ಆಂಗ್ಲರ ದಾಸ್ಯದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಕ್ವಿಟ್ ಇಂಡಿಯಾ ಚಳವಳಿ ದಾವಣಗೆರೆ (Davanagere) ನಗರ, ಮಾಯಕೊಂಡ ಗ್ರಾಮ, ಹರಿಹರ, ಜಗಳೂರು, ಹೊನ್ನಾಳಿ, ಚನ್ನಗಿರಿ ಹೀಗೆ ಪಟ್ಟಣ, ಗ್ರಾಮ ಎಲ್ಲೆಡೆ ವ್ಯಾಪಿಸಿದ್ದ ಕಾಲ ಅದು.
ದಾವಣಗೆರೆ (ಜೂ. 24): ಆಂಗ್ಲರ ದಾಸ್ಯದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಕ್ವಿಟ್ ಇಂಡಿಯಾ ಚಳವಳಿ ದಾವಣಗೆರೆ (Davanagere) ನಗರ, ಮಾಯಕೊಂಡ ಗ್ರಾಮ, ಹರಿಹರ, ಜಗಳೂರು, ಹೊನ್ನಾಳಿ, ಚನ್ನಗಿರಿ ಹೀಗೆ ಪಟ್ಟಣ, ಗ್ರಾಮ ಎಲ್ಲೆಡೆ ವ್ಯಾಪಿಸಿದ್ದ ಕಾಲ ಅದು.
ಮೂಕಸಾಕ್ಷಿಯಾಗಿದೆ ಗಡಿಯಾರ ಕಂಬ:
ದಾವಣಗೆರೆಯಲ್ಲೂ 1942ರ ಆಗಸ್ಟ್ 9ರಂದು ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ ಹರಿಹರ-ದಾವಣಗೆರೆ-ತೋಳಹುಣಸೆ-ಮಾಯಕೊಂಡ ಮಾರ್ಗದ ರೈಲ್ವೇ ಹಳಿಗಳನ್ನು ಕಿತ್ತು, ರೈಲ್ವೆ ನಿಲ್ದಾಣ, ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಹೋರಾಟವು ತೀವ್ರ ಸ್ವರೂಪ ಪಡೆದಿತ್ತಲ್ಲದೇ ಮಧ್ಯ ಕರ್ನಾಟಕದ ಇಂತಹದ್ದೊಂದು ಕಿಚ್ಚು ಶಮನಕ್ಕೆ ಪೊಲೀಸರು ಹೋರಾಟಗಾರರ ಮೇಲೆ ಗುಂಡು ಹಾರಿಸಿದ್ದಕ್ಕೆ ಇಂದಿಗೂ ಇಲ್ಲಿನ ಗಡಿಯಾರ ಕಂಬ ಮೂಕಸಾಕ್ಷಿಯಾಗಿ ನಿಂತಿದೆ.
India@75:ಸ್ವಾತಂತ್ರ್ಯ ಸೇನಾನಿಗಳ ಅಡಗುತಾಣವಾಗಿದ್ದ ಮಧುಗಿರಿ ಕೋಟೆ
ಪ್ರತಿವರ್ಷ ಶ್ರದ್ಧಾಂಜಲಿ ಸಲ್ಲಿಕೆ:
ಇಲ್ಲಿನ ರೈಲ್ವೆ ನಿಲ್ದಾಣದಿಂದ ಗಡಿಯಾರ ಕಂಬ, ಹಳೆ ತಹಸೀಲ್ದಾರ್ ಕಚೇರಿ ಮೂಲಕ ಹೋಗುವ ಈಗಿನ ಅಂಚೆ ಕಚೇರಿ ರಸ್ತೆಯಿಂದಲೇ ಗುಂಡು ಹಾರಿಸಿಕೊಂಡು ಬಂದ ಆಂಗ್ಲರ ಪಡೆಯ ಗುಂಡೇಟಿಗೆ ಅಂದು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹೋರಾಟಕ್ಕೆ ಧುಮುಕಿದ್ದ ಸಾವಿರಾರು ಜನ ಹೋರಾಟಗಾರರ ಪೈಕಿ 6 ಜನ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಬ್ರಿಟಿಷರ ಗೋಲಿಬಾರಿಗೆ ಅಂದು ಇಲ್ಲಿನ ಹೋರಾಟಗಾರರಾದ ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರುಪಾಕ್ಷಪ್ಪ, ಮಾಗಾನಹಳ್ಳಿ ಹನುಮಂತಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ ಹುತಾತ್ಮರಾದರು.
