
ಮ್ಯಾಂಚೆಸ್ಟರ್[ಜೂ.27]: ವಿಶ್ವಕಪ್ ಸೋಲಿಲ್ಲದೇ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ ಇಂದು ವೆಸ್ಟ್ ಇಂಡೀಸ್ ಸವಾಲನ್ನು ಎದುರಿಸಲು ಸಜ್ಜಾಗಿದೆ. ಇದುವರೆಗೂ ಆಡಿದ 5 ಪಂದ್ಯಗಳಿಂದ 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ವಿರಾಟ್ ಪಡೆ ಇದೀಗ ಕೆರಿಬಿಯನ್ನರನ್ನು ಮಣಿಸಿ ಸೆಮೀಸ್ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ ಆಫ್ಘನ್ ಎದುರು ತಿಣುಕಾಡಿ ಗೆದ್ದಿದ್ದ ಟೀಂ ಇಂಡಿಯಾ ಇದೀಗ ವಿಂಡೀಸ್ ಎದುರು ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.
ಹೌದು, ಶಿಖರ್ ಧವನ ಸ್ಥಾನವನ್ನು ಕೆ.ಎಲ್ ರಾಹುಲ್ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ಆರಂಭಿಕರಾಗಿ ರೋಹಿತ್ ಜತೆ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕೊಹ್ಲಿ, ಆ ಬಳಿಕ ವಿಜಯ್ ಶಂಕರ್, ಧೋನಿ, ಜಾಧವ್ ಹಾಗೆಯೇ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದು, ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಭಾರತಕ್ಕಿಂದು ವಿಂಡೀಸ್ ವೀರರ ಚಾಲೆಂಜ್
ಬೌಲಿಂಗ್ ನಲ್ಲಿ ಒಂದು ಬದಲಾವಣೆ: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿ ಪಂದ್ಯದಿಂದ ಹೊರಬಿದ್ದಿದ್ದ ಭುವನೇಶ್ವರ್ ಕುಮಾರ್ ಇದೀಗ ಫಿಟ್ ಆಗಿದ್ದು ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಮೂವರು ತಜ್ಞ ವೇಗಿಗಳ ಜತೆ ಓರ್ವ ಸ್ಪಿನ್ನರ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಜತೆಗೆ ಯುಜುವೇಂದ್ರ ಚಹಲ್ ವಿಂಡೀಸ್ ಎದುರು ಕಣಕ್ಕಿಳಿಯಲಿದ್ದಾರೆ. ಭುವಿಗೆ ಈ ಪಂದ್ಯದಲ್ಲೂ ರೆಸ್ಟ್ ನೀಡಿದರೆ, ಕಳೆದ ಪಂದ್ಯದಲ್ಲಿ ಆಡಿದ ತಂಡವೇ ವಿಂಡೀಸ್ ಎದುರು ಕಣಕ್ಕಿಳಿದರೂ ಅಚ್ಚರಿಯಿಲ್ಲ.
ಈ ಸಂದರ್ಭದಲ್ಲಿ ಸುವರ್ಣನ್ಯೂಸ್.ಕಾಂ ಪಟ್ಟಿಮಾಡಿದ ಸಂಭಾವ್ಯ ಟೀಂ ಇಂಡಿಯಾ ಇಲ್ಲಿದೆ ನೋಡಿ...
ಭಾರತ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ(ನಾಯಕ), ವಿಜಯ್ ಶಂಕರ್, ಎಂ.ಎಸ್.ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಮೊಹಮದ್ ಶಮಿ, ಕುಲ್ದೀಪ್ ಯಾದವ್/ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್.