ವೇಲ್ಸ್‌, ಚಿಲಿ ತಂಡಗಳ ಹಾಕಿ ವಿಶ್ವಕಪ್‌ ಜರ್ನಿಯೇ ರೋಚಕ! ಸ್ವಂತ ಖರ್ಚಿನಲ್ಲಿ ವಿಶ್ವಕಪ್‌ಗೆ ಆಗಮಿಸಿರುವ ವೇಲ್ಸ್‌

By Kannadaprabha NewsFirst Published Jan 18, 2023, 9:02 AM IST
Highlights

ಚೊಚ್ಚಲ ಬಾರಿಗೆ ಹಾಕಿ ವಿಶ್ವಕಪ್ ಟೂರ್ನಿ ಆಡುತ್ತಿರುವ ವೇಲ್ಸ್ ಹಾಗೂ ಚಿಲಿ ತಂಡಗಳು
ಎರಡೂ ತಂಡಗಳ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲು ವೇತನ ಸಿಗುತ್ತಿಲ್ಲ
ಹಾಕಿಗಾಗಿ ಕೆಲಸ ತೊರೆದ ಚಿಲಿ ತಂಡದ ಆಟಗಾರರು

ಭುವನೇಶ್ವರ(ನ.18): ಚೊಚ್ಚಲ ಬಾರಿಗೆ ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಆಡುತ್ತಿರುವ ವೇಲ್ಸ್‌ ಹಾಗೂ ಚಿಲಿ ತಂಡಗಳ ವಿಶ್ವಕಪ್‌ ಪಯಣದ ಹಿಂದೆ ರೋಚಕ ಕಥೆಗಳಿವೆ. ಎರಡೂ ತಂಡಗಳ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲು ವೇತನ ಸಿಗುವುದಿಲ್ಲ. ಕೇವಲ ಹಾಕಿ ಮೇಲಿರುವ ಪ್ರೀತಿಗಾಗಿ ಆಟಗಾರರು ತಮ್ಮ ವೈಯಕ್ತಿಕ ಬದ್ಧತೆ, ಸಮಸ್ಯೆಗಳನ್ನು ಬದಿಗೊತ್ತಿ ವಿಶ್ವಕಪ್‌ ಆಡಲು ಭಾರತಕ್ಕೆ ಬಂದಿದ್ದಾರೆ.

ಅಂತಾರಾಷ್ಟ್ರೀಯ ಹಾಕಿ ಆಡಲು ಆರಂಭಿಸಿ 128 ವರ್ಷಗಳ ಬಳಿಕ ವೇಲ್ಸ್‌ ತಂಡ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದೆ. ಅಚ್ಚರಿ ಎನಿಸಬಹುದು, ವೇಲ್ಸ್‌ ತಂಡದ ಪರ ಆಡಲು ಆಟಗಾರರೇ ಹಣ ಪಾವತಿಸಬೇಕು. ಎಲ್ಲಾ ಖರ್ಚುಗಳನ್ನು ಆಟಗಾರರೇ ನೋಡಿಕೊಳ್ಳಬೇಕು. ಈಗೀಗ ದೊಡ್ಡ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಕಾರಣ, ಖರ್ಚೂ ಹೆಚ್ಚಾಗಿದೆ ಎಂದು ತಂಡದ ಕೋಚ್‌ ಡೇನಿಯಲ್‌ ನ್ಯೂಕೂಂಬ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಪ್ರತಿ ಆಟಗಾರ ವಾರ್ಷಿಕ ಕನಿಷ್ಠ 1000 ಬ್ರಿಟಿಷ್‌ ಪೌಂಡ್‌(ಅಂದಾಜು 99000 ರು.) ಪಾವತಿಸಬೇಕು. ಕೆಲವರು 2000 ಪೌಂಡ್‌(1.98 ಲಕ್ಷ ರು.)ವರೆಗೂ ನೀಡುತ್ತಾರೆ. ಕೆಲವೊಮ್ಮೆ ಇದೂ ಸಾಕಾಗುವುದಿಲ್ಲವಂತೆ. ವಿಶ್ವಕಪ್‌ ತಂಡದಲ್ಲಿರುವ ಆಟಗಾರರೆಲ್ಲರೂ ಜೀವನೋಪಾಯಕ್ಕಾಗಿ ಉದ್ಯೋಗ, ವ್ಯವಹಾರ ಮಾಡುತ್ತಾರೆ. ವಾರಾಂತ್ಯದಲ್ಲಿ ಎಲ್ಲರೂ ಕಾರ್ಡಿಫ್‌ನಲ್ಲಿ ಸೇರಿ ಅಭ್ಯಾಸ ನಡೆಸಿ ಸೋಮವಾರ ಬೆಳಗ್ಗೆ ಹೊತ್ತಿಗೆ ತಮ್ಮ ತಮ್ಮ ಕೆಲಸಗಳಿಗೆ ವಾಪಸಾಗುತ್ತಾರಂತೆ.

