ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಳ್ಳಾರಿ ಬಗ್ಗೆ ಮಹಾತ್ಮಾ ಗಾಂಧೀಜಿ ಸೇರಿ ಅನೇಕ ರಾಷ್ಟ್ರೀಯ ನಾಯಕರಿಗೆ ವಿಶೇಷ ಪ್ರೀತಿ ಇತ್ತು. ಹೀಗಾಗಿ ಗಾಂಧೀಜಿ ಸೇರಿ ಅನೇಕ ನಾಯಕರು ಬಳ್ಳಾರಿಗೆ ಆಗಮಿಸಿ ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರನ್ನು ಚಳವಳಿಗೆ ಪ್ರೇರೇಪಿಸುತ್ತಿದ್ದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಳ್ಳಾರಿ ಬಗ್ಗೆ ಮಹಾತ್ಮಾ ಗಾಂಧೀಜಿ ಸೇರಿ ಅನೇಕ ರಾಷ್ಟ್ರೀಯ ನಾಯಕರಿಗೆ ವಿಶೇಷ ಪ್ರೀತಿ ಇತ್ತು. ಹೀಗಾಗಿ ಗಾಂಧೀಜಿ ಸೇರಿ ಅನೇಕ ನಾಯಕರು ಬಳ್ಳಾರಿಗೆ ಆಗಮಿಸಿ ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರನ್ನು ಚಳವಳಿಗೆ ಪ್ರೇರೇಪಿಸುತ್ತಿದ್ದರು. ಅಷ್ಟೇ ಅಲ್ಲ, ಬ್ರಿಟಿಷರ ವಿರುದ್ಧ ಸಮರ ಸಾರಿದ ಅನೇಕ ಯುವಕರ ಜೊತೆ ಪ್ರತ್ಯೇಕವಾಗಿ ಮಾತನಾಡಿ ಚಳವಳಿಗೆ ಇನ್ನಷ್ಟುಪ್ರೇರಣೆ ನೀಡುತ್ತಿದ್ದರು. ಗಾಂಧೀಜಿ ಅವರಂತೂ ಎರಡು ಬಾರಿ ಬಳ್ಳಾರಿಗೆ ಬಂದು ಹೋರಾಟದ ಕಿಚ್ಚು ಹೆಚ್ಚಿಸಿದ್ದರು.
ಸ್ವಾತಂತ್ರ್ಯ ಹೋರಾಟದ ಮುಂಚೂಣಿ ರಾಷ್ಟ್ರೀಯ ನಾಯಕರಾದ ಬಾಬು ರಾಜೇಂದ್ರಪ್ರಸಾದ್, ಲಾಲ್ ಬಹದ್ದೂರ್‌ಶಾಸ್ತ್ರಿ, ಬಾಲಗಂಗಾಧರ ತಿಲಕ್, ಕೆ.ಎನ್.ಮಿಶ್ರಾ, ಡಿ.ಪಿ.ಕರ್‌ಮರ್‌ಕರ್ ಸೇರಿ ಅನೇಕರು ಬಳ್ಳಾರಿಗೆ ಆಗಮಿಸಿ ಇಲ್ಲಿನ ಹೋರಾಟಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇದಕ್ಕೆ ಕಾರಣವೂ ಇತ್ತು. ಬಳ್ಳಾರಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ಮುಂಚೂಣಿಯಲ್ಲಿದ್ದ ಟೇಕೂರು ಸುಬ್ರಮಣ್ಯಂ, ನಾರಾಯಣಶಾಸ್ತ್ರಿ, ಕಲ್ಲೂರು ಸುಬ್ಬಾರಾವ್, ಲ್ಯಾಂಗಳಿ, ಭೀಮಸೇನರಾವ್, ಎಸ್.ಶ್ರೀನಿವಾಸ್ ಅಯ್ಯಂಗಾರ್, ಟಿ.ಬಿ.ಕೇಶವರಾವ್ ಸೇರಿ ಅನೇಕ ಹಿರಿಯ ಹೋರಾಟಗಾರರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಬಳ್ಳಾರಿ ನಗರದಲ್ಲಿ ನಡೆಯುತ್ತಿರುವ ಹೋರಾಟ, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಬೀದಿಗೆ ಬಂದು ಚಳವಳಿಗೆ ಧುಮುಕುತ್ತಿರುವುದು, ಮಹಿಳೆಯರೂ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಡಿ ಇಟ್ಟು ಬ್ರಿಟಿಷ್ ಆಡಳಿತಕ್ಕೆ ಸಡ್ಡು ಹೊಡೆದ ಸಂಗತಿ ಗಾಂಧೀಜಿ ಸೇರಿ ಉಳಿದ ರಾಷ್ಟ್ರೀಯ ನಾಯಕರ ಗಮನಕ್ಕೆ ಬಂದಿತ್ತು. ಆ ವೇಳೆ ತೆಲುಗು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿಯಲ್ಲಿದ್ದರೂ ಸ್ವಾತಂತ್ರ್ಯ ಹೋರಾಟ ವಿಚಾರದಲ್ಲಿ ಎಲ್ಲೂ ಭಾಷಾ ಭೇದವಿಲ್ಲದೆ ಚಳವಳಿಗೆ ಒಗ್ಗಟ್ಟಾಗಿದ್ದು ವಿಶೇಷವಾಗಿತ್ತು.
