India@75: ಹೋರಾಟಕ್ಕೆ ಶಕ್ತಿ ತುಂಬಿದ ಬಳ್ಳಾರಿಯ ಮಲ್ಲಸಜ್ಜನ ವ್ಯಾಯಾಮ ಶಾಲೆ

By Suvarna News  |  First Published Jun 26, 2022, 12:05 PM IST

- ಹೋರಾಟಕ್ಕೆ ಶಕ್ತಿ ತುಂಬಿದ ಮಲ್ಲಸಜ್ಜನ ವ್ಯಾಯಾಮ ಶಾಲೆ

-ಸ್ವಾತಂತ್ರ್ಯ ಯೋಧರ ತರಬೇತಿ ಕೇಂದ್ರವಾಗಿತ್ತು ಬಳ್ಳಾರಿಯ ಈ ಸ್ಥಳ

-1965ರಲ್ಲಿ ಗಾಂಧೀಭವನ, ಧ್ಯಾನಕೇಂದ್ರ, ಗ್ರಂಥಾಲಯ ನಿರ್ಮಾಣ


ಸ್ವಾತಂತ್ರ್ಯ ಚಳವಳಿ ತೀವ್ರವಾಗಿದ್ದ 1930ರಲ್ಲಿ ಕ್ರಾಂತಿಕಾರಿ ಹೋರಾಟಗಾರ ಭಗತ್‌ಸಿಂಗ್‌ ಅನುಯಾಯಿಗಳಾದ ಮಹಾವೀರ ಸಿಂಗ್‌, ಭಕ್ತೇಶ್ವರದತ್ತ ಹಾಗೂ ಡಾ.ಗಯಾ ಪ್ರಸಾದ್‌ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಜೈಲಿನಲ್ಲಿದ್ದುಕೊಂಡೇ ಬಳ್ಳಾರಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ತೀವ್ರಗೊಳಿಸಲು ಈ ಮೂವರು ಕ್ರಾಂತಿಕಾರರು ಸಿದ್ಧತೆ ಮಾಡಿಕೊಂಡಿದ್ದರು. ಇವರ ಪ್ರೇರಣೆಯಿಂದಾಗಿಯೇ 1933ರ ಸೆ.16ರಂದು ಬಳ್ಳಾರಿಯಲ್ಲಿ ‘ಮಲ್ಲಸಜ್ಜನ ವ್ಯಾಯಾಮ ಶಾಲೆ’ ಸ್ಥಾಪನೆಗೊಂಡಿತು. ಇದು ಅಂದು ಸ್ವಾತಂತ್ರ್ಯ ಯೋಧರನ್ನು ಚಳವಳಿಗೆ ಸಿದ್ಧಗೊಳಿಸುತ್ತಿದ್ದ ತರಬೇತಿ ಕೇಂದ್ರವಾಗಿ ಕೆಲಸ ಮಾಡಿತ್ತು. ಮಲ್ಲರು ಸಜ್ಜನರೇ ಆಗಿರುತ್ತಾರೆ ಎಂಬ ಜಾನಪದ ನುಡಿಯೇ ಅದಕ್ಕೆ ಆ ಹೆಸರಿಡಲು ಕಾರಣ.

Tap to resize

Latest Videos

undefined

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ಭಗತ್‌ಸಿಂಗ್‌ ಅನುಯಾಯಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಜಿಲ್ಲೆಯಲ್ಲಿ ಸ್ವಾತಂತ್ರ್ಯ ಚಳವಳಿ ವೇಗ ಪಡೆದುಕೊಳ್ಳಲು ಪ್ರಮುಖರಾಗಿದ್ದ ಡಾ.ಅಮರಪ್ಪ ವಿ.ಗಡಗ್‌, ಬುರ್ಲಿ ಶೇಷಣ್ಣ, ಚಿದಾನಂದ ಶಾಸ್ತ್ರಿ ಹಾಗೂ ಬಿ.ಜಿ.ಅವಧಾನಿ ವ್ಯಾಯಾಮ ಶಾಲೆಯ ಸ್ಥಾಪಕರು. ವ್ಯಾಯಾಮ ಶಾಲೆಯ ನಿರ್ವಹಣೆಗೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಟೇಕೂರು ಸುಬ್ರಮಣ್ಯಂ ನೆರವು ನೀಡುತ್ತಿದ್ದರು.

