ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಡ್ಮಿಂಟನ್‌ ಕೋರ್ಟ್ ಸಿದ್ಧ

By Kannadaprabha NewsFirst Published Aug 27, 2019, 8:32 AM IST
Highlights

ಜಯನಗರ ಈಗ ಉತ್ತಮ ಕ್ರೀಡಾ ತಾಣವಾಗುತ್ತಿದ್ದು, ಸುಸಜ್ಜಿತ ನೂತನ ಅಂತಾರಾಷ್ಟ್ರೀಯ ಮಟ್ಟದ ಶೆಟ್ಟಲ್‌ ಬ್ಯಾಡ್ಮಿಂಟನ್‌ ಸಂಕೀರ್ಣ ತಲೆ ಎತ್ತಿದೆ. 

ಬೆಂಗಳೂರು [ಆ.27]:  ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಪ್ರತಿನಿಧಿಸುವ ಜಯನಗರ ಈಗ ಉತ್ತಮ ಕ್ರೀಡಾ ತಾಣವಾಗುತ್ತಿದ್ದು, ಸುಸಜ್ಜಿತ ನೂತನ ಅಂತಾರಾಷ್ಟ್ರೀಯ ಮಟ್ಟದ ಶೆಟ್ಟಲ್‌ ಬ್ಯಾಡ್ಮಿಂಟನ್‌ ಸಂಕೀರ್ಣ ತಲೆ ಎತ್ತಿದೆ. ಅಷ್ಟೇ ಅಲ್ಲ, ಅತ್ಯಾಧುನಿಕ ರೀತಿಯ ಮಲ್ಟಿಜಿಮ್‌ ಸೌಲಭ್ಯ ಕೂಡ ಸಿದ್ಧವಾಗಿದ್ದು, ಆ.28ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ಉದ್ಘಾಟನೆಯಾಗಲಿದೆ.

ಶ್ರೀ ಶಿವಕುಮಾರಸ್ವಾಮಿ ಅವರ ಹೆಸರಿನ ಈ ಕ್ರೀಡಾ ಸಂಕೀರ್ಣಗಳು ಬೆಂಗಳೂರು ದಕ್ಷಿಣ ಭಾಗದ ಹೃದಯ ಎಂದೇ ಕರೆಯುವ ಕೃಷ್ಣರಾವ್‌ ಉದ್ಯಾನದಲ್ಲಿದೆ. ಈತನಕ ಅನೈತಿಕ ಚಟುವಟಿಕೆಗಳ ತಾಣವೂ ಮತ್ತು ಕಸದ ರಾಶಿ ಹಾಕುವ ಕಲುಷಿತ ಜಾಗವೂ ಆಗಿದ್ದ ಈ ಉದ್ಯಾನ ಈಗ ಮೇಯರ್‌ ಗಂಗಾಂಬಿಕೆ ಅವರ ಅಭಿವೃದ್ಧಿ ಯೋಜನೆಗಳ ಬಳಿಕ ತನ್ನ ಸ್ವರೂಪವನ್ನೇ ಬದಲಿಸಿಕೊಂಡಿದೆ. ಇದರಿಂದ ದಿವಾನರಾಗಿದ್ದ ಸರ್‌.ಎಂ.ಎನ್‌.ಕೃಷ್ಣರಾವ್‌ ಗೌರವವೂ ಹೆಚ್ಚಾದಂತಾಗಿದೆ. ಉದ್ಯಾನದಲ್ಲಿ ಈಗ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಂದೇಶ ಸಾರುವ ಸುಂದರ ಪುತ್ಥಳಿಯನ್ನು ಸ್ಥಾಪಿಸಲಾಗಿದೆ.

ಕಾಂಗ್ರೆಸ್‌ಗೆ ಭಾರತ ’ನಮ್ಮ' ದೇಶವಲ್ಲ 'ನಿಮ್ಮದು’..!

