ಪಾಕ್ ಉಳಿಯುತ್ತಾ? ಹೊರ ಬೀಳುತ್ತಾ?

By Web DeskFirst Published Jun 26, 2019, 12:21 PM IST
Highlights

ಪಾಕ್‌ಗಿಂದು ಕಿವೀಸ್‌ನಿಂದ ಗೇಟ್‌ಪಾಸ್‌?| ಏಕದಿನ ವಿಶ್ವಕಪ್‌: ಇಂದು ಬಲಿಷ್ಠ ನ್ಯೂಜಿಲೆಂಡ್‌ ಸವಾಲು ಎದುರಿಸಲಿರುವ ಪಾಕಿಸ್ತಾನ| ಪಾಕ್‌ ಸೋತರೆ ಸೆಮೀಸ್‌ ರೇಸ್‌ನಿಂದ ಹೊರಕ್ಕೆ| ಗೆದ್ದು ಸೆಮೀಸ್‌ಗೇರಲು ಕಿವೀಸ್‌ ಕಾತರ

ಬರ್ಮಿಂಗ್‌ಹ್ಯಾಮ್‌[ಜೂ.26]: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಪಾಕಿಸ್ತಾನ, ಬುಧವಾರ ಬಲಿಷ್ಠ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದ್ದು, ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸುತ್ತಿದೆ. ಸರ್ಫರಾಜ್‌ ಪಡೆ ಬಾಕಿ ಇರುವ ಮೂರೂ ಪಂದ್ಯಗಳಲ್ಲಿ ಗೆಲ್ಲಲೇಬೇಕಿದ್ದು, ಇತರೆ ತಂಡಗಳ ಫಲಿತಾಂಶಗಳಿಗೂ ಕಾಯಬೇಕಿದೆ.

ಮತ್ತೊಂದೆಡೆ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಿಂದ 11 ಅಂಕ ಗಳಿಸಿರುವ ನ್ಯೂಜಿಲೆಂಡ್‌ ಅಜೇಯವಾಗಿ ಉಳಿದುಕೊಂಡಿದೆ. ಈ ಪಂದ್ಯದಲ್ಲಿ ಜಯಿಸಿದರೆ ತಂಡ ಸೆಮಿಫೈನಲ್‌ ಪ್ರವೇಶಿಸಲಿದೆ. ಅಸ್ಥಿರ ಪ್ರದರ್ಶನ ತೋರುತ್ತಿರುವ ಪಾಕಿಸ್ತಾನವನ್ನು ಬಗ್ಗುಬಡಿದು ಉಪಾಂತ್ಯಕ್ಕೇರುವ ಲೆಕ್ಕಾಚಾರದಲ್ಲಿದೆ.

ಮೊಹಮದ್‌ ಆಮೀರ್‌ (15 ವಿಕೆಟ್‌) ಹೊರತು ಪಡಿಸಿ ಉಳಿದ್ಯಾವ ಬೌಲರ್‌ಗಳು ಪಾಕ್‌ಗೆ ನೆರವಾಗುತ್ತಿಲ್ಲ. ತಂಡದ ಬ್ಯಾಟಿಂಗ್‌ ಪಡೆ ಸಹ ರನ್‌ ಗಳಿಸಲು ತಿಣುಕಾಡುತ್ತಿದೆ. ಮೊದಲ ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದ ಹ್ಯಾರಿಸ್‌ ಸೊಹೈಲ್‌ ಕಳೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ದ.ಆಫ್ರಿಕಾ ವಿರುದ್ಧ 59 ಎಸೆತಗಳಲ್ಲಿ 89 ರನ್‌ ಸಿಡಿಸಿ, ಪಾಕಿಸ್ತಾನ 308 ರನ್‌ಗಳ ದೊಡ್ಡ ಮೊತ್ತ ಕಲೆಹಾಕಲು ನೆರವಾಗಿದ್ದರು. ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ತನ್ನ ಬ್ಯಾಟ್ಸ್‌ಮನ್‌ಗಳಿಂದ ಜವಾಬ್ದಾರಿಯುತ ಆಟವನ್ನು ನಿರೀಕ್ಷೆ ಮಾಡುತ್ತಿದೆ.

ಪ್ರಚಂಡ ಲಯದಲ್ಲಿ ಕೇನ್‌: ನ್ಯೂಜಿಲೆಂಡ್‌ ತಂಡ ಅಜೇಯ ಓಟ ಮುಂದುವರಿಸಿದ್ದರೂ, ದ.ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್‌ ವಿರುದ್ಧ ಸೋಲಿನ ಭೀತಿಗೆ ಸಿಲುಕಿತ್ತು. ಆದರೆ ನಾಯಕ ಕೇನ್‌ ವಿಲಿಯಮ್ಸನ್‌ರ ಶತಕ ಎರಡೂ ಪಂದ್ಯಗಳಲ್ಲಿ ತಂಡವನ್ನು ಪಾರು ಮಾಡಿತ್ತು. ರಾಸ್‌ ಟೇಲರ್‌ ಸಹ ಲಯ ಕಾಯ್ದುಕೊಂಡಿದ್ದಾರೆ. ಆದರೆ ಆರಂಭಿಕರಾದ ಮಾರ್ಟಿನ್‌ ಗಪ್ಟಿಲ್‌ ಹಾಗೂ ಕಾಲಿನ್‌ ಮನ್ರೊ ಕಳಪೆ ಆಟ ಮುಂದುವರಿಸಿದ್ದು, ತಂಡದ ತಲೆನೋವು ಹೆಚ್ಚಿಸಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಟ್ರೆಂಟ್‌ ಬೌಲ್ಟ್‌ ಹಾಗೂ ಲಾಕಿ ಫಗ್ರ್ಯೂಸನ್‌ ಭರ್ಜರಿ ಲಯದಲ್ಲಿದ್ದಾರೆ. ನ್ಯೂಜಿಲೆಂಡ್‌ ಇಬ್ಬರು ಪರಿಣಾಮಕಾರಿ ಆಲ್ರೌಂಡರ್‌ಗಳಾದ ಜೇಮ್ಸ್‌ ನೀಶಮ್‌ ಹಾಗೂ ಕಾಲಿನ್‌ ಡಿ ಗ್ರಾಂಡ್‌ಹೋಮ್‌ರನ್ನು ಹೊಂದಿದೆ.

