ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಸೌತ್ ಆಫ್ರಿಕಾ 10 ರನ್ ರೋಚಕ ಗೆಲುವು ಸಾಧಿಸಿದೆ. ಸೌತ್ ಆಫ್ರಿಕಾ ವಿರುದ್ಧ ಡೇವಿಡ್ ವಾರ್ನರ್ ಹಾಗೂ ಅಲೆಕ್ಸ್ ಕ್ಯಾರಿ ಹೋರಾಟ ವ್ಯರ್ಥವಾಯಿತು. ಈ ಸೋಲಿನೊಂದಿಗೆ ಸೆಮಿಫೈನಲ್ ನಿರೀಕ್ಷೆಯಲ್ಲಿ ಬದಲಾವಣೆಯಾಗಿದೆ.
ಮ್ಯಾಂಚೆಸ್ಟರ್(ಜು.06): ಸೌತ್ ಆಫ್ರಿಕಾ ವಿರುದ್ಧ ವಿಶ್ವಕಪ್ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮುಗ್ಗರಿಸಿದೆ. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೌತ್ ಆಫ್ರಿಕಾ 10 ರನ್ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಆಸ್ಟ್ರೇಲಿಯಾಗೆ ಆಘಾತ ನೀಡಿದೆ. ಹರಿಣಗಳ ವಿರುದ್ಧದ ಸೋಲಿನೊಂದಿಗೆ ಇದೀಗ ಸೆಮಿಫೈನಲ್ ಹೋರಾಟ ಅದಲು ಬದಲಾಗಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಹೋರಾಟ ನಡೆಸಿದರೆ, 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಹೋರಾಟ ನಡೆಸಲಿದೆ.
ಗೆಲುವಿಗೆ 326 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಆ್ಯರೋನ್ ಫಿಂಚ್ 3 ರನ್ ಸಿಡಿಸಿ ಔಟಾದರು. ಉಸ್ಮಾನ್ ಖವಾಜ್ 6 ರನ್ ಸಿಡಿಸಿ ಗಾಯಗೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಸ್ಟೀವ್ ಸ್ಮಿತ್ ಕೇವಲ 7 ರನ್ ಸಿಡಿಸಿ ಔಟಾದರು. ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಜೊತೆಯಾಟ ಆಸೀಸ್ ತಂಡಕ್ಕೆ ಚೇತರಿಕೆ ನೀಡಿತು.
ಸ್ಟೊಯ್ನಿಸ್ 22 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ವಾರ್ನರ್ ಹಾಫ್ ಸೆಂಚುರಿ ಸಿಡಿಸೋ ಮೂಲಕ ಹೋರಾಟ ಮುಂದುವರಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ 12 ರನ್ ಸಿಡಿ ನಿರ್ಗಮಿಸಿದರು. ಆದರೆ ಏಕಾಂಗಿ ಹೋರಾಟ ನೀಡಿದ ಡೇವಿಡ್ ವಾರ್ನರ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ವಿಶ್ವಕಪ್ ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ ಸಾಧನೆ ಮಾಡಿದರು.
ವಾರ್ನರ್‌ಗೆ ಅಲೆಕ್ಸ್ ಕ್ಯಾರಿ ಉತ್ತಮ ಸಾಥ್ ನೀಡಿದರು. ವಾರ್ನರ್ 122 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಆಸೀಸ್ ಆತಂಕ ಹೆಚ್ಚಿತು. ಅಲೆಕ್ಸ್ ಕ್ಯಾರಿ ಹಾಫ್ ಸೆಂಚುರಿ ಸಿಡಿಸೋ ಮೂಲಕ ಜವಾಬ್ದಾರಿ ನಿರ್ವಹಿಸಿದರು. ಅಲೆಕ್ಸ್ ಕ್ಯಾರಿ 85 ರನ್ ಸಿಡಿಸಿ ಔಟಾದರು. ಗಾಯದಿಂದ ಚೇತರಿಸಿಕೊಂಡ ಉಸ್ಮಾನ್ ಖವಾಜ್ ಮತ್ತೆ ಅಖಾಡಕ್ಕಿಳಿದರು. 18 ಎಸೆತದಲ್ಲಿ ಆಸೀಸ್ ಗೆಲುವಿಗೆ 42 ರನ್ ಅವಶ್ಯಕತೆ ಇತ್ತು.
ಉಸ್ಮಾನ್ ಖವಾಜ 18 ರನ್ ಸಿಡಿಸಿ ಔಟಾದರು. ಇತ್ತ 16 ರನ್ ಸಿಡಿಸಿದ ಮಿಚೆಲ್ ಸ್ಟಾರ್ಕ್ ವಿಕೆಟ್ ಪತನಗೊಂಡಿತು. ಅಂತಿಮ 6 ಎಸೆತದಲ್ಲಿ ಆಸ್ಟ್ರೇಲಿಯಾಗೆ 18 ರನ್ ಬೇಕಿತ್ತು. ನತನ್ ಲಿಯೊನ್ ವಿಕೆಟ್ ಪತನದೊಂದಿಗೆ ಆಸ್ಟ್ರೇಲಿಯಾ 49.5 ಓವರ್‌ಗಳಲ್ಲಿ 315 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಸೌತ್ ಆಫ್ರಿಕಾ 10 ರನ್ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಉಳಿದರೆ, ಭಾರತ ಮೊದಲ ಸ್ಥಾನದಲ್ಲಿ ಮುಂದುವರಿಯಿತು. ಇಷ್ಟೇ ಅಲ್ಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ಎದುರಿಸಿದರೆ, ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ವಿಶ್ವಕಪ್ ಸೆಮಿಫೈನಲ್
ಜುಲೈ 09 - ಭಾರತ Vs ನ್ಯೂಜಿಲೆಂಡ್(ಮ್ಯಾಂಚೆಸ್ಟರ್)
ಜುಲೈ 11 - ಆಸ್ಟ್ರೇಲಿಯಾ Vs ಇಂಗ್ಲೆಂಡ್(ಬರ್ಮಿಂಗ್‌ಹ್ಯಾಮ್)
ಫೈನಲ್
ಜುಲೈ 14 - TBC vs TBC (ಲಾರ್ಡ್ಸ್)