- ಹಳೇ ಮೈಸೂರಲ್ಲಿ ಸ್ವಾತಂತ್ರ್ಯ ಕಿಚ್ಚು ಹೊತ್ತಿಸಿದ ಶಿವಪುರ
- ವಿದುರಾಶ್ವತ್ಥ ಸೇರಿ ಅನೇಕ ಹೋರಾಟಗಳಿಗೆ ಪ್ರೇರಣೆ
- 1979ರಲ್ಲಿ ಬ್ರಿಟಿಷರ ವಿರುದ್ಧ ಚೊಚ್ಚಲ ಅಧಿವೇಶನ ನಡೆಸಿದ್ದ ಹೋರಾಟಗಾರರು
ಮಂಡ್ಯ (ಜೂ. 06): ಜಿಲ್ಲೆಯ ಮದ್ದೂರು (Madduru) ತಾಲೂಕಿನ ಶಿವಪುರ (Shivapura) ಗ್ರಾಮದಲ್ಲಿ 1938ರಲ್ಲಿ ನಡೆದ ಧ್ವಜ ಸತ್ಯಾಗ್ರಹದಿಂದಾಗಿ ಹಳೇ ಮೈಸೂರು ಭಾಗದಲ್ಲಿ ಸ್ವಾತಂತ್ರ್ಯ ಚಳವಳಿ ನಿರ್ದಿಷ್ಟರೂಪ ಪಡೆದುಕೊಂಡಿತು ಎನ್ನಬಹುದು.
ಚಿಕ್ಕಬಳ್ಳಾಪುರದ (Chikkaballapura) ವಿದುರಾಶ್ವತ್ಥ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ಚಳವಳಿಗಳಿಗೆ ಶಿವಪುರದ ಬೆಳವಣಿಗೆಯೇ ಪ್ರೇರಣೆಯಾಯಿತು. ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಇದನ್ನು ಶಿವಪುರದ ರಾಷ್ಟ್ರಕೂಟ ಎಂದೇ ದಾಖಲಿಸಲಾಗಿದೆ. ಈ ಐತಿಹಾಸಿಕ ಘಟನೆಯ ನೆನಪಿಗಾಗಿ 1979ರಲ್ಲಿ ಇಲ್ಲಿ ಸೌಧವನ್ನು ನಿರ್ಮಿಸಲಾಯಿತು.
undefined
1938ರ ಮಾಚ್‌ರ್ 11ರಂದು ಮೈಸೂರು ಸಂಸ್ಥಾನದ ಕಾಂಗ್ರೆಸ್ ಸಮಿತಿಯ ಪ್ರಥಮ ಅಧಿವೇಶನವನ್ನು ಶಿವಪುರದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಅಧಿವೇಶನದ ಜವಾಬ್ದಾರಿಯನ್ನು ಎಚ್.ಕೆ.ವೀರಣ್ಣಗೌಡರಿಗೆ ವಹಿಸಲಾಯಿತು. ಮೊದಲ ರಾಷ್ಟ್ರಕೂಟದ ಅಧ್ಯಕ್ಷರಾಗಿ ಟಿ.ಸಿದ್ದಲಿಂಗಯ್ಯ ಆಯ್ಕೆಗೊಂಡರು.
India@75:ದ. ಭಾರತದ ಜಲಿಯನ್ ವಾಲಾಬಾಗ್ ವಿದುರಾಶ್ವತ್ಥ, ಸ್ವತಂತ್ರ ಹೋರಾಟಕ್ಕೆ ಶಕ್ತಿ ತುಂಬಿದ ನೆಲ
ನಿಷೇಧಾಜ್ಞೆ ಉಲ್ಲಂಘಿಸಿ ಧ್ವಜಾರೋಹಣ:
ಶಿವಪುರದ ಪಿ.ತಿರುಮಲೇಗೌಡರಿಗೆ ಸೇರಿದ 8 ಎಕರೆ ಜಮೀನಿನಲ್ಲಿ ಸುಮಾರು 40 ಸಾವಿರ ಜನರು ಸೇರುವ ಜಾಗದಲ್ಲಿ ಧ್ವಜಸ್ತಂಭ ನಿಲ್ಲಿಸಲಾಯಿತು. ಮೈಸೂರು ಮ್ಯಾಜಿಸ್ಪ್ರೇಟ್ ಜಿ.ಎಂ.ಮೇಕ್ರಿ ಮದ್ದೂರು ಸುತ್ತಮುತ್ತ 3 ಮೈಲಿಗಳೊಳಗೆ ಒಂದು ತಿಂಗಳ ಕಾಲ ಮೆರವಣಿಗೆ, ಸಭೆ ಹಾಗೂ ಧ್ವಜಾರೋಹಣ ಮಾಡದಂತೆ ನಿಷೇಧಾಜ್ಞೆ ಹೊರಡಿಸಿದ್ದರು. ಅಧಿವೇಶನದ ಮುನ್ನಾ ದಿನ ಸಂಜೆ 6 ಗಂಟೆಗೆ ಅಲಂಕೃತ ಎತ್ತಿನಗಾಡಿಯಲ್ಲಿ ರಾಷ್ಟ್ರಕೂಟದ ಅಧ್ಯಕ್ಷ ಟಿ.ಸಿದ್ದಲಿಂಗಯ್ಯನವರನ್ನು ಕೂರಿಸಿಕೊಂಡು ಮೆರವಣಿಗೆ ನಡೆಸಲಾಗಿತ್ತು.