ಕ್ರೀಡಾ ಸಂಕೀರ್ಣದ ವಿಶೇಷಗಳು:  ಕೃಷ್ಣಾರಾವ್‌ ಉದ್ಯಾನದಲ್ಲಿ ನಿತ್ಯ 1000ಕ್ಕೂ ಹೆಚ್ಚು ಮಂದಿ ವಿವಿಧ ಸಮಯದಲ್ಲಿ ವಾಕಿಂಗ್‌ ಮತ್ತು ನಾನಾ ರೀತಿಯ ಕ್ರೀಡೆಗಳಿಗೆ ಬರುತ್ತಿದ್ದು, ಇದನ್ನು ಗಮನಿಸಿದ ಮೇಯರ್‌ ಗಂಗಾಂಬಿಕೆ ಇಲ್ಲಿ ಒಲಿಂಪಿಕ್ಸ್‌ ಆಟಗಾರರನ್ನು ಸಿದ್ಧಗೊಳಿಸುವ ಸುಸಜ್ಜಿತ ಶೆಟ್ಟಲ್‌ ಬ್ಯಾಡ್ಮಿಂಟನ್‌ ಕ್ರೀಡಾಂಗಣ ನಿರ್ಮಿಸಿದ್ದಾರೆ. ಇದರಲ್ಲಿ 5 ಕೋರ್ಟ್‌ಗಳಿದ್ದು, ಏಕಕಾಲದಲ್ಲಿ 20 ಮಂದಿ ಪಂದ್ಯಾಗಳನ್ನು ಆಡಬಹುದು. ಮರದ ನೆಲಹಾಸುವಿನ ಮೇಲೆ ಸಿಂಥಟಿಕ್‌ ಟ್ರಾಕ್‌ಗಳನ್ನು ಹಾಕಿ ಜರ್ಮನ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಈ ಸೌಲಭ್ಯ ಸದ್ಯ ಬಿಬಿಎಂಪಿಯ ಯಾವುದೇ ಕ್ರೀಡಾಂಗಣಗಳಲ್ಲೂ ಇಲ್ಲ.

ವಿನೂತನ ಮಲ್ಟಿಜಿಮ್‌:  ಕ್ರೀಡಾ ಸಂಕೀರ್ಣದ ಒಳಗೆ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅತ್ಯಾಧುನಿಕ ರೀತಿಯ ಮಲ್ಟಿಜಿಮ್‌ ನಿರ್ಮಿಸಲಾಗಿದೆ. ಸುಧಾರಿತ ತಂತ್ರಜ್ಞಾನದ ವಿದೇಶಗಳಿಂದ ಆಮದು ಮಾಡಿಕೊಂಡಿರುವ ಉಪಕರಣಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ದೇಹದಾಢ್ರ್ಯ ಮಾತ್ರವಲ್ಲದೆ ಅನೇಕ ರೀತಿಯ ಆರೋಗ್ಯ ವೃದ್ಧಿಯ ವ್ಯಾಯಾಮಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಉದ್ಯಾನದಲ್ಲಿ ಬ್ಯಾಸ್ಕೆಟ್‌ ಬಾಲ್‌ ಕ್ರೀಡೆಯ ಒಳಾಂಗಣ ಸಂಕೀರ್ಣ ನಿರ್ಮಿಸುವ ಚಿಂತನೆಯಿದೆ. ಉದ್ಯಾನದಲ್ಲಿ ಬ್ಯಾಸ್ಕೆಟ್‌ ಬಾಲ್‌, ಮಕ್ಕಳಿಗೆ ಪ್ರತ್ಯೇಕ ಆಟೋಟ ವ್ಯವಸ್ಥೆ, ಒಪನ್‌ ಜಿಮ್‌ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಜಿಮ್‌ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ, ಮಾನವ ಚದುರಂಗ ಆಟ. ಅಂದರೆ ಆಟಗಾರರೇ ಚದುರಂಗದ ಪಾನ್‌ಗಳಾಗಿ ಆಟ ಪಾತ್ರ ವಹಿಸಬೇಕಾಗುತ್ತದೆ. ಇದರಿಂದ ಆಟಗಾರರಿಗೆ ಬೌದ್ಧಿಕ ಮತ್ತು ಬೌದ್ಧಿಕ ಆರೋಗ್ಯ ವೃದ್ಧಿಗೆ ನೆರವಾಗಲಿದೆ. ವಾಯು ವಿಹಾರಕ್ಕೆ ಬರುವವರಿಗೆಂದೇ ಇಲ್ಲಿನ 75 ವರ್ಷಗಳ ಇತಿಹಾಸ ಇರುವ ಹಳೇ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಿ ಯುವ ಓದುಗರನ್ನೂ ಆಕರ್ಷಿಸುವಂತೆ ಮಾಡಲಾಗಿದೆ.

ನಮ್ಮ ವಾರ್ಡಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶೆಟಲ್‌ ಬ್ಯಾಡ್ಮಿಂಟನ್‌ ಕ್ರೀಡಾ ಸಂಕೀರ್ಣ, ಮಲ್ಟಿಜಿಮ್‌ ನಿರ್ಮಿಸಿರುವದರಿಂದ ಬಸವನಗುಡಿ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಜನರಿಗೆ ಕ್ರೀಡಾ ಸೌಲಭ್ಯ ಸಿಗಲಿದೆ. ಸದ್ಯದಲ್ಲೇ ಒಳಾಂಗಣ ಬ್ಯಾಸ್ಕೆಟ್‌ ಬಾಲ್‌ ಕ್ರೀಡಾಂಗಣ ನಿರ್ಮಿಸುವ ಚಿಂತನೆಯೂ ಇದೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಬಿಬಿಎಂಪಿ ಮೇಯರ್‌.

click me!