ಇಂಗ್ಲೆಂಡ್ ಮಣಿಸಿ ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ!

By Web DeskFirst Published Jun 25, 2019, 10:34 PM IST
Highlights

ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಆತಿಥೇಯ ಇಂಗ್ಲೆಂಡ್ ಸೋಲಿನೊಂದಿಗೆ ಸೆಮಿಫೈನಲ್ ಹಾದಿ  ಮತ್ತಷ್ಟು ಕಠಿಣಗೊಂಡಿದೆ.

ಲಾರ್ಡ್ಸ್(ಜೂ.25): ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳಲ್ಲಿ ಆತಿಥೇಯ ಇಂಗ್ಲೆಂಡ್ ಮುಂಚೂಣಿಯಲ್ಲಿತ್ತು. ಟೂರ್ನಿ ಆರಂಭದಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲೋ ಭರವಸೆ ಮೂಡಿಸಿತ್ತು. ಆದರೆ ಕಳೆದೆರಡು ಪಂದ್ಯದಲ್ಲಿ ಇಂಗ್ಲೆಂಡ್  ಮೇಲಿನ ಭರವಸೆ ಸುಳ್ಳಾಗುತ್ತಿದೆ. ಶ್ರೀಲಂಕಾ ವಿರುದ್ಧ ಮುಗ್ಗರಿಸಿದ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ವಿರುದ್ಧವೂ ಇಂಗ್ಲೆಂಡ್ ಸೋಲಿಗೆ ಶರಣಾಗಿದೆ. ಇದರೊಂದಿಗೆ ಆಸ್ಟ್ರೇಲಿಯಾ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.

286 ರನ್ ಟಾರ್ಗೆಟ್ ಇಂಗ್ಲೆಂಡ್‌ಗೆ ಸುಲಭ ತುತ್ತಾಗಿರಲಿಲ್ಲ. ಕಾರಣ ಮಿಚೆಲ್ ಸ್ಟಾರ್ಕ್, ಜಾಸನ್ ಬೆಹೆನ್‌ಡ್ರೋಫ್ ಸೇರಿದಂತೆ ಆಸ್ಟ್ರೇಲಿಯಾ ಬೌಲಿಂಗ್ ದಾಳಿ ಮುಂದೆ ಇಂಗ್ಲೆಂಡ್ ರನ್ ಚೇಸ್ ಹೆಜ್ಜೆ ಹೆಜ್ಜೆಗೂ ಕಠಿಣವಾಯಿತು. ಜೇಮ್ಸ್ ವಿನ್ಸ್ ಶೂನ್ಯಕ್ಕೆ ಔಟಾಗೋ ಮೂಲಕ ಇಂಗ್ಲೆಂಡ್ ಆತಂಕ ಹೆಚ್ಚಿಸಿದರು. ಜೂ ರೂಟ್ 8, ನಾಯಕ ಇಯಾನ್ ಮಾರ್ಗನ್ 4 ಹಾಗೂ ಜಾನಿ ಬೇರ್‌ಸ್ಟೋ 27 ರನ್ ಸಿಡಿಸಿ ಔಟಾದರು.

53 ರನ್‌ಗೆ 4 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸೋಲಿನತ್ತ ಹೆಜ್ಜೆ ಹಾಕಿತು. ಆದರೆ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಆಸಿಸ್ ದಾಳಿಗೆ ದಿಟ್ಟ ಹೋರಾಟ ನೀಡಿದರು. ಸ್ಟೋಕ್ಸ್ ಜೊತೆ ಜೋಸ್ ಬಟ್ಲರ್ ಕೆಲ ಹೊತ್ತು ಬ್ಯಾಟಿಂಗ್ ನಡೆಸಿದರು. ಬಟ್ಲರ್ 25 ರನ್ ಸಿಡಿಸಿ ಔಟಾದರು. ಕ್ರಿಸ್ ವೋಕ್ಸ್ ಉತ್ತಮ ಸಾಥ್ ನೀಡಿದರು. ಅಷ್ಟರಲ್ಲಿ ಬೆನ್ ಸ್ಟೋಕ್ಸ್ 89 ರನ್ ಸಿಡಿಸಿ ಔಟಾದರು.

ಸ್ಟೋಕ್ಸ್ ವಿಕೆಟ್ ಪತನವಾಗುತ್ತಿದ್ದಂತೆ ಇಂಗ್ಲೆಂಡ್ ಸೋಲು ಬಹುತೇಕ ಖಚಿತಗೊಂಡಿತು. ಮೊಯಿನ್ ಆಲಿ 6 ರನ್ ಸಿಡಿಸಿ ಔಟಾದರೆ.  ವೋಕ್ಸ್ 26 ರನ್ ಕಾಣಿಕೆ ನೀಡಿದರು. ಜೋಫ್ರಾ ಆರ್ಚರ್, ಆದಿಲ್ ರಶೀದ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ 44.4 ಓವರ್‌ಗಳಲ್ಲಿ 221 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ 64 ರನ್ ಗೆಲುವು ಸಾಧಿಸಿತು. 

click me!
Last Updated Jun 25, 2019, 10:36 PM IST
click me!