ಈ ಮೆರವಣಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. 1938ರ ಏ.9ರಂದು ಬೆಳಗ್ಗೆ ಟಿ.ಸಿದ್ದಲಿಂಗಯ್ಯ ಅವರು ಚಿಕ್ಕ ಭಾಷಣ ಮಾಡಿ ಸರ್ಕಾರದ ನಿಷೇಧಾಜ್ಞೆಯನ್ನು ತಾವು ಉಲ್ಲಂಘಿಸುವುದಾಗಿ ಹೇಳಿ ಧ್ವಜಾರೋಹಣ ಮಾಡಿದರು. ಇದು ಸರ್ಕಾರದ ಆಜ್ಞೆಯನ್ನು ಧಿಕ್ಕರಿಸಿದ ದಿನವಾಗಿ ಇತಿಹಾಸದಲ್ಲಿ ದಾಖಲಾಯಿತು.
India@75: ದ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲಾ ಸ್ಪೂರ್ತಿ
ಧ್ವಜಾರೋಹಣ ನೆರವೇರಿಸಿದ ಟಿ.ಸಿದ್ದಲಿಂಗಯ್ಯ ಸೇರಿ ಮೂವರು ಮುಖಂಡರನ್ನು ಪೊಲೀಸರು ಬಂಧಿಸಿದರು. ಅವರನ್ನು ಪೊಲೀಸರು ಗೌರವದಿಂದ ಕರೆದುಕೊಂಡು ಹೋಗಿದ್ದರಿಂದ ಸತ್ಯಾಗ್ರಹಿಗಳು ಶಾಂತರೀತಿಯಿಂದ ವರ್ತಿಸಿದರು. 1938ರ ಏ.11ರ ಸಂಜೆ ಶಿವಪುರ ರಾಷ್ಟ್ರಕೂಟ ಸಮಾಪ್ತಿಗೊಂಡಿತು.
ಕೆಂಗಲ್ ನೇತೃತ್ವದಲ್ಲಿ ಸೌಧ:
ಈ ಮಹತ್ವದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಬೇಕೆಂಬ ದಿಟ್ಟನಿಲುವು ಹೊಂದಿದ್ದ ಕೆಂಗಲ್ ಹನುಮಂತಯ್ಯನವರ ಪರಿಶ್ರಮದಿಂದ ಧ್ವಜ ಸತ್ಯಾಗ್ರಹ ಸೌಧ ತಲೆ ಎತ್ತಿತು. 1979ರ ಅಕ್ಟೋಬರ್ 26ರಂದು ಕೆಂಗಲ್ ಹನುಮಂತಯ್ಯನವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡ ಈ ಸ್ಮಾರಕದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಗಾಂಧಿ ಜಯಂತಿ ಮೊದಲಾದ ರಾಷ್ಟ್ರೀಯ ಹಬ್ಬಗಳ ದಿನ ವಿಶೇಷ ಕಾರ್ಯಕ್ರಮ ನಡೆಯುತ್ತದೆ. ಅದನ್ನು ಬಿಟ್ಟರೆ ಇಲ್ಲಿ ಮತ್ತೇನೂ ಇಲ್ಲ. ಹೀಗಾಗಿ ಇದನ್ನೊಂದು ಸ್ವಾತಂತ್ರ್ಯ ಹೋರಾಟದ ಇತಿಹಾಸ ಸಾರುವ ಮೌಲಿಕ ಮ್ಯೂಸಿಯಂ ಆಗಿ ಮಾಡುವ ಬಗ್ಗೆ ಸರ್ಕಾರ ಯೋಚಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
ತಲುಪುವುದು ಹೇಗೆ?
ಶಿವಪುರ ಸತ್ಯಾಗ್ರಹ ಸೌಧ ಜಿಲ್ಲಾ ಕೇಂದ್ರವಾದ ಮಂಡ್ಯದಿಂದ 20 ಕಿ.ಮೀ. ದೂರದಲ್ಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮದ್ದೂರಿಗೆ ಮೊದಲು ಸಿಗುವುದೇ ಶಿವಪುರ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಶಿವಪುರ ಧ್ವಜ ಸತ್ಯಾಗ್ರಹ ಸೌಧವಿರುವುದು ಕಂಡುಬರುತ್ತದೆ. ಬೆಂಗಳೂರಿನಿಂದ ರೈಲು ಮಾರ್ಗವಾಗಿಯೂ ಶಿವಪುರವನ್ನು ಸುಲಭವಾಗಿ ತಲುಪಬಹುದು. ಶಿವಪುರದಲ್ಲಿ ರೈಲು ನಿಲ್ದಾಣವಿದ್ದು ನಿಲ್ದಾಣದಿಂದ ಕಾಲ್ನಡಿಗೆಯಲ್ಲೇ ಧ್ವಜ ಸತ್ಯಾಗ್ರಹ ಸೌಧವನ್ನು ತಲುಪಬಹುದು.
- ಮಂಡ್ಯ ಮಂಜುನಾಥ್