ಅನಾಯಾಸವಾಗಿ ಲಂಕಾ ಬಗ್ಗುಬಡಿದ ನ್ಯೂಜಿಲೆಂಡ್

By Web DeskFirst Published Jun 1, 2019, 7:31 PM IST
Highlights

ಶ್ರೀಲಂಕಾ ವಿರುದ್ಧ ಸಂಪೂರ್ಣ ಪಾರಮ್ಯ ಮೆರೆದ ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ. ಲಂಕಾವನ್ನು 10 ವಿಕೆಟ್‌ಗಳಿಂದ ಮಣಿಸುವ ಮೂಲಕ ಕಿವೀಸ್ ಪಡೆ ಅನಾಯಾಸವಾಗಿ ಗೆಲುವಿನ ಕೇಕೆ ಹಾಕಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ಕಾರ್ಡಿಫ್[ಜೂ.01]: ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್’ಮನ್’ಗಳ ಭರ್ಜರಿ ಶತಕದ ಜತೆಯಾಟದ ನೆರವಿನಿಂದ ಶ್ರೀಲಂಕಾ ವಿರುದ್ಧ 10 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಕಿವೀಸ್ ಆರಂಭಿಕರಾದ ಮಾರ್ಟಿನ್ ಗಪ್ಟಿಲ್[73] ಹಾಗೂ ಕಾಲಿನ್ ಮನ್ರೋ[58] ನ್ಯೂಜಿಲೆಂಡ್ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು.

ಮೊದಲಿಗೆ ಶ್ರೀಲಂಕಾ ತಂಡವನ್ನು ಕೇವಲ 136 ರನ್’ಗಳಿಗೆ ಆಲೌಟ್ ಮಾಡಿದ ನ್ಯೂಜಿಲೆಂಡ್, ಬ್ಯಾಟಿಂಗ್’ನಲ್ಲೂ ಪರಾಕ್ರಮ ಮೆರೆಯಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಗಪ್ಟಿಲ್-ಮನ್ರೋ ಜೋಡಿ ಮುರಿಯದ ಶತಕದ ಜತೆಯಾಟವಾಡಿ ಮಿಂಚಿತು. ಗಪ್ಟಿಲ್ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 73* ರನ್ ಬಾರಿಸಿದರೆ, ಕಾಲಿನ್ ಮನ್ರೋ 47 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಬಾರಿಸಿದರು. ನ್ಯೂಜಿಲೆಂಡ್ ವಿಕೆಟ್ ಪಡೆಯಲು ಲಂಕಾ ನಾನಾ ಕಸರತ್ತು ನಡೆಸಿತಾದರೂ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲಿಳಿದ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ದಾಳಿಗೆ ತರಗೆಲೆಗಳಂತೆ ತತ್ತರಿಸಿಹೋಯಿತು. ನಾಯಕ ದೀಮುತ್ ಕರುಣರತ್ನೆ ಅಜೇಯ 52 ರನ್ ಬಾರಿಸಿದರಾದರೂ ಉಳಿದವರಿಂದ ನಿರೀಕ್ಷಿತ ಸಾಥ್ ಸಿಗಲಿಲ್ಲ. ನ್ಯೂಜಿಲೆಂಡ್ ವೇಗಿಗಳಾದ ಮ್ಯಾಟ್ ಹೆನ್ರಿ, ಲೂಕಿ ಫರ್ಗ್ಯೂಸನ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಫಲರಾದರು.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ: 136/10
ದೀಮುತ್ ಕರುಣರತ್ನೆ: 52*
ಲೂಕಿ ಫರ್ಗ್ಯೂಸನ್: 22/3

ನ್ಯೂಜಿಲೆಂಡ್: 137/0
ಮಾರ್ಟಿನ್ ಗಪ್ಟಿಲ್: 73*

click me!