ಈ ಆರೂ ಜನ ಹುತಾತ್ಮರ ಸ್ಮರಣಾರ್ಥ ದಾವಣಗೆರೆ ಪಾಲಿಕೆ ಆವರಣದಲ್ಲಿ ಅಶೋಕ ಸ್ತಂಭ ಒಳಗೊಂಡ ಹುತಾತ್ಮರ ಸ್ಮಾರಕ ಸ್ಥಾಪಿಸಲಾಗಿದೆ. ಪ್ರತಿ ವರ್ಷ ಪಾಲಿಕೆ, ಸಂಘ-ಸಂಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿ, ಯುವಜನರಿಂದ ಸ್ಮಾರಕಕ್ಕೆ ಗೌರವಾರ್ಪಣೆ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯ ನಿರಂತರ ನಡೆಯುತ್ತಾ ಬರುತ್ತಿದೆ.
ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯಗಳನ್ನು ಕೂಗುತ್ತಾ ನೂರಾರು ಸಂಖ್ಯೆಯಲ್ಲಿ ರೈಲ್ವೇ ನಿಲ್ದಾಣದತ್ತ ಕೈಯಲ್ಲಿ ಪಂಜುಗಳನ್ನು ಹಿಡಿದು, ನುಗ್ಗುತ್ತಿದ್ದ ಹೋರಾಟಗಾರರ ಮೇಲೆ ಪೊಲೀಸರು ಅಮಾನುಷವಾಗಿ ಗೋಲಿಬಾರ್ ಮಾಡಿದ್ದರಿಂದ ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರುಪಾಕ್ಷಪ್ಪ, ಮಾಗಾನಹಳ್ಳಿ ಹನುಮಂತಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ ಸ್ಥಳದಲ್ಲೇ ಹುತಾತ್ಮರಾದರು.
India@75:ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿತ್ತು ನೌಕಾಪಡೆ ಸೈನಿಕರ ದಂಗೆ
ಮಾಯಕೊಂಡ ಕಿಚ್ಚು:
ದಾವಣಗೆರೆಯಲ್ಲಿ ಹೋರಾಟಗಾರರ ಮೇಲೆ ಗುಂಡು ಹಾರಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಹರಿಹರ, ಮಾಯಕೊಂಡ ರೈಲ್ವೇ ನಿಲ್ದಾಣಗಳು, ರೈಲ್ವೇ ಹಳಿಗಳನ್ನು ಧ್ವಂಸ ಮಾಡಲಾಯಿತು. ಸರ್ಕಾರಿ ಕಚೇರಿಗಳಿಗೆ ಬೆಂಕಿ ಇಟ್ಟು, ಕಾಗದ ಪತ್ರಗಳನ್ನು ಹರಿದು ಹಾಕುವ ಮೂಲಕ ಸ್ವಾತಂತ್ರ್ಯ ಚಳವಳಿ ದಿನದಿನಕ್ಕೂ ತೀವ್ರ ಸ್ವರೂಪ ಪಡೆಯ ತೊಡಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಮಾಯಕೊಂಡವೂ ಅತೀ ಪ್ರಮುಖ ಸ್ಥಳವಾಗಿತ್ತು. ಜಿಲ್ಲೆಯಲ್ಲೇ ಅತೀ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಹೊಂದಿದ್ದ ಗ್ರಾಮವೂ ಮಾಯಕೊಂಡವಾಗಿತ್ತು. ಇನ್ನು ತುಂಗಭದ್ರಾ ನದಿ ತಟದ ಹರಿಹರ ನಗರದಲ್ಲೂ ಹೋರಾಟದ ಕಿಚ್ಚು ಕಡಿಮೆ ಇರಲಿಲ್ಲ.
- ನಾಗರಾಜ ಎಸ್.ಬಡದಾಳ್