ಕರುಣರತ್ನೆ ಏಕಾಂಗಿ ಹೋರಾಟ; 136ಕ್ಕೆ ಲಂಕಾ ಆಲೌಟ್

By Web DeskFirst Published Jun 1, 2019, 5:50 PM IST
Highlights

ವಿಶ್ವಕಪ್ ಟೂರ್ನಿ ಮತ್ತೊಂದು ಅಲ್ಪಮೊತ್ತದ ಪಂದ್ಯಕ್ಕೆ ಸಾಕ್ಷಿಯಾಗಿದೆ. ನ್ಯೂಜಿಲೆಂಡ್ ಮಾರಕ ವೇಗಿಗಳ ದಾಳಿಗೆ ತರಗೆಲೆಗಳಂತೆ ತತ್ತರಿಸಿ ಹೋದ ಶ್ರೀಲಂಕಾ ಕೇವಲ 136 ರನ್‌ಗಳಿಗೆ ಸರ್ವಪತನ ಕಂಡಿದೆ.

ಕಾರ್ಡಿಫ್[ಜೂ.01]: ನಾಯಕ ದೀಮುತ್ ಕರುಣರತ್ನೆ ಅಜೇಯ ಅರ್ಧಶತಕದ ಹೊರತಾಗಿಯೂ ನ್ಯೂಜಿಲೆಂಡ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ 136 ರನ್ ಗಳಿಗೆ ಸರ್ವಪತನ ಕಂಡಿದೆ. ಮ್ಯಾಟ್ ಹೆನ್ರಿ, ಲೂಕಿ ಫರ್ಗ್ಯೂಸನ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಲಂಕಾ ಕುಸಿತಕ್ಕೆ ಕಾರಣರಾದರು.

ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ಮೊದಲ ಓವರ್’ನಲ್ಲೇ ಲಾಹಿರೂ ತಿರುಮನ್ನೆ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆ ಬಳಿಕ ಎರಡನೇ ವಿಕೆಟ್’ಗೆ ದೀಮುತ್ ಕರುಣರತ್ನೆ-ಕುಸಾಲ್ ಪೆರೆರಾ ಜೋಡಿ 42 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಪೆರೆರಾ ಕೇವಲ 24 ಎಸೆತಗಳಲ್ಲಿ 4 ಬೌಂಡರಿ ಸಹಿತ 29 ರನ್ ಬಾರಿಸಿ ಮ್ಯಾಟ್ ಹೆನ್ರಿಗೆ ಎರಡನೇ ಬಲಿಯಾದರು. ಮರು ಎಸೆತದಲ್ಲೇ ಕುಸಾಲ್ ಮೆಂಡಿಸ್ ಕೂಡಾ ಶೂನ್ಯ ಸುತ್ತಿ ಹೆನ್ರಿಗೆ ಮೂರನೇ ಬಲಿಯಾದರು. ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್’ಮನ್ ಕೂಡಾ ಹೊಣೆ ಅರಿತು ಬ್ಯಾಟ್ ಬೀಸಲಿಲ್ಲ. ಪರಿಣಾಮ 60 ರನ್’ಗಳಿಗೆ ಲಂಕಾ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಲಂಕಾ ಬ್ಯಾಟ್ಸ್’ಮನ್’ಗಳನ್ನು ನೆಲೆಯೂರದಂತೆ ಮಾಡಲು ಲೂಕಿ ಫರ್ಗ್ಯೂಸನ್ ಯಶಸ್ವಿಯಾದರು.

ಆಸರೆಯಾದ ಪೆರೆರಾ: ನಿರಂತರ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡಿದ ನಾಯಕ ಕರುಣರತ್ನೆ ಎಚ್ಚರಿಕೆ ಆಟವಾಡಿದರು. ಆರಂಭಿಕನಾಗಿ ಕಣಕ್ಕಿಳಿದ ಕೊನೆಯವರೆಗೂ ಬ್ಯಾಟ್ ಬೀಸಿದರು. 84 ಎಸೆತಗಳಲ್ಲಿ 4 ಬೌಂಡರಿ ಸಹಿತ 52 ರನ್ ಬಾರಿಸಿ ಅಜೇಯರಾಗುಳಿದರು. ಕೆಳ ಕ್ರಮಾಂಕದಲ್ಲಿ ತಿಸಾರ ಪೆರೆರಾ 27 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 110ರ ಗಡಿ ದಾಟಿಸಲು ನೆರವಾದರು. ಪೆರೆರಾ ವಿಕೆಟ್ ಬೀಳುತ್ತಿದ್ದಂತೆ ಬಾಲಂಗೋಚಿಗಳು ಹೆಚ್ಚುಹೊತ್ತು ಕ್ರೀಸ್’ನಲ್ಲಿ ಉಳಿಯಲಿಲ್ಲ. ಕುಸಾಲ್ ಪೆರೆರಾ, ತಿಸಾರಾ ಪೆರೆರಾ ಹಾಗೂ ದೀಮುತ್ ಕರುಣರತ್ನೆ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ತಲುಪಲು ಸಫಲರಾಗಲಿಲ್ಲ. 

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ: 136/10

ದೀಮುತ್ ಕರುಣರತ್ನೆ: 52*

ಲೂಕಿ ಫರ್ಗ್ಯೂಸನ್: 22/3
 

click me!