ಸೆಮೀಸ್ ಪ್ರವೇಶಿಸುವ ಹಾದಿಯಲ್ಲಿ ಪಾಕ್ ಎಡವಿದ್ದೆಲ್ಲಿ..?

By Web Desk  |  First Published Jul 6, 2019, 3:21 PM IST

ಲಾರ್ಡ್ಸ್‌ನಲ್ಲಿ ನಡೆದ ತಮ್ಮ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾ ವಿರುದ್ಧ ಗೆದ್ದರೂ ಸೆಮಿಫೈನಲ್ ಪ್ರವೇಶದ ಕನಸು ನನಸಾಗಲಿಲ್ಲ. ಅಷ್ಟಕ್ಕೂ ಪಾಕ್ ಸೆಮೀಸ್ ಹಾದಿಯಲ್ಲಿ ಎಡವಿದ್ದೆಲ್ಲಿ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ... 


ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬೆಂಗಳೂರು: ಅದೃಷ್ಠದ ಬೆನ್ನೇರಿ ವಿಶ್ವಕಪ್ ಚಾಂಪಿಯನ್ ಕನಸು ಕಾಣುತ್ತಿದ್ದ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸುವ ಮುನ್ನವೇ ಹೊರಬಿದ್ದಿದೆ. ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಗೆದ್ದು 11 ಅಂಕಗಳಿಸಿದರೂ, ನೆಟ್ ರನ್ ರೇಟ್ ಆದಾರದಲ್ಲಿ ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. 

Tap to resize

Latest Videos

undefined

1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದೇ ರೀತಿಯ ಪಯಣ ಮುಂದುವರೆಸಿದ್ದ ಸರ್ಫರಾಜ್ ನೇತೃತ್ವದ ಪಾಕಿಸ್ತಾನ ಸೆಮೀಸ್ ಪ್ರವೇಶಿಸಿ ಕಪ್ ಗೆಲ್ಲುವ ಆಸೆ ಇಟ್ಟುಕೊಂಡಿತ್ತು. ಮೊದಲ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲು ಕಂಡು ಆಘಾತ ಅನುಭವಿಸಿದ್ದ ಪಾಕ್ ಆ ಬಳಿಕ ಫೀನಿಕ್ಸ್ ನಂತೆ ಎದ್ದು ಬಂದಿತ್ತು. ಇದರ ಹೊರತಾಗಿಯೂ ಸೆಮಿಫೈನಲ್ ಪ್ರವೇಶಿಸುವ ಹಾದಿಯಲ್ಲಿ ಪಾಕ್ ಎಡವಿತ್ತು.

ಬಾಂಗ್ಲಾ ವಿರುದ್ಧ ಗೆಲುವು; ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಗುಡ್ ಬೈ!

ಕಾಕತಾಳೀಯವೆಂಬಂತೆ ಪಾಕಿಸ್ತಾನದ ಈ ಬಾರಿಯ ವಿಶ್ಚಕಪ್ ಪಯಣ 1992ರ ವಿಶ್ವಕಪ್’ನಂತೆಯೇ ಸಾಗಿ ಬಂದಿತ್ತು. 1992ರ ವಿಶ್ವಕಪ್’ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ ಮುಗ್ಗರಿಸಿತ್ತು. ಆ ಬಳಿಕ ಎರಡನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿತ್ತು. ಮೂರನೇ ಪಂದ್ಯ ಮಳೆಯಿಂದ ರದ್ದಾಗಿತ್ತು. ಆ ಬಳಿಕ ನಾಲ್ಕು ಮತ್ತು ಐದನೇ ಪಂದ್ಯದಲ್ಲಿ ಸೋಲುಂಡಿದ್ದ ಪಾಕ್, ಆ ಬಳಿಕ ಸತತ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿ, ನಂತರ ಚೊಚ್ಚಲ ಬಾರಿಗೆ ಕಪ್ ಜಯಿಸಿ ಮೆರೆದಾಡಿತ್ತು. ಅದೇ ರೀತಿ ಬಾರಿಯೂ ಪಾಕಿಸ್ತಾನ ಲೀಗ್ ಹಂತದಲ್ಲಿ 1992ರ ಜರ್ನಿಯಂತೆಯೇ ಸಾಗಿ ಬಂದಿತ್ತು. ಆದರೆ ನೆಟ್ ರನ್ ರೇಟ್ ಕೊರತೆಯಿಂದಾಗಿ ಬಾಂಗ್ಲಾದೇಶ ವಿರುದ್ಧ ಗೆದ್ದರೂ ಸೆಮೀಸ್ ಗೆ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲವಾಯಿತು. 

ಪಾಕಿಸ್ತಾನ ಮೊದಲಾರ್ಧದಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಆರಂಭದಲ್ಲೇ ಸೆಮೀಸ್ ಅವಕಾಶ ಕೈ ಚೆಲ್ಲಿತು. ಮೊದಲ 5 ಪಂದ್ಯಗಳಲ್ಲಿ ಪಾಕಿಸ್ತಾನ ಮೂರು ಪಂದ್ಯಗಳನ್ನು ಸೋತರೆ, ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಇಂಗ್ಲೆಂಡ್ ವಿರುದ್ಧ ಗೆದ್ದಿದ್ದು ಬಿಟ್ಟರೆ, ಆಸ್ಟ್ರೇಲಿಯಾ, ಭಾರತ ಹಾಗೂ ವಿಂಡೀಸ್ ಎದುರು ಮುಖಭಂಗ ಅನುಭವಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಭರ್ಜರಿಯಾಗಿಯೇ ಕಮ್ ಬ್ಯಾಕ್ ಮಾಡಿತಾದರೂ ಅದೃಷ್ಠ ಕೈಕೊಟ್ಟ ಪರಿಣಾಮ ಕ್ರಿಕೆಟ್ ಮಹಾಸಂಗ್ರಾಮದಿಂದ ಹೊರಬಿದ್ದಿದೆ.

