ಇಂಡೋ-ಪಾಕ್‌ ಸಂಡೇ ಸಮರ! ಇಲ್ಲಿವೆ ನೋಡಿ ರೋಚಕ ಮಾಹಿತಿ

By Web DeskFirst Published Jun 16, 2019, 11:44 AM IST
Highlights

ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸದೇ ಹೋದರೆ ಹೖವೋಲ್ಟೇಜ್ ಪಂದ್ಯಕ್ಕೆ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ. ಈ ರೋಚಕ ‘ಸಂಡೇ ಸಮರ’ಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ನೋಡಿ ಎಂಜಾಯ್ ಮಾಡಿ...

11ನೇ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ನಿರೀಕ್ಷಿಸಲಾಗಿರುವ ಅತ್ಯಂತ ರೋಚಕ ಹಣಾಹಣಿಗಳಲ್ಲೊಂದಾಗಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಬದ್ಧವೈರಿಗಳ ಕದನ ಎಂದೇ ಬಣ್ಣಿಸಲಾಗುವ ಭಾರತ-ಪಾಕಿಸ್ತಾನ ಕ್ರಿಕೆಟ್‌ ಕಾಳಗಕ್ಕೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣ ಭಾನುವಾರ ಆತಿಥ್ಯ ವಹಿಸಲಿದೆ. 

ಪಾಕ್ ವಿರುದ್ಧ ಸಪ್ತ ಗೆಲುವಿನತ್ತ ಟೀಂ ಇಂಡಿಯಾ ಚಿತ್ತ

ಮಳೆರಾಯ ಅವಕೃಪೆ ತೋರದೇ ಹೋದಲ್ಲಿ, ವಿರಾಟ್‌ ಕೊಹ್ಲಿ ಪಡೆಯ ಬಲಾಢ್ಯ ಬ್ಯಾಟಿಂಗ್‌ ಹಾಗೂ ಸರ್ಫರಾಜ್‌ ಪಾಳೆಯದ ವೇಗದ ಬೌಲಿಂಗ್‌ ನಡುವಣ ಕದನಕ್ಕೆ ಕ್ರಿಕೆಟ್‌ ಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ. ಈ ರೋಚಕ ‘ಸಂಡೇ ಸಮರ’ಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿ ಇಂತಿದೆ.

ವಿಶ್ವಕಪ್‌ನಲ್ಲಿ ಆಡಿದ ಎಲ್ಲ 6 ಪಂದ್ಯ ಗೆದ್ದಿದೆ ಭಾರತ

ಈ ಹಿಂದೆ 1992, 1996, 1999, 2003, 2011, 2015ರ ವಿಶ್ವಕಪ್‌ಗಳಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿವೆ. ಎಲ್ಲಾ ಆರು ಪಂದ್ಯಗಳಲ್ಲೂ ಭಾರತ ಗೆದ್ದಿದೆ ಎಂಬುದು ಭಾರತದ ಪಾಲಿಗೆ ಪ್ಲಸ್‌ ಪಾಯಿಂಟ್‌.

(ಭಾರತ 6 - ಪಾಕಿಸ್ತಾನ 0)

ಮಳೆ ಅಡ್ಡಿ ಭೀತಿ: ಅರೆಬರೆ ಮ್ಯಾಚ್ ನಡೆಯುತ್ತಾ? ರದ್ದಾಗುತ್ತಾ?

ಮ್ಯಾಂಚೆಸ್ಟರ್‌ನಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ವಾರದ ಹಿಂದಿನಿಂದಲೇ ಹವಾಮಾನ ಮುನ್ಸೂಚನೆ ಹೇಳುತ್ತಿದೆ. ಆದರೆ, ಭಾರೀ ಮಳೆಯಾಗುವ ಸಾಧ್ಯತೆ ಇಲ್ಲ ಎಂದೂ ಹವಾಮಾನ ವಿಶ್ಲೇಷಕರು ಹೇಳುತ್ತಿದ್ದಾರೆ. ಹಾಗಾಗಿ, ಭಾರತ-ಪಾಕ್‌ ಹಣಾಹಣಿಗೆ ಮಳೆ ಅಡ್ಡಿಯಾಗುತ್ತಾ? ಆದದ್ದೇ ಆದಲ್ಲಿ, ಪಂದ್ಯ ಪೂರ್ತಿ ರದ್ದಾಗುತ್ತಾ? ಓವರ್‌ ಕಡಿತಗೊಂಡು ಪಂದ್ಯ ನಡೆಯುತ್ತಾ ಎಂಬುದು ಸದ್ಯಕ್ಕೆ ಇರುವ ಪ್ರಶ್ನೆ.

