India@75: ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಹುಬ್ಬಳ್ಳಿ ಸಿದ್ಧಾರೂಢ ಮಠ

By Suvarna News  |  First Published Jul 13, 2022, 1:19 PM IST

ಸ್ವಾತಂತ್ರ್ಯ ಹೋರಾಟಕ್ಕೆ ಇಲ್ಲಿನ ಆಧ್ಯಾತ್ಮಿಕ ಗುರು ಸಿದ್ಧಾರೂಢರು ತಮ್ಮದೇ ಆದ ರೀತಿಯಲ್ಲಿ ಪ್ರೇರಣೆ ನೀಡಿದ್ದರು. ಜತೆಗೆ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ ಸೇರಿ ಹಲವು ಹೋರಾಟಗಾರರಿಗೆ ಹುರಿದುಂಬಿಸಿ, ಸೂಕ್ತ ಸಲಹೆ ಸೂಚನೆ, ಮಾರ್ಗದರ್ಶನ ಮಾಡಿದ್ದರು.


ಸ್ವಾತಂತ್ರ್ಯ ಹೋರಾಟಕ್ಕೆ ಇಲ್ಲಿನ ಆಧ್ಯಾತ್ಮಿಕ ಗುರು ಸಿದ್ಧಾರೂಢರು ತಮ್ಮದೇ ಆದ ರೀತಿಯಲ್ಲಿ ಪ್ರೇರಣೆ ನೀಡಿದ್ದರು. ಜತೆಗೆ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ ಸೇರಿ ಹಲವು ಹೋರಾಟಗಾರರಿಗೆ ಹುರಿದುಂಬಿಸಿ, ಸೂಕ್ತ ಸಲಹೆ ಸೂಚನೆ, ಮಾರ್ಗದರ್ಶನ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದ ಸಮಾವೇಶದಲ್ಲಿ ತಾವೇ ಅಧ್ಯಕ್ಷತೆ ವಹಿಸಿ ಹುಬ್ಬಳ್ಳಿಗರಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಿದ್ದರು.

ಅದು 1920ರ ದಶಕ. ದೇಶದಲ್ಲೆಲ್ಲ ಸ್ವಾತಂತ್ರ್ಯ ಹೋರಾಟ ಕಿಚ್ಚು ಭುಗಿಲೆದ್ದಿತ್ತು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಎಲ್ಲೆಡೆ ಮೊಳಗಿತ್ತು. ಕರ್ನಾಟಕದ ಪ್ರಮುಖ ಕೇಂದ್ರವಾಗಿದ್ದ ಹುಬ್ಬಳ್ಳಿಯಲ್ಲೂ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಜನರನ್ನು ಪ್ರೇರೇಪಿಸುವುದಕ್ಕಾಗಿ ಮಹಾತ್ಮ ಗಾಂಧೀಜಿ ಹುಬ್ಬಳ್ಳಿಗೆ ಆಗಮಿಸಿದ್ದರು. ಗಾಂಧೀಜಿ ನಗರಕ್ಕೆ ಬಂದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಸಾಗರೋಪಾದಿಯಲ್ಲಿ ಜನ ಸಮೂಹ ಹರಿದು ಬಂದಿತ್ತು. ಇಲ್ಲಿನ ಜನರ ಉತ್ಸಾಹ ಕಂಡು ಗಾಂಧೀಜಿ ಇಲ್ಲೊಂದು ಸಮಾವೇಶ ನಡೆಸಲು ನಿರ್ಧರಿಸಿದ್ದರು.

Latest Videos

undefined

India@75:ಮಂಗಳೂರು ಕರಾವಳಿಯನ್ನು ಪರಕೀಯರ ಕೈಯಿಂದ ರಕ್ಷಿಸಿದ್ದ ರಾಣಿ ಅಬ್ಬಕ್ಕ

ಆದರೆ, ಸಮಾವೇಶದ ಅಧ್ಯಕ್ಷತೆ ವಹಿಸುವಂತೆ ಯಾರಿಗೆ ಹೇಳೋದು? ಗಾಂಧೀಜಿಗಿಂತ ದೊಡ್ಡ ವ್ಯಕ್ತಿ ಯಾರಿದ್ದಾರೆ ಹುಬ್ಬಳ್ಳಿಯಲ್ಲಿ ಎಂಬ ಚಿಂತನೆ ಪ್ರಾರಂಭವಾಯಿತು. ಆಗ ಕೆಲ ಸ್ವಾತಂತ್ರ್ಯ ಹೋರಾಟಗಾರರು ಸಿದ್ಧಾರೂಢರ ಹೆಸರನ್ನು ಗಾಂಧೀಜಿ ಎದುರು ಪ್ರಸ್ತಾಪಿಸಿದರು. ಸಿದ್ಧಾರೂಢರು ಎಲ್ಲರೂ ಒಪ್ಪುವಂಥ ಸ್ವಾಮೀಜಿ. ಉದಾತ್ತ ಧ್ಯೇಯ, ಸರಳ ಜೀವನ ಸಾಗಿಸುತ್ತಿದ್ದಾರೆ ಎಂದೆಲ್ಲ ಗಾಂಧೀಜಿ ಅವರಿಗೆ ಮನವರಿಕೆ ಮಾಡಿದರು.

