಿದ್ದರು. ಪ್ರಚಲಿತ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಮುಂದಿನ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ತಯಾರಿಸುತ್ತಿದ್ದರು. ಹೋರಾಟದ ಕುರಿತು ಅನೇಕ ರಹಸ್ಯ ಮಾತುಕತೆಗಳೂ ಇಲ್ಲೇ ಚರ್ಚೆಗೆ ಬರುತ್ತಿದ್ದವು.
ಈ ವಿಷಯ ಬ್ರಿಟಿಷರ ಕಿವಿಗೆ ಬಿದ್ದಾಗ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿಗಟ್ಟಲಾಯಿತು. ಇಷ್ಟಾದರೂ ಯುವಕರ ಹೋರಾಟದ ಕಿಚ್ಚು ತಣ್ಣಗಾಗಲಿಲ್ಲ, ಕೆಲ ಸಮಯದ ನಂತರ ಜೈಲಿಂದ ಬಿಡುಗಡೆ ಆಗುತ್ತಲೇ ಮತ್ತೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು, ನಿಡಘಟ್ಟದಲ್ಲಿರುವ ಅದೇ ಪ್ರದೇಶದಲ್ಲಿ ಸಭೆ ಸೇರಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
India@75:ಬರಿಗಾಲಲ್ಲಿ ಆಡಿ ಬ್ರಿಟಿಷರನ್ನು ಸೋಲಿಸಿದ ಮೋಹನ್ ಬಾಗನ್
ಮುಂದೆ ನಿಡಘಟ್ಟದ ಹೋರಾಟಗಾರರ ನಿತ್ಯ ಚರ್ಚೆಯ ಅಡ್ಡೆಯಲ್ಲೇ ಸ್ವಾತಂತ್ರ್ಯಾ ನಂತರ 1948ರಲ್ಲಿ ಗಾಂಧಿ ದೇವಾಲಯ ನಿರ್ಮಾಣ ಮಾಡಲಾಯಿತು. ದೇವಸ್ಥಾನದೊಳಗೆ ಮಹಾತ್ಮ ಗಾಂಧೀಜಿಯವರ ಮೂರ್ತಿ ಇಟ್ಟು ಪೂಜೆ ಮಾಡಿಕೊಂಡು ಬರಲಾಯಿತು. ಇಂದು ಗ್ರಾಮದ ಎಲ್ಲ ಹಬ್ಬ, ಹರಿದಿನಗಳಲ್ಲೂ ಈ ದೇವಾಲಯದಲ್ಲಿ ತಪ್ಪದೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ನಡೆಯಲಿರುವ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ಜಯಗಳಿಸಿ ಬಂದರೆ ಇದೇ ದೇವಾಲಯದಲ್ಲಿ ಟ್ರೋಫಿ ಇಟ್ಟು ಯುವಕರು ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ.
ತಲುಪುವುದು ಹೇಗೆ ?
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿರುವ ನಿಡಘಟ್ಟಗ್ರಾಮಕ್ಕೆ ಬೆಂಗಳೂರಿನಿಂದ ಅರಸೀಕೆರೆ, ಬಾಣಾವರ, ದೇವನೂರು, ಜೋಡಿ ಹೋಚಿಹಳ್ಳಿ ಮಾರ್ಗವಾಗಿ ಬರಬಹುದು. ಶಿವಮೊಗ್ಗ-ಬೆಂಗಳೂರು ರೈಲಿನಲ್ಲಿ ಬೀರೂರು ಜಂಕ್ಷನ್‌ನಲ್ಲಿ ಇಳಿದುಕೊಳ್ಳಬಹುದು. ಅಲ್ಲಿಂದ ಕಡೂರಿಗೆ ಬಸ್ ಮೂಲಕ ಪ್ರಯಾಣಿಸಬಹುದು. ಕಡೂರಿನಿಂದ ನಿಡಘಟ್ಟ20 ಕಿ.ಮೀ ಅಂತರದಲ್ಲಿದೆ.
- ಕೆ.ತಾರಾನಾಥ್