ಬ್ರಾಥ್ವೈಟ್ ಹೋರಾಟ ವ್ಯರ್ಥ- ನ್ಯೂಜಿಲೆಂಡ್‌ಗೆ 5 ರನ್ ರೋಚಕ ಗೆಲುವು!

By Web DeskFirst Published Jun 23, 2019, 2:15 AM IST
Highlights

ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ 5 ರನ್ ಗೆಲುವು ಸಾಧಿಸಿದೆ. ಬ್ರಾಥ್ವೈಟ್ ಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ. ನ್ಯೂಜಿಲೆಂಡ್ ಗೆಲುವಿನ ನಾಗಾಲೋಟದ ಹೈಲೈಟ್ಸ್ ಇಲ್ಲಿದೆ. 

ಮ್ಯಾಂಚೆಸ್ಟರ್(ಜೂ.23): ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಗೆಲುವಿನ ನಾಗಾಲೋಟ ಮುಂದುವರಿದಿದೆ. ವೆಸ್ಟ್ ಇಂಡೀಸ್ ವಿರುದ್ಧ ಆಲ್ರೌಂಡರ್ ಪ್ರದರ್ಶನ ನೀಡಿದ ನ್ಯೂಜಿಲೆಂಡ್ 5 ರನ್ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯ ಅಂಕಪಟ್ಟಿ ಮತ್ತೆ ಏರುಪೇರಾಗಿದೆ. ಆಸ್ಟ್ರೇಲಿಯಾ ಹಿಂದಿಕ್ಕಿದ ನ್ಯೂಜಿಲೆಂಡ್ ಮತ್ತೆ ಮೊದಲ ಸ್ಥಾನಕ್ಕೇರಿದೆ.

ಗೆಲುವಿಗೆ 292 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಶೈ ಹೋಪ್ 1 ರನ್ ಸಿಡಿಸಿ ಔಟಾದರು. ನಿಕೋಲಸ್ ಪೂರನ್ 1 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಕ್ರಿಸ್ ಗೇಲ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಜೊತೆಯಾಟ ವೆಸ್ಟ್ ಇಂಡೀಸ್ ತಂಡಕ್ಕೆ ಹೊಸ ಸಂಚಲನ ಮೂಡಿಸಿತು. ಈ ಜೋಡಿ 122 ರನ್ ಜೊತೆಯಾಟ ನೀಡಿತು.

ಶಿಮ್ರೊನ್ ಹೆಟ್ಮೆಯರ್ ಹಾಫ್ ಸೆಂಚುರಿ ಸಿಡಿಸಿ ನೆರವಾದರು. ಆದರೆ ಹೆಟ್ಮೆಯರ್ ಹೋರಾಟ 54 ರನ್‌ಗೆ ಅಂತ್ಯವಾಯಿತು. ಶಿಮ್ರೊನ್ ಬೆನ್ನಲ್ಲೇ ನಾಯಕ ಜಾಸನ್ ಹೋಲ್ಡರ್ ವಿಕೆಟ್ ಪತನಗೊಂಡಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ ಕ್ರಿಸ್ ಗೇಲ್ ವಿಂಡೀಸ್ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಏಕಾಂಗಿ ಹೋರಾಟ ನೀಡಿದ ಗೇಲ್ 84 ಎಸೆತದಲ್ಲಿ 87 ರನ್ ಸಿಡಿಸಿ ಔಟಾದರು.

ಗೇಲ್ ವಿಕೆಟ್ ಪತನದೊಂದಿಗೆ ವಿಂಡೀಸ್ ತಂಡದಲ್ಲಿ ಆತಂಕ ಮನೆ ಮಾಡಿತು. ಆಶ್ಲೆ ನರ್ಸ್ 1 ರನ್ ಸಿಡಿಸಿ ನಿರ್ಗಮಿಸಿದರು. ಇವಿನ್ ಲಿವಿಸ್ ಡಕೌಟ್ ಆದರು. ಕಾರ್ಲೋಸ್ ಬ್ರಾಥ್ವೈಟ್ ಹಾಗೂ ಕೆಮರ್ ರೋಚ್ ಜೊತೆಯಾಟದಿಂದ ವೆಸ್ಟ್ ಇಂಡೀಸ್ ಮತ್ತೆ ಚೇತರಿಸಿಕೊಂಡಿತು. ಆದರೆ ರೋಚ್ 14 ರನ್ ಸಿಡಿಸಿ ನಿರ್ಗಮಿಸಿದರು. ಶೆಲ್ಡಾನ್ ಕಾಟ್ರೆಲ್ 15 ರನ್ ಸಿಡಿಸಿ ಔಟಾದರು. ಬ್ರಾಥ್ವೈಟ್ ಹೋರಾಟ ಮುಂದುವರಿಸಿದರು. ದಿಟ್ಟ ಹೋರಾಟ ನೀಡಿದ ಬ್ರಾಥೈಟ್ ಆಕರ್ಷಕ ಸೆಂಚುರಿ ಸಿಡಿಸಿದರು. 

ವಿಂಡೀಸ್ ಗೆಲುವಿಗೆ 7 ಎಸೆತಗಳಲ್ಲಿ 6 ರನ್ ಅವಶ್ಯಕತೆ ಇತ್ತು. ಸಿಕ್ಸರ್ ಹೊಡೆತಕ್ಕೆ ಮುಂದಾದ ಬ್ರಾಥ್ವೈಟ್ ವಿಕೆಟ್ ಪತನಗೊಂಡಿತು. ಬ್ರಾಥ್ವೈಟ್ 101 ರನ್ ಸಿಡಿಸಿ ಔಟಾದರು. ವೆಸ್ಟ್ ಇಂಡೀಸ್ 49 ಓವರ್‌ಗಳಲ್ಲಿ 286 ರನ್‌ಗೆ ಆಲೌಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ 5 ರನ್ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ವಿಂಡೀಸ್ ವಿಶ್ವಕಪ್  ಹೋರಾಟ ಬಹುತೇಕ ಅಂತ್ಯಗೊಂಡಿದೆ.
 

click me!