ಅದರಂತೆ ಸಿದ್ಧಾರೂಢ ಮಠಕ್ಕೆ ತೆರಳಿದ ಗಾಂಧೀಜಿ ಆರೂಢರನ್ನು ಭೇಟಿಯಾಗಿ ಆಹ್ವಾನ ನೀಡಿದರು. ಗಾಂಧೀಜಿ ಮಾತಿಗೆ ಒಪ್ಪಿಗೆ ಸೂಚಿಸಿದ ಸಿದ್ಧಾರೂಢರು, ಬಹಿರಂಗ ಸಮಾವೇಶದ ಅಧ್ಯಕ್ಷತೆ ವಹಿಸಲು ಸಮ್ಮತಿಸಿದರು. ಬಳಿಕ ಈಗಿನ ಸಂಯುಕ್ತ ಕರ್ನಾಟಕ ಪತ್ರಿಕಾ ಕಚೇರಿ ಆವರಣದಲ್ಲಿ ಬೃಹತ್‌ ಕಾಂಗ್ರೆಸ್‌ ಸಮಾವೇಶ ನಡೆಯಿತು.

ಹುಬ್ಬಳ್ಳಿಯ ಆರಾಧ್ಯ ದೈವವಾದ ಆರೂಢರು, ಗಾಂಧೀಜಿ ಒಂದೇ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಎಂದರೆ ಕೇಳಬೇಕೆ? ಕಿಕ್ಕಿರಿದು ಜನಸಾಗರ ಹರಿದು ಬಂದಿತ್ತು. ಖಾವಿಧಾರಿಯಾದ ಸಿದ್ಧಾರೂಢರಿಗೆ ಖಾದಿ ತೊಡಿಸುವುದು ಹೇಗೆ ಎಂಬ ಪ್ರಶ್ನೆ ಕೂಡ ಗಾಂಧೀಜಿಗೆ ಕಾಡಿತ್ತು. ಇದನ್ನರಿತ ಸಿದ್ಧಾರೂಢರು, ‘ನಾನು ಸನ್ಯಾಸಿಯಾದ ಮಾತ್ರಕ್ಕೆ ದೇಶ ಬೇಡವೇ? ನಿಸ್ಸಂಕೋಚವಾಗಿ ಖಾದಿ ತೊಡಿಸಿ’ ಎಂದಿದ್ದರು. ಬಳಿಕವಷ್ಟೇ ಗಾಂಧೀಜಿ ಸಿದ್ಧಾರೂಢರ ಕೊರಳಿಗೆ ಖಾದಿ ಬಟ್ಟೆಹಾಕಿದ್ದರು.

ಸಮಾವೇಶದಲ್ಲಿ ಗಾಂಧೀಜಿ ಸುಮಾರು ಒಂದು ಗಂಟೆ ಕಾಲ ಸುದೀರ್ಘ ಭಾಷಣ ಮಾಡಿದರೆ, ಸಿದ್ಧಾರೂಢರು ಹಿಂದಿ ಹಾಗೂ ಕನ್ನಡದಲ್ಲಿ ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಅಧ್ಯಕ್ಷೀಯ ಭಾಷಣ ಮಾಡಿದರು. ಈ ಸಮಾವೇಶದಿಂದ ಉತ್ತೇಜನಗೊಂಡ ಹುಬ್ಬಳ್ಳಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತಷ್ಟುಧುಮುಕಿದರು. ಸ್ವಾತಂತ್ರ್ಯ ಹೋರಾಟ ಬಳಿಕ ಮತ್ತಷ್ಟುತೀವ್ರವಾಯಿತು. ಕೆಲವು ಸ್ವಾತಂತ್ರ್ಯ ಹೋರಾಟಗಾರರು ಮಠದಲ್ಲಿ ಆಶ್ರಯವನ್ನೂ ಪಡೆಯುತ್ತಿದ್ದರಂತೆ.

ಗಾಂಧೀಜಿ ಮತ್ತು ಸಿದ್ಧಾರೂಡರ ಸಮಾವೇಶದ ಬಳಿಕ ಹುಬ್ಬಳ್ಳಿಯಲ್ಲಿ ಹೋರಾಟದ ಕಿಚ್ಚು ಹೆಚ್ಚಾಯಿತು. ಬಾಲಗಂಗಾಧರ ತಿಲಕ, ಸರ್‌ ಸಿದ್ಧಪ್ಪ ಕಂಬಳಿ ಸೇರಿ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಹಲವು ಬಾರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಸಲಹೆ ಸೂಚನೆ, ಮಾರ್ಗದರ್ಶನ ಪಡೆಯುತ್ತಿದ್ದರು ಎಂದು ಸ್ಮರಿಸುತ್ತಾರೆ ಸಿದ್ಧಾರೂಡ ಮಠದ ಟ್ರಸ್ಟ್‌ನ ಮಾಜಿ ಚೇರ್ಮನ್‌ ಡಿ.ಡಿ.ಮಾಳಗಿ.

India@75:ಸ್ವಾತಂತ್ಯ, ಸ್ವಾಭಿಮಾನದ ಸಾಕ್ಷಿ ಕಿತ್ತೂರು ಕೋಟೆ

ತಲುಪುವುದು ಹೇಗೆ?

ಸಿದ್ಧರೂಢಮಠ ನಗರದಲ್ಲೇ ಇದೆ. ಮುಖ್ಯ ಬಸ್‌ ನಿಲ್ದಾಣದಿಂದ ಸುಮಾರು 3 ಕಿ.ಮೀ.ದೂರದಲ್ಲಿದೆ. ಬಸ್‌ ಅಥವಾ ಖಾಸಗಿ ವಾಹನದಲ್ಲಿ ಮಠಕ್ಕೆ ಸುಲಭವಾಗಿ ತಲುಪಬಹುದಾಗಿದೆ.

- ಶಿವಾನಂದ ಗೊಂಬಿ

click me!