India@75: ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ತಾಣ ಮೈಸೂರಿನ ಸುಬ್ಬರಾಯನ ಕೆರೆ

By Suvarna News  |  First Published Jun 8, 2022, 11:24 AM IST

- ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ತಾಣ ಸುಬ್ಬರಾಯನ ಕೆರೆ

- ಮೈಸೂರು ಪ್ರಾಂತ್ಯದ ಹೋರಾಟಗಾರರೆಲ್ಲ ಸೇರುತ್ತಿದ್ದ ಜಾಗವಿದು

- ಹೋರಾಟ ಸಂಬಂಧಿ ಯೋಜನೆ ರೂಪುಗೊಳ್ಳುತ್ತಿದ್ದುದೂ ಇಲ್ಲಿಂದಲೇ


ಮೈಸೂರು (ಜೂ. 08): ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಒಂದೆಡೆ ಸೇರುತ್ತಿದ್ದ ಜಾಗವೆಂದರೆ ಅದು ಸುಬ್ಬರಾಯನಕೆರೆ. ಈ ಜಾಗ ಸ್ವಾತಂತ್ರ್ಯ ಯೋಧರ ಪುಣ್ಯಭೂಮಿ ಇದ್ದಂತೆ. ಚಳವಳಿಗಾರರ ಹೋರಾಟ ಸಂಬಂಧಿ ಯೋಜನೆಗಳು ರೂಪುಗೊಳ್ಳುತ್ತಿದ್ದುದು, ಕಾರ್ಯಗತಗೊಳ್ಳುತ್ತಿದ್ದುದು, ಭಾಷಣಗಳಿಗೆಲ್ಲಾ ವೇದಿಕೆಯಾಗುತ್ತಿದ್ದುದು ಇದೇ ನೆಲದಲ್ಲಿ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ತುಡಿಯುತ್ತಿದ್ದ ಅನೇಕ ದೇಶಪ್ರೇಮಿಗಳ ಮನೋಭೂಮಿಕೆಗೆ ತನ್ನ ಜ್ವಾಲೆಯ ಕಿಡಿ ತಾಗಿಸಿದ ಅಗ್ನಿಕುಂಡವಿದು. ಮಹಾತ್ಮ ಗಾಂಧೀಜಿ ಮೈಸೂರಿಗೆ ಎರಡು ಬಾರಿ ಭೇಟಿ ನೀಡಿ, ಸಾರ್ವಜನಿಕ ಭಾಷಣ ಮಾಡಿ, ಜನಮನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬೀಜವನ್ನು ಬಿತ್ತಿ ಹೋಗಿದ್ದರು.

Tap to resize

Latest Videos

undefined

India@75: ಹಳೇ ಮೈಸೂರಲ್ಲಿ ಸ್ವಾತಂತ್ರ್ಯ ಕಿಚ್ಚು ಹೊತ್ತಿಸಿದ ಶಿವಪುರ

ಈ ಜಾಗಕ್ಕೆ ‘ಲಾಟ’ ಮೈದಾನ ಅಥವಾ ‘ಲಜಪತ’ ಮೈದಾನ ಎಂಬ ಹೆಸರೂ ಇತ್ತು. ದೇಶದೆಲ್ಲೆಡೆ ನಡೆಯುತ್ತಿದ್ದಂತೆ 1920ರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮದ ಕಾನೂನುಭಂಗ ಚಳವಳಿ, 1942ರಲ್ಲಿ ನಡೆದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ, ಪ್ರಚಾರ ಭಾಷಣ, ತ್ರಿವರ್ಣ ಧ್ವಜಾರೋಹಣ ನಡೆಯುತ್ತಿದ್ದವು. ಪೊಲೀಸರು ಇಲ್ಲಿಂದಲೇ ಹೋರಾಟಗಾರರನ್ನು ಹಲವಾರು ಬಾರಿ ಬಂಧಿಸಿ, ಸೆರೆವಾಸಕ್ಕೆ ಕಳುಹಿಸಿದ್ದು ಇದೆ.

