ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ಗ್ರಾಮವೆಂದು ಘೋಷಿಸಿಕೊಂಡು ದಿಟ್ಟತನ ತೋರಿದ ನಾಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಪುಟ್ಟ ಗ್ರಾಮ ಈಸೂರು.
ಗೋಪಾಲ ಯಡಗೆರೆ, ಶಿವಮೊಗ್ಗ
ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ಗ್ರಾಮವೆಂದು ಘೋಷಿಸಿಕೊಂಡು ದಿಟ್ಟತನ ತೋರಿದ ನಾಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಪುಟ್ಟ ಗ್ರಾಮ ಈಸೂರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂದು ಬ್ರಿಟಿಷರಿಗೆ ಸಡ್ಡು ಹೊಡೆದು, ಹೋರಾಡಿ ವೀರ ಮರಣ ಹೊಂದಿದ್ದರು ಇಲ್ಲಿನ ಗ್ರಾಮಸ್ಥರು.
undefined
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಗಾಂಧೀಜಿ ಘೋಷಣೆಗೆ ಕಿವಿಗೊಟ್ಟು ಹೋರಾಟದ ಹಾದಿಗೆ ಇಳಿದ ಇಲ್ಲಿನ ಗ್ರಾಮಸ್ಥರು 1942ರ ಸೆಪ್ಟೆಂಬರ್ 27ರಂದು ‘ಈಸೂರು ಸ್ವತಂತ್ರ ಗ್ರಾಮ, ಬ್ರಿಟಿಷರಿಗೆ ಪ್ರವೇಶವಿಲ್ಲ’ ಎಂಬ ಫಲಕವನ್ನು ಊರಿನ ಪ್ರವೇಶದ್ವಾರಕ್ಕೆ ಹಾಕಿದ್ದರು. ಅಲ್ಲದೆ ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇಶದ ಧ್ವಜ ಹಾರಿಸಿದ್ದರು. ಬ್ರಿಟಿಷ್ ಸರ್ಕಾರದ ಕಂದಾಯ ಅಧಿಕಾರಿಗಳು ಕಂದಾಯ ಕಟ್ಟುವಂತೆ ಊರಿನ ಗ್ರಾಮಸ್ಥರನ್ನು ಕೇಳಿದರು.
ಆಗ ಅವರಿಂದ ಲೆಕ್ಕದ ಪುಸ್ತಕ ಕಸಿದುಕೊಂಡ ಗ್ರಾಮಸ್ಥರು ಗಾಂಧಿ ಟೋಪಿ ಧರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಲ್ಲದೇ ಸ್ವತಂತ್ರ ಗ್ರಾಮಕ್ಕೆ ಜೈಕಾರವನ್ನೂ ಹಾಕಿಸಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಪ್ರತೀಕಾರವಾಗಿ ಇಬ್ಬರು ಅಧಿಕಾರಿಗಳನ್ನು ಗ್ರಾಮಸ್ಥರು ಕೊಂದುಹಾಕಿದ್ದರು. ಈ ಘಟನೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು.
India @75: ರೈತ ಹೋರಾಟಕ್ಕೆ ಸಾಕ್ಷಿ ಬಾವುಟ ಗುಡ್ಡೆ, 2 ವಾರ ಇಲ್ಲಿ ಹಾರಾಡಿತ್ತು ಸ್ವತಂತ್ರ ಧ್ವಜ!
ಘಟನೆ ನಡೆದ ನಂತರದ ದಿನದಲ್ಲಿ ಗ್ರಾಮವನ್ನು ವಶಪಡಿಸಿಕೊಂಡ ಬ್ರಿಟಿಷ್ ಪೊಲೀಸರು ದರ್ಪ ಮೆರೆದರು. ಗ್ರಾಮದ ಪ್ರತಿ ಮನೆಯನ್ನೂ ಜಾಲಾಡಿ ಹಲವರನ್ನು ಬಂಧಿಸಿದರು. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತಲ್ಲದೆ ಯುವಕರು ತಿಂಗಳುಗಟ್ಟಲೆ ಮನೆ ಬಿಟ್ಟು ಕಾಡಿನಲ್ಲಿ ವಾಸವಿರುವಂತಾಯಿತು. ವಿಚಾರಣೆ ಬಳಿಕ ತಪ್ಪಿತಸ್ಥರೆಂದು 5 ಮಂದಿಗೆ ಗಲ್ಲು ಶಿಕ್ಷೆ ಮತ್ತು 40ಕ್ಕೂ ಹೆಚ್ಚು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಸ್ಮಾರಕ ನಿರ್ಮಾಣ: ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಗತಿಸಿದರೂ ಸರ್ಕಾರ ಇಲ್ಲಿ ನಾಮ್‌ಕೆವಾಸ್ತೆ ಸ್ಮಾರಕ ಹಾಗೂ ಧ್ವಜಸ್ತಂಭಗಳ ನಿರ್ಮಾಣ ಮಾಡಿದೆ. ಅದರಲ್ಲಿ ‘ಏಸೂರು ಕೊಟ್ಟರು ಈಸೂರು ಕೊಡೆವು’ ಎಂದು ಘೋಷಣಾ ವಾಕ್ಯ ಹಾಕಲಾಗಿದೆ. ಜತೆಗೆ ಸ್ಮಾರಕದ ಮುಂದೆ ಗಲ್ಲು ಶಿಕ್ಷೆಗೆ ಒಳಗಾದವರ ಹೆಸರನ್ನು ಕೆತ್ತಿಸಲಾಗಿದೆ. ಇಷ್ಟುವರ್ಷಗಳ ಬಳಿಕ ಇದೀಗ ಗ್ರಾಮದಲ್ಲಿ ಸುಮಾರು .4.25 ಕೋಟಿ ರು. ವೆಚ್ಚದಲ್ಲಿ ಸಮುದಾಯ ಭವನ, ಗ್ರಂಥಾಲಯ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ಇಷ್ಟುಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿಕಾರ್ಯ ಇಲ್ಲಿ ಆಗಿಲ್ಲ ಎಂಬ ಬೇಸರ ಗ್ರಾಮಸ್ಥರಲ್ಲಿದೆ.
ತಲುಪುವುದು ಹೇಗೆ?: ಶಿವಮೊಗ್ಗದಿಂದ ಅಯನೂರು-ಕುಂಸಿ-ಕಲ್ಮನೆ ಮಾರ್ಗವಾಗಿ ಈಸೂರಿಗೆ ಹೋಗುವುದಾದರೆ 48 ಕಿ.ಮೀ. ದೂರ. ಶಿಕಾರಿಪುರದಿಂದ ಈಸೂರಿಗೆ ಹೋಗುವುದಾದರೆ 7 ಕಿ.ಮೀ. ದೂರ. ಬಸ್ ವ್ಯವಸ್ಥೆಯಿದೆ.