India@75:ಸ್ವಾತಂತ್ರ್ಯ ಸೇನಾನಿಗಳ ಅಡಗುತಾಣವಾಗಿದ್ದ ಮಧುಗಿರಿ

ಶಂಕೆ ಬಾರದ ರೀತಿ ಚಟುವಟಿಕೆ:

ವ್ಯಾಯಾಮ ಶಾಲೆ ಹೆಸರಿನಲ್ಲಿ ಸಮಾನಮನಸ್ಕ ಯುವಕರನ್ನು ಇಲ್ಲಿ ಸೇರಿಸಲಾಗುತ್ತಿತ್ತು. ಬೆಳಗ್ಗೆ ಹಾಗೂ ಸಂಜೆ ವ್ಯಾಯಾಮ ಶಾಲೆಗೆ ಆಗಮಿಸಿ ದೇಹ ಕಸರತ್ತು ಮಾಡುತ್ತಿದ್ದ ಯುವಕರು ಬಳಿಕ ಸ್ವಾತಂತ್ರ್ಯ ಹೋರಾಟ ತೀವ್ರಗೊಳಿಸುವ ಕುರಿತು ಯೋಜನೆ ರೂಪಿಸಿಕೊಳ್ಳುತ್ತಿದ್ದರು. ಈ ವ್ಯಾಯಾಮ ಶಾಲೆಯ ಕಡೆ ಬ್ರಿಟಿಷ್‌ ಅಧಿಕಾರಿಗಳಿಗೆ ಅನುಮಾನ ಹುಟ್ಟದ ಹಾಗೆ ಇಲ್ಲಿನ ಕಾರ್ಯ ಚಟುವಟಿಕೆಗಳು ಇರುತ್ತಿದ್ದವು. ಈ ವ್ಯಾಯಾಮ ಶಾಲೆಯಲ್ಲಿ ಸಜ್ಜುಗೊಂಡ ನೂರಾರು ಯುವಕರು ಚಳವಳಿಗೆ ಧುಮುಕಿದರು.

ಇದೇ ಸ್ಥಳದಲ್ಲಿ ಗಾಂಧಿಭವನ:

ಮಲ್ಲಸಜ್ಜನ ವ್ಯಾಯಾಮ ಶಾಲೆ ಇಂದಿಗೂ ತನ್ನ ಆಶಯದಿಂದ ಹಿಂದೆ ಸರಿದಿಲ್ಲ. ಯುವಕರು ದೈಹಿಕ ಕಸರತ್ತು ನಡೆಸುವ ಪರಿಕರಗಳನ್ನು ಇಲ್ಲಿರಿಸಲಾಗಿದ್ದು ನಿತ್ಯ ಅನೇಕ ಯುವಕರು ಆಗಮಿಸಿ ದೇಹ ದಂಡಿಸಿಕೊಳ್ಳುತ್ತಾರೆ. ಯುವಕರ ದೈಹಿಕ, ಮಾನಸಿಕ ಕಸುವನ್ನು ಒಟ್ಟಿಗೆ ರೂಪಿಸುವ ಹಿನ್ನೆಲೆಯಲ್ಲಿ ಇಲ್ಲಿ ಧ್ಯಾನಕೇಂದ್ರ ಹಾಗೂ ಗ್ರಂಥಾಲಯವನ್ನು ಸಹ ಸ್ಥಾಪಿಸಲಾಗಿದೆ. 1965ರ ಜುಲೈ 16ರಂದು ಈ ಸ್ಥಳದಲ್ಲಿ ಗಾಂಧಿ ಭವನವನ್ನೂ ಸ್ಥಾಪಿಸಲಾಯಿತು. ಸ್ವಾತಂತ್ರ್ಯ ಹೋರಾಟದ ಸ್ಮರಣೆಗಾಗಿ ಪ್ರತಿವರ್ಷ ಗಾಂಧಿಭವನ ವತಿಯಿಂದ ದೇಹದಾಢ್ರ್ಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

India@75:ಬರಿಗಾಲಲ್ಲಿ ಆಡಿ ಬ್ರಿಟಿಷರನ್ನು ಸೋಲಿಸಿದ ಮೋಹನ್ ಬಾಗನ್ ತಂಡ

ತಲುಪುವುದು ಹೇಗೆ ?

ಬಳ್ಳಾರಿಯ ಮಲ್ಲಸಜ್ಜನ ವ್ಯಾಯಾಮ ಶಾಲೆ ಇರುವ ಗಾಂಧಿಭವನ ಈಶಾನ್ಯ ಸಾರಿಗೆ ಬಸ್‌ ನಿಲ್ದಾಣದಿಂದ 1.5 ಕಿ.ಮೀ. ದೂರದಲ್ಲಿದೆ. ರೈಲ್ವೆ ನಿಲ್ದಾಣದಿಂದ ಕೂಗಳತೆ ದೂರದಲ್ಲಿದೆ ಈ ಸ್ಥಳ. ಇನ್ನು ಬಳ್ಳಾರಿಯ ನಗರದ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಹುತೇಕ ಬಸ್‌ಗಳು ಈ ಗಾಂಧಿಭವನ ಮುಂದೆಯೇ ಸಂಚರಿಸುತ್ತವೆ.

- ಕೆ.ಎಂ.ಮಂಜುನಾಥ್‌

click me!