ಒಟ್ಟು ಮುಖಾಮುಖಿ: 106| ನ್ಯೂಜಿಲೆಂಡ್‌: 48| ಪಾಕಿಸ್ತಾನ: 54| ಟೈ: 01| ಫಲಿತಾಂಶವಿಲ್ಲ: 03

ವಿಶ್ವಕಪ್‌ನಲ್ಲಿ ಕಿವೀಸ್‌ vs ಪಾಕ್‌

ಪಂದ್ಯ: 08| ನ್ಯೂಜಿಲೆಂಡ್‌: 02| ಪಾಕಿಸ್ತಾನ: 06

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಗಪ್ಟಿಲ್‌, ಮನ್ರೊ/ನಿಕೋಲ್ಸ್‌, ವಿಲಿಯಮ್ಸನ್‌ (ನಾಯಕ), ಟೇಲರ್‌, ಬ್ಲಂಡೆಲ್‌/ಲೇಥಮ್‌, ನೀಶಮ್‌, ಡಿ ಗ್ರಾಂಡ್‌ಹೋಮ್‌, ಸ್ಯಾಂಟ್ನರ್‌, ಬೌಲ್ಟ್‌, ಹೆನ್ರಿ, ಫಗ್ರ್ಯೂಸನ್‌.

ಪಾಕಿಸ್ತಾನ: ಇಮಾಮ್‌, ಫಖರ್‌, ಬಾಬರ್‌, ಹಫೀಜ್‌, ಸರ್ಫರಾಜ್‌ (ನಾಯಕ), ಹ್ಯಾರಿಸ್‌, ಇಮಾದ್‌ ವಾಸಿಂ, ವಾಹಬ್‌ ರಿಯಾಜ್‌, ಶದಾಬ್‌ ಖಾನ್‌, ಶಾಹೀನ್‌, ಮೊಹಮದ್‌ ಆಮೀರ್‌.

ಸ್ಥಳ: ಬರ್ಮಿಂಗ್‌ಹ್ಯಾಮ್‌, ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 1

ಪಿಚ್‌ ರಿಪೋರ್ಟ್‌

ಬ್ಯಾಟಿಂಗ್‌ ಸ್ನೇಹಿ ಪಿಚ್‌ ಎನಿಸಿದರೂ, ಇಲ್ಲಿ 300ಕ್ಕಿಂತ ಹೆಚ್ಚು ಮೊತ್ತ ದಾಖಲಾಗಿದ್ದು ಅಪರೂಪ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 227 ರನ್‌. ಮೊದಲು ಬ್ಯಾಟ್‌ ಮಾಡುವ ತಂಡ 280-290 ರನ್‌ ಕಲೆಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚು.

92ರ ವಿಶ್ವಕಪ್‌ನಂತೆಯೇ ಸಾಗಿದೆ ಪಾಕ್‌ ಓಟ!

1992ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಫಲಿತಾಂಶಗಳಿಗೂ 2019ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಫಲಿತಾಂಶಗಳಿಗೂ ಹೋಲಿಕೆ ಇದೆ. 92ರ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಸೋತಿದ್ದ ಪಾಕ್‌, 2ನೇ ಪಂದ್ಯದಲ್ಲಿ ಜಯಿಸಿತ್ತು. 3ನೇ ಪಂದ್ಯ ಮಳೆಗೆ ಬಲಿಯಾದರೆ, 4 ಹಾಗೂ 5ನೇ ಪಂದ್ಯದಲ್ಲಿ ಸೋಲುಂಡಿತ್ತು. 6ನೇ ಪಂದ್ಯದಲ್ಲಿ ಗೆಲುವು ಪಡೆದಿತ್ತು. ಈ ವಿಶ್ವಕಪ್‌ನಲ್ಲೂ ಇದೇ ರೀತಿಯ ಫಲಿತಾಂಶಗಳು ಹೊರಬಂದಿವೆ. 92ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೊದಲು ನ್ಯೂಜಿಲೆಂಡ್‌ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿತ್ತು. ಪಾಕಿಸ್ತಾನ ಪಂದ್ಯ ಗೆದ್ದುಕೊಂಡಿತ್ತು. ಈ ಬಾರಿಯೂ ನ್ಯೂಜಿಲೆಂಡ್‌ ಅಜೇಯವಾಗಿ ಉಳಿದಿದ್ದು, ಪಾಕಿಸ್ತಾನ ಗೆಲ್ಲುವ ವಿಶ್ವಾಸದಲ್ಲಿದೆ.

click me!