ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ಗೆ ಪ್ರತಿಷ್ಠಿತ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗರಿ

By Kannadaprabha News  |  First Published Apr 29, 2024, 10:54 AM IST

ಭಾನುವಾರ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದ ಬಳಿಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಮಿತಿ ಸದಸ್ಯ ಸ್ವಪ್ನಿಲ್ ಅವರು ಗಿನ್ನಿಸ್ ರೆಕಾರ್ಡ್ ಅನ್ನು ಘೋಷಣೆ ಮಾಡಿ, ಕುಂಡ್ಯೋಳಂಡ ತಂಡಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನ ದಾಖಲೆ ಹಸ್ತಾಂತರ ಮಾಡಿದರು.


- ವಿಘ್ನೇಶ್‌ ಎಂ. ಭೂತನಕಾಡು, ಕನ್ನಡಪ್ರಭ

ಮಡಿಕೇರಿ(ಏ.29): ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕಳೆದ 30 ದಿನಗಳಿಂದ ನಡೆದ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ಗೆ ವಿಶ್ವದ ಪ್ರಸಿದ್ಧ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೌರವ ದೊರಕಿದೆ. 24ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಬಹುದೊಡ್ಡ ಸಂಭ್ರಮ ಇದಾಗಿದ್ದು, ಈಗ ಕೊಡಗಿನ ಕೌಟುಂಬಿಕ ಹಾಕಿ ಉತ್ಸವ ವಿಶ್ವದ ಗಮನ ಸೆಳೆದಿದೆ.

Latest Videos

undefined

ಭಾನುವಾರ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದ ಬಳಿಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಮಿತಿ ಸದಸ್ಯ ಸ್ವಪ್ನಿಲ್ ಅವರು ಗಿನ್ನಿಸ್ ರೆಕಾರ್ಡ್ ಅನ್ನು ಘೋಷಣೆ ಮಾಡಿ, ಕುಂಡ್ಯೋಳಂಡ ತಂಡಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನ ದಾಖಲೆ ಹಸ್ತಾಂತರ ಮಾಡಿದರು. ಈ ಸಂದರ್ಭ ಕ್ರೀಡಾಪ್ರೇಮಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ವಿಶ್ವದಲ್ಲಿಯೇ ಒಂದೇ ಒಂದು ಮೈದಾನದಲ್ಲಿ ಒಂದೇ ಒಂದು ಸಮುದಾಯದವರು ಅತಿ ಹೆಚ್ಚು ತಂಡಗಳಲ್ಲಿ ಹಾಕಿ ಆಡುವ ಮೂಲಕ ಅತಿ ಹೆಚ್ಚು ದಿನ ಆಡಿದ ಕ್ರೀಡೆ ಎಂದು ಗಿನ್ನಿಸ್ ಬುಕ್ಕ್ ನಲ್ಲಿ ರೆಕಾರ್ಡ್ ದಾಖಲಾಗಿದೆ.

ಸುಮಾರು ರು.2 ಕೋಟಿ ವೆಚ್ಚದಲ್ಲಿ ಈ ವರ್ಷ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಯಶಸ್ವಿಯಾಗಿ ನಡೆದಿದೆ. ಗಿನ್ನಿಸ್ ರೆಕಾರ್ಡ್ ಹಿನ್ನೆಲೆಯಲ್ಲಿ ಕುಂಡೋಳಂಡ ಕುಟುಂಬಸ್ಥರು ಸೇರಿದಂತೆ ಹಾಕಿ ಪ್ರೇಮಿಗಳು ಮೈದಾನದಲ್ಲಿ ಕೊಡವ ಸಾಂಪ್ರದಾಯಿಕ ವಾಲಗಕ್ಕೆ ಕುಣಿದು ಕುಪ್ಪಳಿಸುವ ಸಂಭ್ರಮಿಸಿದರು. ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಸಮಿತಿ ಹಾಗೂ ಕುಟುಂಬಸ್ಥರಿಗೆ ಅಭಿನಂದನೆಗಳ ಮಹಪೂರವೇ ಹರಿದುಬಂದಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮಂದಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು. ಮೈದಾನದ ಗ್ಯಾಲರಿ ತುಂಬೆಲ್ಲ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.

ಕುಂಡೋಳಂಡ ಹಾಕಿ ಉತ್ಸವದಲ್ಲಿ ಸುಮಾರು 360 ಕುಟುಂಬಗಳ 3 ಸಾವಿರಕ್ಕೂ ಅಧಿಕ ಹಾಕಿ ಆಟಗಾರರು ಪಾಲ್ಗೊಳ್ಳುವ ಮೂಲಕ ದಾಖಲೆ ಮಾಡಿತ್ತು. 30 ದಿನಗಳು ಕೊಡವ ಹಾಕಿ ಅಕಾಡೆಮಿ ಸಹಕಾರದಲ್ಲಿ ಹಾಕಿ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕೊಡಗಿನಲ್ಲಿ ಕೌಟುಂಬಿಕ ಹಾಕಿ ಕ್ರೀಡೆ ಮಾತ್ರವಲ್ಲ. ಅದು ಮೂಲೆ ಮೂಲೆಗಳಲ್ಲಿ ಹಂಚಿ ಹೋಗಿರುವ ಕುಟುಂಬವನ್ನು ಒಗ್ಗೂಡಿಸುತ್ತದೆ. ಅದು ಇಂದಿನ ದಿನಗಳಲ್ಲಿ ಉತ್ಸವವಾಗಿ ಒಂದು ತಿಂಗಳ ಕಾಲ ನಡೆಯುತ್ತಿದೆ. ಸುಮಾರು ಒಂದು ತಿಂಗಳ ಕಾಲ ನಡೆಯುವುದರಿಂದ ಇದು ಉತ್ಸವವಾಗಿ ಮಾರ್ಪಾಡಾಗಿದೆ.

