ಜೇಸನ್ ರಾಯ್ ಅಬ್ಬರ: ಹೊಸ ಇತಿಹಾಸ ಬರೆದ ಇಂಗ್ಲೆಂಡ್

By Web DeskFirst Published Jun 8, 2019, 7:06 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತೊಮ್ಮೆ ಬೃಹತ್ ಮೊತ್ತ ಕಲೆಹಾಕುವಲ್ಲಿ ಸಫಲವಾಗಿದೆ. ಜೇಸನ್ ರಾಯ್ ಶತಕ ಹಾಗೂ ಬಟ್ಲರ್,ಬೇರ್‌ಸ್ಟೋ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ 386 ರನ್ ಬಾರಿಸಿದೆ. ಇದರ ಜತೆಗೆ ಏಕದಿನ ಕ್ರಿಕೆಟ್‌ನಲ್ಲೊಂದು ಅಪರೂಪದ ದಾಖಲೆಯನ್ನೂ ಬರೆದಿದೆ. 

ಕಾರ್ಡಿಫ್[ಜೂ.08]; ಜೇಸನ್ ರಾಯ್ ಆಕರ್ಷಕ ಶತಕ ಹಾಗೂ ಬೇರ್’ಸ್ಟೋ ಮತ್ತು ಬಟ್ಲರ್ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಬರೋಬ್ಬರಿ 386 ರನ್ ಬಾರಿಸಿದ್ದು, ಬಾಂಗ್ಲಾದೇಶಕ್ಕೆ ಕಠಿಣ ಗುರಿ ನೀಡಿದೆ. ಇದರ ಜತೆಗೆ ಏಕದಿನ ಸತತ 7ನೇ ಬಾರಿಗೆ 300+ ರನ್ ಬಾರಿಸಿದ ಮೊದಲ ತಂಡ ಎನ್ನುವ ಅಪರೂಪದ ದಾಖಲೆ ಇಂಗ್ಲೆಂಡ್ ಪಾಲಾಗಿದೆ. ಈ ಮೊದಲು 2007ರಲ್ಲಿ ಆಸ್ಟ್ರೇಲಿಯಾ ಸತತ 6 ಬಾರಿ 300+ ರನ್ ಬಾರಿಸಿದ ಸಾಧನೆ ಮಾಡಿತ್ತು. 

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್’ಗೆ ಜಾನಿ ಬೇರ್’ಸ್ಟೋ-ಜೇಸನ್ ರಾಯ್ ಜೋಡಿ 19.1 ಓವರ್’ಗಳಲ್ಲಿ 128 ರನ್’ಗಳ ಜತೆಯಾಟವಾಡಿತು. ಬಾಂಗ್ಲಾ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಇಂಗ್ಲೆಂಡ್ ಪರ 8ನೇ ಬಾರಿಗೆ ಶತಕದ ಜತೆಯಾಟ ನಿಭಾಯಿಸಿತು. ಎಚ್ಚರಿಕೆಯ ಆಟವಾಡಿದ ಬೇರ್’ಸ್ಟೋ 50 ಎಸೆತಗಳಲ್ಲಿ 6 ಬೌಂಡರಿ ಸಹಿತ 51 ರನ್ ಬಾರಿಸಿ ಮೊರ್ತಾಜಾಗೆ ವಿಕೆಟ್ ಒಪ್ಪಿಸಿದರು.

ಇನ್ನು ಎರಡನೇ ವಿಕೆಟ್’ಗೆ ರೂಟ್-ರಾಯ್ ಜೋಡಿ 77 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಈ ವೇಳೆ ಜೇಸನ್ ರಾಯ್ ಶತಕ ಪೂರೈಸಿದರೆ, ರೂಟ್ 21 ರನ್ ಬಾರಿಸಿ ಸೈಫುದ್ದೀನ್ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆ ಬಳಿಕ ಅಗ್ರಕ್ರಮಾಂಕಕ್ಕೆ ಬಡ್ತಿ ಪಡೆದು ಆಡಲಿಳಿದ ಜೋಸ್ ಬಟ್ಲರ್ ಮತ್ತೊಮ್ಮೆ ರನ್ ಹೊಳೆ ಹರಿಸಿದರು. ಮತ್ತೊಂದೆಡೆ ಶತಕದ ಬಳಿಕ ಸ್ಫೊಟಕ ಇನಿಂಗ್ಸ್ ಕಟ್ಟಿದ ರಾಯ್ 121 ಎಸೆತಗಳಲ್ಲಿ 14 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 153 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮೆಹದಿ ಹಸನ್ ಬೌಲಿಂಗ್’ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ರಾಯ್ ನಾಲ್ಕನೇ ಎಸೆತವೂ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಮೊರ್ತಾಜಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಬಟ್ಲರ್ 44 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 64 ರನ್ ಬಾರಿಸಿದರು. ಕೊನೆಯಲ್ಲಿ ನಾಯಕ ಮಾರ್ಗನ್[35], ಲಿಯಾಮ್ ಪ್ಲಂಕೆಟ್[27] ಹಾಗೂ ಕ್ರಿಸ್ ವೋಕ್ಸ್[18] ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡದ ಮೊತ್ತವನ್ನು 380ರ ಗಡಿ ದಾಟಿಸಿದರು.

ಬಾಂಗ್ಲಾದೇಶದ ಪರ ಮೆಹದಿ ಹಸನ್ ಹಾಗೂ ಸೈಫುದ್ದೀನ್ ತಲಾ 2 ವಿಕೆಟ್ ಪಡೆದರೆ, ಮೊರ್ತಾಜಾ ಹಾಗೂ ಮುಷ್ತಾಫಿಜುರ್ ರೆಹಮಾನ್ ತಲಾ ಒಂದೊಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 386/6
ಜೇಸನ್ ರಾಯ್: 153
ಮೆಹದಿ ಹಸನ್: 67/2
[* ಇಂಗ್ಲೆಂಡ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]

click me!