undefined
ಗಾಂಧೀಜಿ ಬಂದರು ಬಳ್ಳಾರಿಗೆ:
ಅದು 1926. ದೇಶದೆಲ್ಲೆಡೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಜೋರಾಗಿತ್ತು. ಜಿಲ್ಲೆಯಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮ ಕುರಿತು ತಿಳಿದಿದ್ದ ಗಾಂಧೀಜಿ ಬಳ್ಳಾರಿಗೆ ಆಗಮಿಸಿದ್ದರು. ಇಲ್ಲಿನ ಹೋರಾಟಗಾರರ ಜೊತೆ ಪ್ರತ್ಯೇಕ ಸಭೆ ನಡೆಸಿದ ಬಾಪೂಜಿ ಬಳಿಕ ನಗರದ ಮುನ್ಸಿಪಲ್ ಮೈದಾನದಲ್ಲಿ ಜರುಗಿದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. 1934ರಲ್ಲೂ ಬಂದಿದ್ದ ಗಾಂಧೀಜಿ ಕೊಟ್ಟೂರಿನ ಆಶ್ರಮವೊಂದರ ಶಂಕುಸ್ಥಾಪನೆ ಮಾಡಿದ್ದರು. ಕೂಡ್ಲಿಗಿಯಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದರು. ಬಳಿಕ ಸಂಡೂರಿನ ನಿಸರ್ಗ ರಮಣೀಯ ತಾಣವನ್ನು ಹಾಡಿ ಹೊಗಳಿದ್ದ ಬಾಪೂಜಿ, ‘ಸಂಡೂರು ದಕ್ಷಿಣ ಭಾರತದ ಸುಂದರ ವನ’ ಎಂದು ಬಣ್ಣಿಸಿದ್ದರು.
ಗಾಂಧೀಜಿಯವರ ಈ ಭೇಟಿ ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಮತ್ತಷ್ಟುಹೆಚ್ಚಿಸಿತು. 1943ರಲ್ಲಿ ಬಾಬು ರಾಜೇಂದ್ರಪ್ರಸಾದ್, ಕೆ.ಎನ್.ಮಿಶ್ರಾ ಬಳ್ಳಾರಿಗೆ ಆಗಮಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಬಲ ನೀಡಿದರು. ಬಳ್ಳಾರಿ ಹಿರಿಯ ಹೋರಾಟಗಾರರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮಾರ್ಗದರ್ಶನ ನೀಡುತ್ತಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ಅವರು 1952ರಲ್ಲಿ ಬಳ್ಳಾರಿಗೆ ಆಗಮಿಸಿದ್ದರು. ಬಳ್ಳಾರಿಗೆ ಗಾಂಧೀಜಿಯವರ ಭೇಟಿ ನೀಡಿದ ದಿನಗಳನ್ನು ಸ್ಮರಣೀಯವಾಗಿಸಲು ನಗರದ ಸುಧಾವೃತ್ತದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದ್ದು, ಇಲ್ಲಿ ಗಾಂಧೀಜಿಯವರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.
ತಲುಪುವುದು ಹೇಗೆ?:
ಹೊಸಪೇಟೆ ರಸ್ತೆಯಿಂದ ಬಳ್ಳಾರಿ ಪ್ರವೇಶಿಸುವ ಮುನ್ನ ಬರುವ ಸುಧಾವೃತ್ತದಲ್ಲಿ ಹುತಾತ್ಮರ ಸ್ಮಾರಕವಿದೆ. ನಗರದ ಹೃದಯ ಭಾಗದಲ್ಲಿರುವ ಇಲ್ಲಿಗೆ ಬಸ್, ಆಟೋಗಳ ಓಡಾಟವಿದೆ.
- ಕೆ.ಎಂ.ಮಂಜುನಾಥ್