2001ರಲ್ಲಿ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ನೆಲ್ಲಮಕ್ಕಡ ಹಾಕಿ ಉತ್ಸವದ ಸಂದರ್ಭದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿತ್ತು. ಅಂದು ಸುಮಾರು 226 ಕುಟುಂಬಗಳು ಪಂದ್ಯದಲ್ಲಿ ಪಾಲ್ಗೊಂಡಿತ್ತು.

ಕುಂಡ್ಯೋಳಂಡ ಕುಟುಂಬ ಆಯೋಜಿಸಿದ್ದ 24ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ವಿಶ್ವದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದೊರಕಿರುವುದು ಹೆಮ್ಮೆಯ ವಿಷಯ. ಈ ಶ್ರಮಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಕೌಟುಂಬಿಕ ಹಾಕಿ ಉತ್ಸವದ ಪರಿಶ್ರಮಕ್ಕೆ ದೊರಕಿದೆ ಬಹುದೊಡ್ಡ ಗೆಲುವಿದು.

- ದಿನೇಶ್ ಕಾರ್ಯಪ್ಪ, ಸಂಚಾಲಕ ಕುಂಡ್ಯೋಳಂಡ ಹಾಕಿ ಕಾರ್ನಿವಲ್

ಹಾಕಿ ಉತ್ಸವ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ

ಪಾಂಡಂಡ ಕುಟ್ಟಪ್ಪ ಒಬ್ಬ ಹಾಕಿ ಪ್ರೇಮಿ. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಸೇವೆಯಿಂದ ನಿವೃತ್ತರಾದ ಬಳಿಕ ತಮ್ಮ ಊರು ಕರಡದಲ್ಲಿ ಗ್ರಾಮದಲ್ಲಿ ನೆಲೆಸಿದರು. ಒಂದು ದಿನ ಅಲ್ಲಿನ ಸಣ್ಣ ಮೈದಾನಗಳಲ್ಲಿ ಕೊಡವ ಮಕ್ಕಳು ದೊಣ್ಣೆ ಹಿಡಿದು ಹಾಕಿ ಆಡುವುದನ್ನು ಕಂಡರು. ಯಾವುದೇ ಟೂರ್ನಮೆಂಟ್ ಇಲ್ಲದೆ ಕೇವಲ ಮನೋರಂಜನೆಗಾಗಿ ಆಟ ಆಡುತ್ತಿದ್ದವರಿಗೆ ತಮ್ಮ ಪ್ರತಿಭೆ ತೋರಲು ಪಂದ್ಯಾವಳಿ ಆಯೋಜಿಸಿದರೆ ಹೇಗೇ? ಎಂಬ ಚಿಂತನೆ ಮೂಡಿತು. 

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಗಣಪತಿ, ಉತ್ತೇಜನ ನೀಡಿದ್ದರು. ಇದರಂತೆ 1997ರಲ್ಲಿ ಪ್ರಥಮ ಬಾರಿಗೆ ಸಹೋದರ ಕಾಶಿ ಅವರೊಂದಿಗೆ ಸೇರಿ ಪಾಂಡಂಡ ಕಪ್ ಹಾಕಿ ಆರಂಭಿಸಲಾಗಿತ್ತು. ಪ್ರಥಮ ವರ್ಷವೇ 60 ಕೊಡವ ಕುಟುಂಬ ತಂಡಗಳು ಪಾಲ್ಗೊಂಡವು. ಅಂದು ಕೇವಲ ರು.50 ಸಾವಿರ ವೆಚ್ಚದಲ್ಲಿ ನಡೆದ ಈ ಪಂದ್ಯಾವಳಿ ಕೇವಲ ಎರಡೇ ವರ್ಷದಲ್ಲಿ ಹಬ್ಬವಾಗಿ ರೂಪುಗೊಂಡಿತು. ನಂತರದ ದಿನಗಳಲ್ಲಿ ಒಂದೊಂದು ಕೊಡವ ಕುಟುಂಬಗಳು ನಾಮುಂದು, ತಾಮುಂದು ಎಂದು ಪಂದ್ಯಾವಳಿಯನ್ನು ಆಯೋಜಿಸಲು ಮುಂದೆ ಬರುತ್ತಿದೆ. ಆದರೆ ಕುಟ್ಟಪ್ಪ ಇಂದು ಇಲ್ಲ. ಆದರೆ ಅವರು ಆರಂಭಿಸಿದ ಹಾಕಿ ಉತ್ಸವ ಪ್ರತಿ ವರ್ಷ ಸಂಭ್ರಮದಿಂದ ನಡೆಯುವ ಮೂಲಕ ಹಾಕಿ ಕ್ರೀಡೆಯ ಉತ್ತೇಜನಕ್ಕೆ ಸಹಕಾರಿಯಾಗಿದೆ.

click me!