Hockey World Cup: ಹಾರ್ದಿಕ್‌ ವಿಶ್ವಕಪ್‌ನಿಂದ ಔಟ್‌..?

‘ವಿಶ್ವ ರಾರ‍ಯಂಕಿಂಗ್‌ನಲ್ಲಿ ಕೆಲವೇ ವರ್ಷದಲ್ಲಿ 36ರಿಂದ 15ನೇ ಸ್ಥಾನ ತಲುಪಿದ್ದೇವೆ. ನಮ್ಮ ಸರ್ಕಾರ ನೆರವು ನೀಡುತ್ತಿದೆಯಾದರೂ ಅದು ತೀರಾ ಕಡಿಮೆ. ಇದೇ ಕಾರಣಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿ ವಿಮಾನ ಟಿಕೆಟ್‌ ಶುಲ್ಕ, ಹೋಟೆಲ್‌, ಆಹಾರ ಖರ್ಚುಗಳನ್ನು ಸರಿಹೊಂದಿಸುತ್ತಿದ್ದೇವೆ’ ಎಂದು ನ್ಯೂಕೂಂಬ್‌ ನಗುತ್ತಲ್ಲೇ ವಿವರಿಸಿದ್ದಾರೆ.

‘ವಿಶ್ವಕಪ್‌ನಲ್ಲಿ ಆಡಿ ಹಣ ಸಂಪಾದಿಸಲು ನಾವು ಬಂದಿಲ್ಲ. ಹಾಕಿ ಮೇಲಿರುವ ಆಗಾಧ ಪ್ರೀತಿ ನಮ್ಮನ್ನು ಇಲ್ಲಿಗೆ ಕರೆತಂದಿದೆ. ಮೈದಾನಕ್ಕಿಳಿದು ಎದುರಾಳಿಗೆ ಪೈಪೋಟಿ ನೀಡಬೇಕು. ಪಂದ್ಯ ಗೆಲ್ಲಬೇಕು ಎನ್ನುವುದಷ್ಟೇ ನಮ್ಮ ಗುರಿ’ ಎಂದು ನ್ಯೂಕೂಂಬ್‌ ಹೇಳಿದ್ದಾರೆ.

ಹಾಕಿಗಾಗಿ ಕೆಲಸ ತೊರೆದ ಚಿಲಿ ತಂಡದ ಆಟಗಾರರು!

ಚಿಲಿ ತಂಡಕ್ಕೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆಯಾದರೂ ಆಟಗಾರರಿಗೆ ವೇತನ ರೂಪದಲ್ಲಿ ಒಂದು ಬಿಡಿಗಾಸೂ ಸಿಗುವುದಿಲ್ಲ. ತಂಡದ ಹಿರಿಯ ಆಟಗಾರ ಜೋಸ್‌ ಮಾಲ್ಡೊನಾಡೊ ಪ್ರಕಾರ, ಇಡೀ ದೇಶದಲ್ಲಿ ಅಂದಾಜು 500 ಮಂದಿ ಹಾಕಿ ಆಡಬಹುದು. ವಿಶ್ವಕಪ್‌ ತಂಡದಲ್ಲಿರುವ ಆಟಗಾರರ ಪೈಕಿ ಶೇ.80ರಷ್ಟುಮಂದಿ ವಿದ್ಯಾರ್ಥಿಗಳು. ವೈದ್ಯರು, ವಕೀಲರು, ಎಂಜಿನಿಯರ್‌ಗಳು, ಬ್ಯಾಂಕ್‌ ಉದ್ಯೋಗಿಗಳೂ ಸಹ ಇದ್ದಾರೆ. ಇವರಲ್ಲಿ ಅನೇಕರು ಹಾಕಿ ಆಡಲು ಕೆಲಸ ತೊರೆದಿದ್ದಾರೆ. ಇನ್ನೂ ಕೆಲವರು ಸಂಬಳವಿಲ್ಲದೆ ರಜೆ ಪಡೆದು ವಿಶ್ವಕಪ್‌ಗೆ ಬಂದಿದ್ದಾರೆ.

click me!