ಪಂದ್ಯ ರದ್ದು ಆಗಿಬಿಟ್ಟರೆ ಯಾರಿಗೆ ಏನೇನು ನಷ್ಟ?

ಭಾರತ-ಪಾಕ್‌ ಪಂದ್ಯವನ್ನು ಇಡೀ ಕ್ರಿಕೆಟ್‌ ಜಗತ್ತು ಕಾತರದಿಂದ ಎದುರು ನೋಡುತ್ತದೆ. ಆ ಸಂದರ್ಭದಲ್ಲಿ ಟೀವಿ ಜಾಹೀರಾತು ದರವೂ ಎಲ್ಲಿಲ್ಲದಷ್ಟು ದುಬಾರಿಯಾಗಿರುತ್ತದೆ. ವರದಿಗಳ ಪ್ರಕಾರ, ಭಾನುವಾರದ ಪಂದ್ಯಕ್ಕೆ ಪ್ರತಿ 10 ಸೆಕೆಂಡ್‌ ಜಾಹೀರಾತಿಗೆ 25ರಿಂದ 35 ಲಕ್ಷ ದರವಿದೆ. ಅಂತಹ 250ರಿಂದ 275 ಜಾಹೀರಾತುಗಳು ಪಂದ್ಯದ ವೇಳೆ ಪ್ರಸಾರವಾಗಲಿವೆ. ಹಾಗಾಗಿ, ಪಂದ್ಯ ರದ್ದಾದಲ್ಲಿ ಕೋಟಿಗಟ್ಟಲೆ ನಷ್ಟವಾಗುತ್ತದೆ. ಅಲ್ಲದೆ, ಈ ಪಂದ್ಯ ವೀಕ್ಷಿಸಲು ಭಾರೀ ಸಂಖ್ಯೆಯ ಭಾರತೀಯ ಅಭಿಮಾನಿಗಳು ವಿಶ್ವದ ವಿವಿಧೆಡೆಯಿಂದ ದುಬಾರಿ ವೆಚ್ಚ ಮಾಡಿಕೊಂಡು ಇಂಗ್ಲೆಂಡ್‌ಗೆ ಬಂದಿದ್ದಾರೆ. ಹಲವು ಪಟ್ಟು ಹೆಚ್ಚು ಹಣ ನೀಡಿ ಟಿಕೆಟ್‌ ಖರೀದಿಸಿದ್ದಾರೆ. ಅವರಿಗೆಲ್ಲ ನಷ್ಟ ಆಗುತ್ತದೆ. ಇದಲ್ಲದೆ, ಭಾರತ-ಪಾಕ್‌ ಕದನವನ್ನು ಎದುರು ನೋಡುತ್ತಿರುವ ಕೋಟ್ಯಂತರ ವೀಕ್ಷಕರು ನಿರಾಸೆಗೊಳಗಾಗುವುದಂತೂ ನಿಶ್ಚಿತ.

ಸ್ಥಳ: ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣ, ಮ್ಯಾಂಚೆಸ್ಟರ್‌

ಸಮಯ: ಮಧ್ಯಾಹ್ನ 3ರಿಂದ (ಭಾರತೀಯ ಕಾಲಮಾನ)

ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್ ಮತ್ತು ಸ್ಟಾರ್‌ ಸ್ಪೋರ್ಟ್ಸ್’ನ ವಿವಿಧ ವಾಹಿನಿಗಳು

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...


 

click me!