ತಗಡೂರು ರಾಮಚಂದ್ರ ರಾವ್‌, ಎಂ.ಎನ್‌.ಜೋಯಿಸ್‌, ಟಿ.ಎಸ್‌.ರಾಜಗೋಪಾಲ ಅಯ್ಯಂಗಾರ್‌, ಯಶೋದರಮ್ಮ ದಾಸಪ್ಪ, ತುಳಸೀದಾಸಪ್ಪ, ನಾರಾಯಣಸ್ವಾಮಿ, ಅಗರಂ ರಂಗಯ್ಯ, ಎಂ. ವೆಂಕಟಕೃಷ್ಣಯ್ಯ, ಕೆ.ಎಸ್‌.ಸೀತಾರಾಮ ಅಯ್ಯಂಗಾರ್‌, ಟಿ.ಎಸ್‌.ಸುಬ್ಬಣ್ಣ, ರಂಗರಾಮಯ್ಯ, ಮರಿಯಪ್ಪ ಮೊದಲಾದ ಹಿರಿಯರು, ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿದ್ದ ಖ್ಯಾತ ಪತ್ರಕರ್ತ ಖಾದ್ರಿ ಶಾಮಣ್ಣ, ಎಚ್‌.ವೈ.ಶಾರದಾಪ್ರಸಾದ್‌, ವೇದಾಂತ ಹೆಮ್ಮಿಗೆ, ಎಂ.ವಿ.ಕೃಷ್ಣಪ್ಪ, ಎಂ.ವಿ.ರಾಜಶೇಖರನ್‌, ಬಿ.ಶ್ರೀಕಂಠಪ್ಪ, ಟಿ.ವಿ.ಶ್ರೀನಿವಾಸ ರಾವ್‌, ಎಚ್‌.ಕೆ.ಕುಮಾರಸ್ವಾಮಿ, ಎ.ರಾಮಣ್ಣ, ಶ್ರೀಕಂಠ ಶರ್ಮ ಮೊದಲಾದ ಯುವ ಹೋರಾಟಗಾರರ ನಾಯಕತ್ವ ಇಲ್ಲಿ ರೂಪುಗೊಳ್ಳುತ್ತಿತ್ತು.

ಅಲ್ಲಿ ಆಗಾಗ್ಗೆ ನಡೆಯುತ್ತಿದ್ದ ಸಭೆಗಳಲ್ಲಿ ಲಾವಣಿ ವಿಷಕಂಠರಾವ್‌ ದೇಶಭಕ್ತಿ ಗೀತೆಗಳನ್ನು ಹಾಡಿ, ಜನರನ್ನು ಹುರಿದುಂಬಿಸುತ್ತಿದ್ದರು. ಅಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದರು ಎಂದು ವೇದಾಂತ ಹೆಮ್ಮಿಗೆ ಅವರನ್ನು 2 ಬಾರಿ ಬಂಧಿಸಲಾಗಿತ್ತು. 1947ರ ಅ.24 ರಂದು ಪ್ರಜಾರಾಜ್ಯ ಘೋಷಣೆ ಆಗಿ ಮರುದಿನ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕೆ.ಸಿ.ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದು ಇದೇ ಮೈದಾನದಲ್ಲಿ. ನಂತರ ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಸಂಪೂರ್ಣ ಕ್ರಾಂತಿಯ ಕೇಂದ್ರ ಸ್ಥಾನವಾಗಿತ್ತು.

India@75: ದ. ಭಾರತದ ಜಲಿಯನ್ ವಾಲಾಬಾಗ್ ವಿದುರಾಶ್ವತ್ಥ, ಸ್ವತಂತ್ರ ಹೋರಾಟಕ್ಕೆ ಶಕ್ತಿ ತುಂಬಿದ ನೆಲ

ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಮೇಯರ್‌ ಮಣಿರಾಜು, ಸ್ವಾತಂತ್ರ್ಯ ಹೋರಾಟಗಾರರಾದ ಮಾಜಿ ಶಾಸಕರಾದ ಎ.ರಾಮಣ್ಣ, ವೇದಾಂತ ಹೆಮ್ಮಿಗೆ ಮತ್ತಿತರರ ಪ್ರಯತ್ನದ ಫಲವಾಗಿ ಅಲ್ಲಿ ‘ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ಭವನ’ ತಲೆ ಎತ್ತಿತ್ತು. ಈಗಲೂ ಅಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಕ್ವಿಟ್‌ ಇಂಡಿಯಾ, ಮೈಸೂರು ಚಲೋ ಚಳವಳಿಗಳ ನೆನಪಿನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಎಂ.ಎನ್‌.ಜೋಯಿಸ್‌ ವಾಚನಾಲಯ ಇದೆ. ಸ್ಮಾರಕದ ಎದುರು ‘ಗಾಂಧಿ ಸ್ತೂಪ’ವಿದೆ. ಗಾಂಧೀಜಿ ಮತ್ತವರ ಅನುಯಾಯಿಗಳ ‘ದಂಡಿಯಾತ್ರೆ’ಯ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ತಲುಪುವುದು ಹೇಗೆ?

ಸುಬ್ಬರಾಯನ ಕೆರೆ ಮೈದಾನವು ಮೈಸೂರು ನಗರದ ಹೃದಯ ಭಾಗದಲ್ಲಿದೆ. ನಗರ ಬಸ್‌ ನಿಲ್ದಾಣದಿಂದ ಬಸ್‌ ಸೌಕರ್ಯವಿದ್ದು, ಶಾಂತಲಾ ಚಿತ್ರಮಂದಿರ ನಿಲ್ದಾಣದಲ್ಲಿ ಇಳಿಯಬೇಕು. ಗ್ರಾಮಾಂತರ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಿಂದ ಆಟೋರಿಕ್ಷಾ, ಟಾಂಗಾದಲ್ಲಿ ತಲುಪಬಹುದು.

- ಅಂಶಿ ಪ್ರಸನ್ನಕುಮಾರ್‌ 

click me!