ಟೀಂ ಇಂಡಿಯಾ ಬೆಂಬಲಕ್ಕೆ ನಿಂತ ಪಾಕ್ ಕ್ರೀಡಾಭಿಮಾನಿಗಳು| ನಮ್ಮ ಬೆಂಬಲ ಭಾರತ ತಂಡಕ್ಕೆ ಎಂದು ಸಾರಿದ ಪಾಕಿಗಳು| ಭಾನುವಾರ(ಜೂ.30) ಭಾರತ-ಇಂಗ್ಲೆಂಡ್ ನಡುವೆ ಪಂದ್ಯ| ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸುವುದಾಗಿ ಹೇಳಿದ ಪಾಕ್ ಕ್ರೀಡಾಭಿಮಾನಿಗಳು| ಇಂಗ್ಲೆಂಡ್ ಮಾಜಿ ನಾಯಕ ನಾಸೀರ್ ಹುಸೇನ್ ಕೇಳಿದ ಪ್ರಶ್ನೆಗೆ ಉತ್ತರ| ನೆರೆಯ ಸಹೋದರ ದೇಶಕ್ಕೆ ನಮ್ಮ ಬೆಂಬಲ ಎಂದ ಪಾಕ್ ಕ್ರೀಡಾಭಿಮಾನಿಗಳು|
ಬೆಂಗಳೂರು(ಜೂ.27): ಕ್ರೀಡೆಗೆ ದ್ವೇಷ ಮರೆಸುವ ಶಕ್ತಿ ಇದೆ ಅಂತಾರೆ. ಈ ಮಾತು ಅಕ್ಷರಶಃ ಸತ್ಯ. ಯುದ್ಧಭೂಮಿಯಲ್ಲಿ ಮತ್ತು ಕ್ರಿಕೆಟ್ ಮೈದಾನದಲ್ಲಿ ಪರಸ್ಪರ ಅನೇಕ ಸಲ ಎದುರಾಗಿರುವ ಭಾರತ-ಪಾಕಿಸ್ತಾನ, ಎರಡೂ ಕಣದಲ್ಲಿ ಸೆಣಸಾಡಿವೆ.
ಕ್ರಿಕೆಟ್ ಕಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳೆಂದೇ ಪರಿಗಣಿಸಲ್ಪಟ್ಟಿರುವ ಭಾರತ-ಪಾಕ್ ಪಂದ್ಯ ಎಂದರೆ ಇಡೀ ವಿಶ್ವ ಜೀವ ಕೈಯಲ್ಲಿ ಹಿಡಿದು ನೋಡುತ್ತದೆ. ಅದರಲ್ಲೂ ವಿಶ್ವಕಪ್ನಲ್ಲಿ ಇದುವರೆಗೂ 7 ಬಾರಿ ಪಾಕ್ ತಂಡವನ್ನು ಮಣ್ಣು ಮುಕ್ಕಿಸಿರುವ ಭಾರತ ಎಲ್ಲರ ಹಾಟ್ ಫೆವರಿಟ್.
ಆದರೆ ಕ್ರಿಕೆಟ್ ಅನ್ನೇ ಉಸಿರಾಡುವ ಎರಡೂ ದೇಶಗಳಲ್ಲಿ ಪರಸ್ಪರ ತಂಡಕ್ಕೆ ಗೌರವ ನೀಡುವುದು ಸಂಪ್ರದಾಯ. ಭಾರತೀಯ ಆಟಗಾರರನ್ನು ಇಷ್ಟಪಡುವ ಅನೇಕ ಅಭಿಮಾನಿಗಳು ಪಾಕ್’ನಲ್ಲಿದ್ದಾರೆ. ಅದರಂತೆ ಅನೇಕ ಪಾಕ್ ಆಟಗಾರರು ಭಾರತದ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಅದರಂತೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಕೇಳಿದ ಒಂದು ಪ್ರಶ್ನೆಗೆ ಪಾಕ್ ಕ್ರೀಡಾಭಿಮಾನಿಗಳು ನೀಡಿರುವ ಉತ್ತರ ನಿಜಕ್ಕೂ ಎರಡೂ ದೇಶಗಳ ಮಧ್ಯೆ ಕೇವಲ ದ್ವೇಷವೊಂದೇ ಉಸಿರಾಡುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಭಾನುವಾರ(ಜೂ.30) ಭಾರತ-ಇಂಗ್ಲೆಂಡ್ ತಂಡಗಳು ಪರಸ್ಪರ ಎದುರಾಗುತ್ತಿದ್ದು, ನಿಮ್ಮ ಬೆಂಬಲ ಯಾವ ತಂಡಕ್ಕೆ ಎಂದು ಪಾಕ್ ಅಭಿಮಾನಿಗಳನ್ನು ನಾಸೀರ್ ಹುಸೇನ್ ಟ್ವಿಟ್ಟರ್’ ನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟ ಉತ್ತರ ನೀಡಿರುವ ಪಾಕಿಸ್ತಾನ ಕ್ರೀಡಾ ಅಭಿಮಾನಿಗಳು, ನಮ್ಮ ಬೆಂಬಲ ಭಾರತಕ್ಕೆ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.
ಹೌದು, ಇದು ಆಶ್ಚರ್ಯವಾದರೂ ಸತ್ಯ. ಭಾರತ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ತಾವು ಮೈದಾನದಲ್ಲಿ ಹಾಜರಿದ್ದು ಭಾರತ ತಂಡವನ್ನು ಬೆಂಬಲಿಸುವುದಾಗಿ ಪಾಕ್ ಕ್ರೀಡಾಭಿಮಾನಿಗಳು ಹೇಳಿದ್ದಾರೆ.
ನಾಸೀರ್ ಟ್ವೀಟ್’ಗೆ ಪ್ರತ್ಯುತ್ತರ ನೀಡಿರುವ ಪಾಕ್ ಕ್ರೀಡಾಭಿಮಾನಿಗಳು, ಭಾರತ-ಪಾಕ್ ಎರಡೂ ರಾಷ್ಟ್ರಗಳು ಇಂಗ್ಲೆಂಡ್’ನಿಂದ ಒಟ್ಟಿಗೆ ಸ್ವಾತಂತ್ರ್ಯ ಪಡೆದಿದ್ದು, ನಮ್ಮ ನೆರೆಯ ಸಹೋದರ ದೇಶಕ್ಕೆ ಬೆಂಬಲ ಎಂದು ಸ್ಪಷ್ಟವಾಗಿ ಉತ್ತರಿಸಿದ್ದಾರೆ.