
ಲೀಡ್ಸ್(ಜೂ.21): ಬಲಿಷ್ಠ ಇಂಗ್ಲೆಂಡ್ ವಿರುದ್ದ ಶ್ರೀಲಂಕಾ ಬೃಹತ್ ಮೊತ್ತ ಪೇರಿಸಲು ವಿಫಲವಾಗಿದೆ. ಎಂಜಲೋ ಮ್ಯಾಥ್ಯೂಸ್ ಏಕಾಂಗಿ ಹೋರಾಟದಿಂದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 232 ರನ್ ಸಿಡಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 233 ರನ್ ಸಾಧರಣ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಾಗ ಲಂಕಾ ಅಭಿಮಾನಿಗಳು ಅಬ್ಬರದ ಬ್ಯಾಟಿಂಗ್ ನಿರೀಕ್ಷೆ ಮಾಡಿದ್ದರು. ಆದರೆ ಶ್ರೀಲಂಕಾ ಆರಂಭದಲ್ಲೇ ನಾಯಕ ದಿಮುತ್ ಕರುಣಾರತ್ನೆ ಹಾಗೂ ಕುಸಾಲ್ ಪರೇರಾ ವಿಕೆಟ್ ಕಳೆದುಕೊಂಡಿತು. ಅವಿಶ್ಕಾ ಫೆರ್ನಾಂಡೋ ಹಾಗೂ ಕುಸಾಲ್ ಮೆಂಡೀಸ್ ಜೊತೆಯಾಟದಿಂದ ಲಂಕಾ ಚೇತರಿಸಿಕೊಂಡಿತು.
ಅವಿಶ್ಕಾ 49 ರನ್ ಸಿಡಿಸಿ ಔಟಾದರೆ, ಕುಸಾಲ್ 46 ರನ್ ಸಿಡಿಸಿದರು. ಜೀವನ್ ಮೆಂಡೀಸ್ ಶೂನ್ಯ ಸುತ್ತಿದರು. ಆ್ಯಂಜಲೋ ಮಾಥ್ಯೂಸ್ ಹೋರಾಟದಿಂದ ಶ್ರೀಲಂಕಾ 200 ರನ್ ಗಡಿ ದಾಟಿತು. ಮ್ಯಾಥ್ಯೂಸ್‌ಗೆ ಧನಂಜಯ್ ಡಿಸಿಲ್ವಾ ಸಾಥ್ ನೀಡಿದರು. ಮ್ಯಾಥ್ಯೂಸ್ ಹಾಫ್ ಸೆಂಚುರಿ ಸಿಡಿಸಿ ಹೋರಾಟ ಮುಂದುವರಿಸಿದರು. ಧನಂಜಯ 29 ರನ್‌ಗೆ ಔಟಾದರು.
ಮ್ಯಾಥ್ಯೂಸ್ ಏಕಾಂಗಿ ಹೋರಾಟ ನೀಡಿದರು. ಆದರೆ ಇತರ ಬ್ಯಾಟ್ಸ್‌ಮನ್ ಸಾಥ್ ನೀಡಲಿಲ್ಲ. ಮ್ಯಾಥ್ಯೂಸ್ ಅಜೇಯ 85 ರನ್ ಸಿಡಿಸಿದರು. ಈ ಮೂಲಕ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 232 ರನ್ ಸಿಡಿಸಿದೆ. ಇಂಗ್ಲೆಂಡ್ ಪರ ಮಾರ್ಕ್ ವುಡ್ ಹಾಗೂ ಜೋಫ್ರಾ ಆರ್ಚರ್ ತಲಾ 3 ವಿಕೆಟ್ ಪಡೆದು ಮಿಂಚಿದರು.