
ಟೌಂಟನ್(ಜೂ.08): ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸತತ 2 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನಗೊಂಡಿರುವ ನ್ಯೂಜಿಲೆಂಡ್, ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಆಚರಿಸುವ ಉತ್ಸಾಹದಲ್ಲಿದ್ದು ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಷ್ಘಾನಿಸ್ತಾನವನ್ನು ಎದುರಿಸಲಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲುಂಡಿರುವ ಆಷ್ಘಾನಿಸ್ತಾನ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದು, ಮೊದಲ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದೆ.
ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದ್ದ ಕಿವೀಸ್, 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಪಡೆದಿತ್ತು. ಎರಡೂ ಪಂದ್ಯಗಳಲ್ಲಿ ತಂಡದ ವೇಗದ ಬೌಲರ್‌ಗಳು ಮಿಂಚಿದ್ದರು. ಆದರೆ ಆಷ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಬೇಕಿದ್ದರೆ ತಂಡದ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಬೇಕಿದೆ. ರಶೀದ್ ಖಾನ್, ಮೊಹಮದ್ ನಬಿ ಹಾಗೂ ಮುಜೀಬ್ ರಹಮಾನ್ ಆಷ್ಘಾನಿಸ್ತಾನದ ಸ್ಪಿನ್ ಅಸ್ತ್ರಗಳಾಗಿದ್ದು, ಈ ಮೂವರಿಗೆ ಯಶಸ್ಸು ಸಿಗದಂತೆ ನೋಡಿಕೊಂಡರೆ ನ್ಯೂಜಿಲೆಂಡ್ ಮುಕ್ಕಾಲು ಪಾಲು ಪಂದ್ಯ ಗೆದ್ದಂತೆಯೇ ಲೆಕ್ಕ.
ಮತ್ತೊಂದೆಡೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಆಷ್ಘಾನಿಸ್ತಾನ, ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಕಾಣುತ್ತಿದೆ. ನಜೀಬುಲ್ಲಾ ಜದ್ರಾನ್ ಮಾತ್ರ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಆಫ್ಘನ್ ಮೇಲೆ ಕಿವೀಸ್ ವೇಗಿಗಳು ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ.
ಒಟ್ಟು ಮುಖಾಮುಖಿ: 01
ನ್ಯೂಜಿಲೆಂಡ್: 01
ಆಷ್ಘಾನಿಸ್ತಾನ: 00
ವಿಶ್ವಕಪ್‌ನಲ್ಲಿ ಕಿವೀಸ್ vs ಆಫ್ಘನ್
ಪಂದ್ಯ: 01
ನ್ಯೂಜಿಲೆಂಡ್: 01
ಆಷ್ಘಾನಿಸ್ತಾನ: 00
ಸಂಭವನೀಯ ಆಟಗಾರರ ಪಟ್ಟಿ
ನ್ಯೂಜಿಲೆಂಡ್: ಗಪ್ಟಿಲ್, ಮನ್ರೊ, ವಿಲಿಯಮ್ಸನ್(ನಾಯಕ), ಟೇಲರ್, ಲೇಥಮ್, ನೀಶಮ್, ಕಾಲಿನ್, ಸ್ಯಾಂಟ್ನರ್, ಹೆನ್ರಿ, ಫಗ್ರ್ಯೂಸನ್, ಬೌಲ್ಟ್.
ಆಷ್ಘಾನಿಸ್ತಾನ: ಹಜರತ್ತುಲ್ಲಾ, ರಹಮತ್, ಹಶ್ಮತ್ತುಲ್ಲಾ, ನಬಿ, ಇಕ್ರಮ್, ಗುಲ್ಬದಿನ್(ನಾಯಕ), ನಜೀಬುಲ್ಲಾ, ರಶೀದ್, ದಾವ್ಲತ್, ಮುಜೀಬ್, ಹಮೀದ್.
ಸ್ಥಳ: ಟೌಂಟನ್, ಪಂದ್ಯ ಆರಂಭ: ಸಂಜೆ 6ಕ್ಕೆ
ಪಿಚ್ ರಿಪೋರ್ಟ್ : ಇಲ್ಲಿನ ಕೌಂಟಿ ಮೈದಾನದಲ್ಲಿ ಕೇವಲ 3 ಏಕದಿನ ಪಂದ್ಯಗಳು ನಡೆದಿವೆ. ಕೊನೆ ಪಂದ್ಯ ನಡೆದಿದ್ದು 1999ರಲ್ಲಿ. 2 ದಶಕಗಳ ಬಳಿಕ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಪಿಚ್ ಸ್ಪರ್ಧಾತ್ಮಕ ಪಿಚ್ ಆಗಿರಲಿದೆ ಎಂದು ಕ್ಯುರೇಟರ್‌ಗಳು ಭರವಸೆ ನೀಡಿದ್ದಾರೆ. ಕೌಂಟಿ ಪಂದ್ಯಗಳಲ್ಲಿ ಉತ್ತಮ ಮೊತ್ತ ದಾಖಲಾದ ಉದಾಹರಣೆ ಇದೆ.