ನಿಜಕ್ಕೂ ಸೆಮೀಸ್ ಹಾದಿಯಲ್ಲಿ ಪಾಕ್ ಎಡವಿದ್ದೆಲ್ಲಿ..? 

* ಲಂಕಾ-ಪಾಕ್ ಪಂದ್ಯ ನಡೆದಿದ್ದರೆ..?

ಪಾಕಿಸ್ತಾನ ತಾನಾಡಿದ ಎರಡನೇ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಹೀಗಾಗಿ ಲಂಕಾ ಮೇಲೂ ಸವಾರಿ ನಡೆಸಲು ರೆಡಿಯಾಗಿತ್ತು. ಆದರೆ ದುರಾದೃಷ್ಟವೆಂಬಂತೆ ಆ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು. ಒಂದು ವೇಳೆ  ಆ ಪಂದ್ಯವನ್ನು ಪಾಕಿಸ್ತಾನ ತಂಡ ಜಯಿಸಿದ್ದರೆ, ಪಾಕ್ 12 ಅಂಕಗಳೊಂದಿಗೆ ಅನಾಯಾಸವಾಗಿ ಸೆಮಿಫೈನಲ್ ಪ್ರವೇಶಿಸುತ್ತಿತ್ತು.

* ಇಂಡೋ-ಕಿವೀಸ್ ಫೈಟ್ ನಡೆದಿದ್ದರೆ..?

ವಿಶ್ವಕಪ್ ಟೂರ್ನಿಯ ಆರಂಭದಿಂದಲೂ ಅಜೇಯವಾಗಿ ಮುನ್ನುಗ್ಗಿದ್ದ ಭಾರತ-ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲು ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಮೈದಾನ ಸಾಕ್ಷಿಯಾಗಲು ರೆಡಿಯಾಗಿತ್ತು. ಆದರೆ ಪಂದ್ಯವೂ ಕೂಡಾ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು. ಒಂದು ವೇಳೆ ಆ ಪಂದ್ಯದಲ್ಲಿ ಭಾರತ ಗೆದ್ದು, ನ್ಯೂಜಿಲೆಂಡ್ ತಂಡ ಸೋತಿದ್ದರೆ, ಕಿವೀಸ್ ಪಡೆಯ ಬಳಿ ಕೇವಲ 10 ಅಂಕಗಳು ಪಾತ್ರ ಉಳಿಯುತ್ತಿದ್ದವು. ಹೀಗಾಗಿದ್ದರೆ, ಸರ್ಫರಾಜ್ ಪಡೆಯ ಸೆಮೀಸ್ ಹಾದಿ ಮತ್ತಷ್ಟು ಸುಗಮವಾಗುತ್ತಿತ್ತು.

ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಗೆ ಅರ್ಹತೆ ಗಿಟ್ಟಿಸಿರುವ ಟಾಪ್ 4 ತಂಡಗಳ ಪೈಕಿ 2 ತಂಡಗಳಾದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಪಾಕ್ ಜಯ ಸಾಧಿಸಿತ್ತು. ಇನ್ನು ಒಂದು ವೇಳೆ ಭಾರತ ತಂಡ ಲೀಗ್ ಹಂತದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದರೆ, ಆತಿಥೇಯ ತಂಡದ ಬಳಿ ಕೇವಲ 10 ಅಂಕಗಳು ಮಾತ್ರ ಇರುತ್ತಿತ್ತು. ಇಷ್ಟಾಗಿದ್ದರೂ ಪಾಕ್ ಯಾವುದೇ ಅಡೆತಡೆಯಿಲ್ಲದೇ ಸೆಮೀಸ್ ಪ್ರವೇಶಿಸುತ್ತಿತ್ತು.
ಇಷ್ಟೆಲ್ಲದರ ಹೊರತಾಗಿ ಪ್ರಮುಖ ಘಟ್ಟದಲ್ಲಿ ಕ್ಯಾಚ್ ಕೈಚೆಲ್ಲಿದ್ದು, ಅನುಭವಿ ಆಟಗಾರರಾದ ಮೊಹಮ್ಮದ್ ಹಫೀಜ್, ಶೊಯೆಬ್ ಮಲಿಕ್ ತಮ್ಮ ಜವಾಬ್ದಾರಿ ಅರಿತು ಆಡದೇ ಇದ್ದಿದ್ದು, ಹಾಗೆಯೇ ಯುವ ವೇಗಿ ಶಾಹಿನ್ ಅಫ್ರಿದಿಗೆ ಆರಂಭದಲ್ಲಿ ಅವಕಾಶ ನೀಡದೇ ಇದ್ದಿದ್ದರ ಪರಿಣಾಮ ಪಾಕ್ ಬೆಲೆತೆರಬೇಕಾಗಿ ಬಂತು. ಅಫ್ರಿದಿ ಕೇವಲ 5 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ಪಾಕ್ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟರಾದರು, ಅಷ್ಟರಲ್ಲಾಗಲೇ ಪರಿಸ್ಥಿತಿ ಪಾಕಿಸ್ತಾನದ ಕೈಮೀರಿ ಹೋಗಿತ್ತು.

click me!